ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ವಿಶ್ವವಿದ್ಯಾಲಯ ಆವರಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದಿದ್ದ ಪ್ರತಿಭಟನೆ ವೇಳೆ ’ಫ್ರೀ ಕಾಶ್ಮೀರ್’ ಪೋಸ್ಟರ್ ಪ್ರದರ್ಶನ ಮಾಡಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರ ಸೂಚನೆ ಮೇರೆಗೆ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಪೋಸ್ಟರ್ಗಳು ಕಂಡು ಬಂದಿದ್ದು. ಈ ವಿಚಾರ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಇದೀಗ ಬುಧವಾರ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಫ್ರೀ ಕಾಶ್ಮೀರ್ ಎಂದು ಬರೆದ ಪೋಸ್ಟರ್ ಪ್ರದರ್ಶನಗೊಂಡಿದೆ.
ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್), ಎಸ್ಎಫ್ಐ ಸಂಘಟನೆಗಳು ಹಾಗೂ ವಿಶ್ವವಿದ್ಯಾಲಯದ ಸಂಶೋಧಕರ ಸಂಘ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಸಿಎಎ ವಿರುದ್ಧ ಹಾಗೂ ಜೆಎನ್ಯು ವಿವಿಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ನಡೆದ ಹಲ್ಲೆ ಘಟನೆಯನ್ನು ಖಂಡಿಸಿಸಲಾಗಿತ್ತು. ಈ ವೇಳೆ ಪ್ರೀ ಕಾಶ್ಮೀರ್ ಪೋಸ್ಟಾರ್ ಗಳು ರಾರಾಜಿಸಿದ್ದವು.
ಈ ಹಿನ್ನಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ನಿರ್ದೇಶನದ ಮೇರೆಗೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದ್ದು, ಪ್ರತಿಭಟನೆಯಲ್ಲಿ ಭಾಗಿಯಾದವರು ಮತ್ತು ಫ್ರೀ ಕಾಶ್ಮೀರ್ ಪ್ಲೆಕಾರ್ಡ್ ಹಿಡಿದುಕೊಂಡಿದ್ದವರ ಗುರುತು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ