
ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಜನಸಾಗರವೇ ಹರಿದುಬರುತ್ತಿ*ದೆ. ದೀಪಾಲಂಕಾರ ನೋಡಲು ವಾಹನ ದಟ್ಟಣೆ ಹೆಚ್ಚುತ್ತಿರುವ ಬೆನ್ನಲ್ಲೇ, ಬೆಳಕಿನ ಹಬ್ಬವನ್ನು ಇನ್ನೂ 10 ದಿನಗಳ ಕಾಲ ಮುಂದುವರಿಸುವ ಯೋಜನೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ದಸರಾ ಕೇವಲ ಒಂದು ಹಬ್ಬವಲ್ಲ, ಕರ್ನಾಟಕದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ವದ ವೇದಿಕೆ ಎಂದು ಅವರು ಹೇಳಿದ್ದಾರೆ.
ದಸರಾ ದೀಪಾಲಂಕಾರ ವೀಕ್ಷಣೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅವಧಿ ವಿಸ್ತರಿಸುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ದಸರಾಕ್ಕೆ ವಿಜಯನಗರ ಸಾಮ್ರಾಜ್ಯದ ಕಾಲದಿಂದ ಅರಸರ ಆಳ್ವಿಕೆಯವರೆಗಿನ ಐತಿಹಾಸಿಕ ಹಿನ್ನೆಲೆಯಿದೆ ಎಂದು ತಿಳಿಸಿದರು. ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕರಾವಳಿಯ ಕಂಬಳದ ಮಹತ್ವವನ್ನೂ ವಿವರಿಸಿದ ಅವರು, ಕೋಣಗಳನ್ನು ಸಾಕುವವರು ಅವುಗಳ ಪೋಷಣೆಗೆ ಸುಮಾರು 15ರಿಂದ 20 ಲಕ್ಷ ರೂಪಾಯಿ ವೆಚ್ಚ ಮಾಡುತ್ತಾರೆ. ಮನೆಯ ಮಕ್ಕಳಂತೆ ಕೋಣಗಳನ್ನು ನೋಡಿಕೊಳ್ಳುತ್ತಾರೆ. ಕಂಬಳದಲ್ಲಿ ಭಾಗವಹಿಸಲು ಸಾವಿರಾರು ಮಂದಿ ಬರುತ್ತಾರೆ; ಲಕ್ಷಾಂತರ ಜನರು ಈ ಸಾಂಪ್ರದಾಯಿಕ ಕ್ರೀಡೆಯನ್ನು ವೀಕ್ಷಿಸುತ್ತಾರೆ ಎಂದು ಹೇಳಿದರು.
ಕಂಬಳದ ಸಂಪ್ರದಾಯದ ಬಗ್ಗೆ ಮಾತನಾಡಿದ ಡಿಕೆಶಿ, ಧಾರ್ಮಿಕ ಆಚರಣೆಗಳು ಮತ್ತು ಕ್ರೀಡೆಯ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಉಲ್ಲೇಖಿಸಿದರು. ಹಿಂದೆ ದೇವರಿಗೆ ಅರ್ಪಿಸಿದ ತೆಂಗಿನಕಾಯಿಯನ್ನು ಕಂಬಳದ ಬಹುಮಾನವಾಗಿ ನೀಡುವ ಪದ್ಧತಿ ಇತ್ತು. ಈಗ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡಲಾಗುತ್ತಿದ್ದು, ಅವುಗಳನ್ನು ಮಾರಾಟ ಮಾಡುವ ಬದಲು ಕುಟುಂಬದ ಮದುವೆ ಸೇರಿದಂತೆ ಶುಭಕಾರ್ಯಗಳಿಗೆ ದಾನವಾಗಿ ನೀಡುವ ಸಂಪ್ರದಾಯವಿದೆ ಎಂದು ವಿವರಿಸಿದರು.
ದಸರಾ ಆಚರಣೆಯಲ್ಲಿ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸುವ ಪ್ರಯತ್ನವನ್ನೂ ಸರ್ಕಾರ ಮಾಡಿದೆ ಎಂದು ತಿಳಿಸಿದ ಅವರು, ಏರ್ ಶೋ ಸೇರಿದಂತೆ ಹಲವು ಆಕರ್ಷಣೆಗಳು ಜನರ ಗಮನ ಸೆಳೆದಿವೆ. ಯುವ ದಸರಾ ಮೂಲಕ ಹೊರರಾಜ್ಯಗಳ ಕಲಾವಿದರಿಗೂ ಅವಕಾಶ ನೀಡಿ, ಯುವಜನರಿಗೆ ಮನರಂಜನೆ ಒದಗಿಸಲಾಗಿದೆ ಎಂದರು.
ಕರ್ನಾಟಕದ ಮೈಸೂರು ಮಾತ್ರವಲ್ಲದೆ, ತುಳುನಾಡು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕೊಡಗು, ತುಮಕೂರು, ಚಾಮರಾಜನಗರ ಮತ್ತು ಶ್ರೀರಂಗಪಟ್ಟಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ದಸರಾ ಆಚರಣೆ ನಡೆಯುತ್ತದೆ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮ ಅಮೂಲ್ಯ ಆಸ್ತಿ. ಇವುಗಳನ್ನು ಉಳಿಸಿ ಬೆಳೆಸಲು ಸರ್ಕಾರ ನಿರಂತರವಾಗಿ ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




