Kannada NewsKarnataka NewsLatest

“ನಾ ಖಾವೂಂಗಾ ನಾ ಖಾನೆ ದೂಂಗಾ” ಪ್ರಧಾನಿಯ ಮಾತಿನ ಅರ್ಥವೇ ಬೇರೆ ಇದೆ: ಸತೀಶ ಜಾರಕಿಹೊಳಿ ವ್ಯಂಗ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ನಾ ಖಾವೂಂಗಾ, ನಾ ಖಾನೆ ದೂಂಗಾ” ಎಂದು ಪ್ರಧಾನಿ ಮೋದಿ 2014 ರಲ್ಲೇ ಹೇಳಿದ್ದರು. ಆ ಮಾತಿನಂತೆ ಈಗ ಅವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ, ಬಡವರಿಗೆ ಊಟಕ್ಕೂ ಅನಾನುಕೂಲವಾಗುವಂತ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.
ಇಲ್ಲಿನ ಶ್ರೀನಗರದ ಸ್ಲಂ ಕಾಲೊನಿಯಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ನಡೆಸಿ, ಅವರು ಮಾತನಾಡಿದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರಿಗಾಗಿ ಏನನ್ನೂ ಮಾಡಿಲ್ಲ. ಅವರು ಕೆಲವೇ ಕೆಲವು ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದ್ದಾರೆ. “ನಾ ಖಾವೂಂಗಾ, ನಾ ಖಾನೆ ದೂಂಗಾ” ಎಂಬ ಅವರ ಮಾತಿನಂತೆ ಈಗ ಬಡವರ ಜೀವನ ದುಸ್ತರವಾಗಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಜನಪರ ಕಾಳಜಿಯಿಂದ ಯೋಜನೆ ರೂಪಿಸಬೇಕು:
ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಜಾರಿಗೊಳಿಸಿದ್ದ ಅನೇಕ ಯೋಜನೆಗಳಿಂದ ಇಂದಿಗೂ ಬಡವರಿಗೆ ಅನುಕೂಲವಾಗುತ್ತಿದೆ. ಸರ್ಕಾರಗಳು ಕೇವಲ ಪ್ರಚಾರಕ್ಕಾಗಿ ಯೋಜನೆಗಳನ್ನು ರೂಪಿಸದೇ, ಜನಪರ ಕಾಳಜಿಯಿಂದ ಯೋಜನೆಗಳನ್ನು ಜಾರಿಗೊಳಿಸಬೇಕು. ಹೀಗಾದಾಗ ಮಾತ್ರ ಜನರು ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸದಾ ಬಡವರ ಪರವಾಗಿರುವ ಪಕ್ಷವಾಗಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಮತದಾರರು ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಸತೀಶ  ಮನವಿ ಮಾಡಿದರು.
ಬಡವರಿಗೆ ಮನೆ ನಿರ್ಮಾಣ:
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಮಾಜಿ ಶಾಸಕ ಫಿರೋಜ್ ಸೇಠ್ ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ನಾನು ಕೂಡ ಉಸ್ತುವಾರಿ ಸಚಿವನಾಗಿದ್ದಾಗ ಫಿರೋಜ್ ಸೇಠ್ ಅವರೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿದ್ದೆ. ಕಣಬರಗಿ ಹಾಗೂ ಶ್ರೀನಗರದಲ್ಲಿ ನಮ್ಮ ಸರ್ಕಾರದಿಂದ ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿತ್ತು. ಮುಂದಿನ ದಿನಗಳಲ್ಲಿ ಶ್ರೀನಗರದ ಸ್ಲಂ ಕಾಲೊನಿಯ ಜನರಿಗೂ ಮನೆಗಳನ್ನು ನಿರ್ಮಿಸಿಕೊಡಲಾಗುವುದು” ಎಂದು ಭರವಸೆ ನೀಡಿದರು.
ಮಾಜಿ ಸಚಿವ ಹಾಗೂ ಶಾಸಕರಾದ ಆರ್.ವಿ. ದೇಶಪಾಂಡೆ, ಮಾಜಿ ಶಾಸಕ ಫಿರೋಜ್ ಶೇಠ್, ಮುಖಂಡರಾದ ರಾಜು ಶೇಠ್, ವೀರಕುಮಾರ ಪಾಟೀಲ, ಎ.ವಿ. ಪಾಟೀಲ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button