
ಪ್ರಗತಿವಾಹಿನಿ ಸುದ್ದಿ: ಶಿರಸಿ: ಸಮಾಜಸೇವೆ, ಮಾನವೀಯ ಕಾರ್ಯಗಳು, ವೃತ್ತಿಪರ ಸಾಧನೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಇಲ್ಲಿನ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ನೀಡುವ ‘ನಮ್ಮನೆ ಪ್ರಶಸ್ತಿ’, ‘ನಮ್ಮನೆ ಯುವ ಪುರಸ್ಕಾರ’ ಹಾಗೂ ‘ನಮ್ಮನೆ ಹಬ್ಬ–15’ರ ವಿಶೇಷ ಗೌರವಕ್ಕೆ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ತಿಳಿಸಿದ್ದಾರೆ.
ಕಲಿತು ಗಳಿಕೆಯಿಲ್ಲದ ಯುವಜನರ ಉದ್ಯೋಗಕ್ಕೆ ವೃತ್ತಿ ಮಾರ್ಗದರ್ಶನ ನೀಡುತ್ತಿರುವ ದತ್ತಗುರು ಹೆಗಡೆ, ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸುತ್ತಿರುವ ರಾಮನಗರದ ಆಶಾ ವಿ. ಅವರಿಗೆ ‘ನಮ್ಮನೆ ಪ್ರಶಸ್ತಿ’, ಸಾಂಸ್ಕೃತಿಕ ಕ್ಷೇತ್ರದಲ್ಲಿ ಐದು ದಶಕಗಳಿಂದ ಅನವರತ ಸೇವೆ ಸಲ್ಲಿಸುತ್ತಿರುವ ಸಪ್ತಕದ ಜಿ.ಎಸ್. ಹೆಗಡೆ ಅವರಿಗೆ ನಮ್ಮನೆ ಹಬ್ಬ ೧೫ರ ವಿಶೇಷ ಗೌರವ ಹಾಗೂ ಬಹುಮುಖಿ ಪ್ರತಿಭೆಯ ಯುವ ಸಾಧಕಿ ಪ್ರಿಯಾಂಕಾ ಪಿ. ಹೆಗಡೆ ಅವರಿಗೆ ‘ನಮ್ಮನೆ ಯುವ ಪುರಸ್ಕಾರ’ ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ತಿಳಿಸಿದ್ದಾರೆ.
ಯುವಶಕ್ತಿಗೆ ಇವರು ದತ್ತ’ಗುರು’:
ಮೂಲತಃ ಶಿರಸಿಯ ಹಂಚಿನಕೆರೆಯ ಎನ್.ವಿ. ಹೆಗಡೆ ಮತ್ತು ಲಲಿತಾ ಹೆಗಡೆ ದಂಪತಿಯ ಪುತ್ರ ದತ್ತಗುರು ಹೆಗಡೆ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವರು. ಕಳೆದ 34 ವರ್ಷಗಳಿಂದ ಸಾಫ್ಟ್ವೇರ್ ಕ್ಷೇತ್ರದಲ್ಲಿ ಸೇವೆ ಮಾಡಿ, ಇನ್ಫೋಸಿಸ್, ಆಕ್ಸೆಂಚರ್, ಮೈಂಡ್ಟ್ರೀ ಹಾಗೂ ಎಂಫಸಿಸ್ ಸಂಸ್ಥೆಗಳಲ್ಲಿ ಹಿರಿಯ ಹುದ್ದೆಗಳನ್ನು ನಿರ್ವಹಿಸಿದ್ದು, ಪ್ರಸ್ತುತ ವಿಪ್ರೋದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ.
ಕಳೆದ 15 ವರ್ಷಗಳಿಂದ ಎರಡು ಸಾವಿರಕ್ಕೂ ಅಧಿಕ ಇಂಜಿನಿಯರಿಂಗ್ ಉದ್ಯೋಗಿಗಳನ್ನು ನಿರ್ವಹಣೆ ಮಾಡುತ್ತಿದ್ದು, ಸಾವಿರಾರು ಯುವ ಶಕ್ತಿಗೆ ವೃತ್ತಿಪರ ಮಾರ್ಗದರ್ಶನ ಮಾಡಿದ್ದಾರೆ. ಇದಕ್ಕಿಂತ ನಮ್ಮ ನೆಲದ ನೂರಾರು ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನಿರುದ್ಯೋಗಿ ಪದವೀಧರರಿಗೆ ಸ್ವತಃ ‘ಗುರು’ವಾಗಿ ಬೇರೆ ಬೇರೆ ಕಂಪನಿಗಲ್ಲಿ ಉದ್ಯೋಗ ಕೊಡಿಸಿದ್ದಾರೆ. ಜೊತೆಗೆ ಪತ್ನಿ ರೇಖಾ ಅವರೊಂದಿಗೆ ವಿದ್ಯಾಪೋಷಕ ಸಂಸ್ಥೆಯ ಮೂಲಕ ಪ್ರತಿವರ್ಷ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಕೊಡುಗೆ ನೀಡುತ್ತಿದ್ದಾರೆ. ವೃತ್ತಿಪರ ಸಾಧನೆ ಹಾಗೂ ಸಮಾಜಮುಖಿ ಸೇವೆಗಾಗಿ ಹವ್ಯಕ ಮಹಾಸಭಾದಿಂದ ‘ಹವ್ಯಕ ಸ್ಪೂರ್ತಿ ರತ್ನ’ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಅನಾಥ ಶವಗಳಿಗೆ ‘ಮುಕ್ತಿ’ದಾತೆ:

ರಾಮನಗರದ ಆಶಾ ವಿ. ನಿರ್ಗತಿಕರು ಹಾಗೂ ವಾರಸುದಾರರಿಲ್ಲದ ಮೂರು ಸಾವಿರಕ್ಕೂ ಅಧಿಕ ಮೃತದೇಹಗಳಿಗೆ ಗೌರವಯುತ ವಿದಾಯ ಹೇಳುವ ಮೂಲಕ ಅಂತ್ಯಸಂಸ್ಕಾರ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಓರ್ವ ಮಹಿಳೆಯಾಗಿ, ಸರಣಿ ಸಂಕಷ್ಟಗಳ ನಡುವೆ ಛಲ ಬಿಡದೇ ಮಾನವೀಯತೆ ಹಾಗೂ ಸಮಾಜಸೇವೆಯ ಅಚಲ ಕನಸಿನೊಂದಿಗೆ ಮೃತದೇಹಗಳ ಅಂತ್ಯಸಂಸ್ಕಾರವನ್ನು ನಡೆಸಿ ಮಾದರಿಯಾಗಿದ್ದಾರೆ.
ಹಲವು ದಶಕಗಳಿಂದ ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾ ಅವರು ಸಾವಿರಾರು ಕೊಳೆತ, ಅನಾಥ ಸ್ಥಿತಿಯಲ್ಲಿದ್ದ ಹೆಣಗಳನ್ನೂ ಪೊಲೀಸರ ಪ್ರಕ್ರಿಯೆ ಬಳಿಕ ಅಂತ್ಯ ಸಂಸ್ಕಾರ ನಡೆಸುತ್ತಿದ್ದಾರೆ. ಸ್ವತಃ ಓಮಿನಿ ಚಲಾಯಿಸಿ ಈ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಕಾಲದಲ್ಲಿ ಜೀವ ಭಯ ಬದಿಗಿಟ್ಟು ಪುಣ್ಯ ಕಾರ್ಯ ಎಂದೇ ಭಾವಿಸಿ ಕೆಲಸ ಮಾಡಿದ್ದಾರೆ.
‘ಸಾವಿರ’ದ ಸಂಗೀತ ಸೇವೆ:
ಸಂಗೀತ ಕ್ಷೇತ್ರದಲ್ಲಿ ಕಳೆದ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಸಪ್ತಕದ ಜಿ.ಎಸ್. ಹೆಗಡೆ ಅವರು ದೇಶದ ವಿವಿಧೆಡೆ ಸಾವಿರಕ್ಕೂ ಅಧಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಸಿದ್ದರ ಜೊತೆಗೆ ಭವಿಷ್ಯದ ಭರವಸೆಯ ಕಲಾವಿದರಿಗೂ ವೇದಿಕೆ ಕಲ್ಪಿಸಿದ್ದಾರೆ.
ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದ ಹೆಗಡೆ ಅವರು, ಸಂಗೀತಾಸಕ್ತರಲ್ಲಿ ಅಭಿರುಚಿ ಬೆಳೆಸುವ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳ ವಿಸ್ತರಣೆಗೆ ದೀರ್ಘಕಾಲದ ಸೇವೆಯನ್ನು ನೀಡುತ್ತಿದ್ದಾರೆ. ಸಣ್ಣ ಸಣ್ಣ ಊರಿನಲ್ಲೂ ಅಂತರಾಷ್ಟ್ರೀಯ ಮಟ್ಟದ ಹೆಸರಾಂತ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸಿದ್ದಾರೆ. ಹೊಸ ಚಿಗುರುಗಳನ್ನೂ ಬೆಳೆಸುತ್ತಿದ್ದಾರೆ.
ಈಗ ಜಿ.ಎಸ್.ಹೆಗಡೆ ದಂಪತಿಗಳು ಸ್ಥಾಪಿತ ಸಾಂಸ್ಕೃತಿಕ ಕನಸಿನ ಸಪ್ತಕ ಸಂಸ್ಥೆಗೆ ಈಗ ೨೦ರ ಸಂಭ್ರಮ. ಹೆಗಡೆ ಅವರಿಗೆ 75ರ ಹರೆಯದಲ್ಲೂ ಯುವ ಉತ್ಸಾಹ. ಸಾಮಾಜಿಕ ದಾನದ ಸೇವೆಗೂ ಇವರು ಸದಾ ಮುಂದು ಎಂಬುದೂ ಉಲ್ಲೇಖನೀಯ.
ಪ್ರಿಯಾಂಕಾಗೆ ಯುವ ಪುರಸ್ಕಾರ:
ಕೀರ್ತನೆ, ಸಂಗೀತ, ಯೋಗ, ಯಕ್ಷಗಾನ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರಿಯಾಂಕಾ ಪಿ. ಹೆಗಡೆ ಅವರು ಶಿರಸಿಯಲ್ಲಿ ಕಾನೂನು ಪದವಿ ಅಭ್ಯಾಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸದ ಜತೆಗೆ ಕಲಿಕೆ, ಕಲಿಸುವಿಕೆ ಹಾಗೂ ಗಳಿಕೆಯಲ್ಲೂ ತೊಡಗಿಸಿಕೊಂಡು ಯುವಜನರಿಗೆ ಪ್ರೇರಣೆಯಾಗಿದ್ದಾರೆ. ಅಗ್ನಿವೀರ ತರಬೇತಿ ನೀಡುತ್ತಿರುವ ರಾಜ್ಯದ ಪ್ರಥಮ ತರಬೇತುಗಾರ್ತಿ ಎಂಬುದು ಹೆಗ್ಗಳಿಕೆ. ಪ್ರಿಯಾಂಕಾ ಅವರ ಬಹುಮುಖಿ ಪ್ರತಿಭೆ ಗುರುತಿಸಿ ‘ನಮ್ಮನೆ ಯುವ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



