Kannada NewsKarnataka NewsNational

*ರಾಜ್ಯೋತ್ಸವದ ದಿನವೇ ಗ್ರಾಹಕರಿಗೆ ನಂದಿನಿ ಶಾಕ್: ಹಾಲು, ಮೊಸರಿನ ಬೆಲೆ ಭಾರಿ ಏರಿಕೆ*

ಪ್ರಗತಿವಾಹಿನಿ ಸುದ್ದಿ: ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ರಾಜ್ಯದ ಜನಸಾಮಾನ್ಯರಿಗೆ ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಲು ಹಾಗೂ ಮೊಸರಿನ ದರವನ್ನು ಪರಿಷ್ಕರಿಸಿದ್ದು, ನೂತನ ದರಗಳು ನವೆಂಬರ್ 1ರಿಂದಲೇ ರಾಜ್ಯಾದ್ಯಂತ ಜಾರಿಗೆ ಬಂದಿವೆ.

ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಜಾನುವಾರುಗಳಿಗೆ ಮೇವು ಮತ್ತು ನೀರಿನ ಅಭಾವ ಉಂಟಾಗಿದೆ. ಇದರ ಪರಿಣಾಮವಾಗಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಪಶುಗಳ ನಿರ್ವಹಣೆ, ಆಹಾರ ಹಾಗೂ ಔಷಧೋಪಚಾರದ ವೆಚ್ಚ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿನ ಖರೀದಿ ದರ ಹೆಚ್ಚಿಸುವಂತೆ ರೈತರಿಂದ ಬೇಡಿಕೆ ವ್ಯಕ್ತವಾಗಿತ್ತು.

ಈ ಬೇಡಿಕೆಯನ್ನು ಪರಿಗಣಿಸಿರುವ ಸರ್ಕಾರ, ಪ್ರತಿ ಲೀಟರ್ ಹಾಲಿನ ಮಾರಾಟ ದರದಲ್ಲಿ 8 ರೂಪಾಯಿ ಹೆಚ್ಚಳಕ್ಕೆ ನಿರ್ಧರಿಸಿದೆ. ಹೆಚ್ಚುವರಿ ಮೊತ್ತದಲ್ಲಿ 7 ರೂಪಾಯಿ ರೈತರಿಗೆ ತಲುಪಲಿದ್ದು, ಒಂದು ರೂಪಾಯಿಯನ್ನು ಹಾಲು ಒಕ್ಕೂಟದ ನಿರ್ವಹಣೆಗೆ ಮೀಸಲಿಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.

ಹಾಲಿನ ಪರಿಷ್ಕೃತ ದರಗಳು ಹೀಗಿವೆ

– ಟೋನ್ಡ್ ಹಾಲು (ಬ್ಲೂ ಪ್ಯಾಕೆಟ್): ₹46ರಿಂದ ₹54ಕ್ಕೆ.

– 

– ಹೋಮೋಜಿನೈಸ್ ಟೋನ್ಡ್ ಹಾಲು: ₹47ರಿಂದ ₹56ಕ್ಕೆ.

– 

– ಹೋಮೋಜಿನೈಸ್ ಹಸುವಿನ ಹಾಲು: ₹50ರಿಂದ ₹58ಕ್ಕೆ.

– 

– ವಿಶೇಷ ಟೋನ್ಡ್ ಹಾಗೂ ಶುಭಂ ಹಾಲು: ₹52ರಿಂದ ₹64ಕ್ಕೆ.

– ಹೋಮೋಜಿನೈಸ್ ಶುಭಂ ಹಾಲು: ₹53ರಿಂದ ₹65ಕ್ಕೆ.

ಮೊಸರಿನ ದರದಲ್ಲೂ ಭಾರಿ ಹೆಚ್ಚಳ

ಹಾಲಿನ ಜೊತೆಗೆ ನಂದಿನಿ ಮೊಸರಿನ ಬೆಲೆಯನ್ನೂ ಹೆಚ್ಚಿಸಲಾಗಿದೆ. ಒಂದು ಲೀಟರ್ ಮೊಸರಿನ ಪ್ಯಾಕೆಟ್ ದರ ₹54ರಿಂದ ₹68ಕ್ಕೆ ಏರಿಕೆಯಾಗಿದ್ದು, ಬರೋಬ್ಬರಿ ₹14 ಹೆಚ್ಚಳವಾಗಿದೆ. ಅರ್ಧ ಲೀಟರ್ ಮೊಸರಿನ ದರ ₹28ರಿಂದ ₹34ಕ್ಕೆ ಏರಿಕೆಯಾಗಿದೆ.

ಈ ದಿಢೀರ್ ದರ ಏರಿಕೆಯಿಂದ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಮಧ್ಯಮ ಹಾಗೂ ಬಡ ಕುಟುಂಬಗಳ ಮಾಸಿಕ ಬಜೆಟ್ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಪ್ರತಿದಿನ ಬಳಕೆಯಾಗುವ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಗ್ರಾಹಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದೆಡೆ ಹೈನುಗಾರ ರೈತರಿಗೆ ನೆರವಾಗುವ ಉದ್ದೇಶದಿಂದ ದರ ಹೆಚ್ಚಳ ಮಾಡಲಾಗಿದೆ ಎಂದು ಕೆಎಂಎಫ್ ಹೇಳುತ್ತಿದ್ದರೆ, ಮತ್ತೊಂದೆಡೆ ಗ್ರಾಹಕರಿಗೆ ಮಾತ್ರ ಬೆಲೆ ಏರಿಕೆಯ ಹೊರೆ ಬೀಳುವಂತಾಗಿದೆ.

Related Articles

Back to top button