Kannada NewsKarnataka NewsLatest

ನರಸಿಂಹಲು ಇನ್ನಿಲ್ಲ ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸಮಯದಲ್ಲಿ ಸಂಪುಟ ಸಭಾಂಗಣದ ಮುಂದೆ ದ್ವಾರಪಾಲಕನಾಗಿ ಬಾಗಿಲು ಕಾಯುತ್ತಿದ್ದ ನರಸಿಂಹಲು ಇನ್ನಿಲ್ಲ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಡಿ ಗುಂಪಿನ ನೌಕರರಾಗಿ ವಿಧಾನ ಸೌಧದ ಸಮ್ಮೇಳನ ಸಭಾಂಗಣ ಹಾಗೂ ಸಮಿತಿ ಕೊಠಡಿಯಲ್ಲಿ ನಡೆಯುತ್ತಿದ್ದ ಸಚಿವ ಸಂಪುಟ ಸಭೆ ಮತ್ತು ಇತರೆ ಪ್ರಮುಖ ಸಭೆಗಳ ಸಂದರ್ಭದಲ್ಲಿ ಗಣ್ಯಾತಿಗಣ್ಯರಿಗೆ  ಕುಡಿಯುವ ನೀರು ತಂದು ಕೊಡುವುದೂ ಒಳಗೊಂಡಂತೆ ಆತಿಥ್ಯ ಸೇವೆ ಸಲ್ಲಿಸುತ್ತಿದ್ದ ನರಸಿಂಹಲು ಅವರು ಇಂದು ಸಂಜೆ ಸುಮಾರು 4 ಗಂಟೆ ಸಮಯಕ್ಕೆ ಮನೆಯಲ್ಲಿಯೇ ಮೃತಪಟ್ಟರು. 

ಇಂದು ಬೆಳಿಗ್ಗೆ ಸಮ್ಮೇಳನ ಸಭಾಂಗಣದಲ್ಲಿ ನಡೆದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರ ಕಾರ್ಯಕ್ರಮದಲ್ಲೂ ಎಂದಿನಂತೆ ಲವಲವಿಕೆಯಿಂದ ಕಾಣಿಸಿಕೊಂಡಿದ್ದ ನರಸಿಂಹಲು ಅವರು ದಿಡೀರ್ ಬಳಲಿಕೆಗೆ ತುತ್ತಾಗಿ ಮಧ್ಯಾಹ್ನ ಮನೆಗೆ ತೆರಳಿದ್ದರು. ಸಂಜೆ ನಾಲ್ಕು ಗಂಟೆ ವೇಳೆಗೆ ಮನೆಯಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು.

ನರಸಿಂಹಲು ನಿಧನಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತಾಪ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಡಿ ಗುಂಪಿನ ನೌಕರ ನರಸಿಂಹಲು ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸದಾ ಲವಲವಿಕೆಯಿಂದ ಕೆಲಸ ನಿರ್ವಹಿಸುತ್ತಿದ್ದ ನರಸಿಂಹಲು ಅವರು, ಉತ್ತಮ ಆತಿಥ್ಯ ನೀಡುತ್ತಿದ್ದರು ಎಂದು ಸ್ಮರಿಸಿದರು. ಕಳೆದ ವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳ ಎರಡು ದಿನಗಳ ಸಭೆಯಲ್ಲಿ ನನ್ನನ್ನು ಆತ್ಮೀಯವಾಗಿ ಸತ್ಕರಿಸಿದ್ದರು. ನನಗೆ ಸಮಯಕ್ಕೆ ಸರಿಯಾಗಿ ಕುಡಿಯಲು ಬಿಸಿ ನೀರು ತಂದುಕೊಡುತ್ತಿದ್ದ ನರಸಿಂಹಲು, ಇತರ ಸಚಿವರ, ಶಾಸಕರ, ಅಧಿಕಾರಿಗಳ ಮೆಚ್ಚುಗೆಗೆ ಸಹ ಪಾತ್ರರಾಗಿದ್ದರು.  ನರಸಿಂಹಲು ಅವರ ಅಗಲಿಕೆಯಿಂದ ನಾನು ಓರ್ವ ಕುಟುಂಬ ಸದಸ್ಯನನ್ನು ಕಳೆದುಕೊಂಡಂತಾಗಿದೆ ಎಂದು ಸಚಿವರು ದುಃಖ ವ್ಯಕ್ತ ಪಡಿಸಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕುಟುಂಬ ಸದಸ್ಯರಿಗೆ ನೀಡಲಿ ಎಂದು ಸಚಿವರು ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

Back to top button