For Rent- Torgal
Emergency Service

ಚರ್ಮಗಂಟು ರೋಗ ವಿವಿಧ ತಾಲೂಕುಗಳಿಗೆ ಪಶುವೈದ್ಯಾಧಿಕಾರಿಗಳ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಗೋಕಾಕ, ಮೂಡಲಗಿ ಮತ್ತು ರಾಯಭಾಗ ತಾಲೂಕಿನ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಲಂಪಿ ಸ್ಕಿನ್ ಡಿಸೀಜ್ ಸಾಂಕ್ರಾಮಿಕ ಕಾಯಿಲೆ ವರದಿಯಾಗಿರುವುದರಿಂದ ಕಾಯಿಲೆಯನ್ನು ದೃಢಿಕರಿಸಲು ಉಪನಿರ್ದೇಶಕರಾದ ಡಾ. ರಾಜೀವ ಕೂಲೇದ, ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಡಾ. ಮೊಹನ ಕಮತಿ, ಮುಖ್ಯ ಪಶುವೈದ್ಯಾಧಿಕಾರ, ಪಶು ಆಸ್ಪತ್ರೆ, ಗೋಕಾಕ ಇವರೊಂದಿಗೆ ಗೋಕಾಕ ತಾಲ್ಲೂಕಿನ ರಾಜಾಪುರ ಗ್ರಾಮದ ಮೇಟಿ ತೋಟಕ್ಕೆ ಸೆ.೧೦ ೨೦೨೩ ರಂದು ಭೇಟಿ ನೀಡಿ ಜಾನುವಾರುಗಳಲ್ಲಿ ಕಂಡುಬಂದಿರುವ ಚರ್ಮಗಂಟು ರೋಗದ ಕುರಿತು ರೈತರೊಂದಿಗೆ ಚರ್ಚಿಸಿದರು.


ಮೆಲ್ನೋಟಕ್ಕೆ ಇದು ಸೌಮ್ಯ ಪ್ರಮಾಣವಾಗಿದ್ದು ಭಾದಿತ ಜಾನುವಾರುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಗುಣಮುಖವಾಗುತ್ತಿವೆ, ರೋಗ ಕಂಡ ತಕ್ಷಣ ಜಾನುವಾರುಗಳ ಚಿಕಿತ್ಸೆಗಾಗಿ ಹತ್ತಿರದ ಪಶುವೈದ್ಯರನ್ನು ಕೂಡಲೇ ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು.
ರೋಗವು ೨೦೨೨-೨೩ ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕಂಡುಬಂದು ಹೆಚ್ಚಿನ ಜಾನುವಾರುಗಳು ತೀವ್ರತರವಾದ ಕಾಯಿಲೆಯಿಂದ ಬಳಲಿದ್ದವು. ಆದರೆ, ಈಗ ಕಂಡುಬಂದಿರುವ ಚರ್ಮಗಂಟು ರೋಗವು ಮೇಲ್ನೋಟಕ್ಕೆ ಸೌಮ್ಯ ಪ್ರಮಾಣವಾಗಿದ್ದು ಜಾನುವಾರುಗಳು ಚಿಕಿತ್ಸೆಗೆ ಸ್ಪಂದಿಸುತ್ತಿವೆ. ಆದರೂ ಹೆಚ್ಚಿನ ರೋಗ ಪರೀಕ್ಷೆಗಾಗಿ ನಿವೇದಿ, ಬೆಂಗಳೂರು ಸಂಸ್ಥೆಯ ವಿಜ್ಞಾನಿಗಳಿಂದ ತಪಾಸಣೆ ಕೈಗೊಳ್ಳಲಾಗುವುದೆಂದು ರೈತರಿಗೆ ತಿಳುವಳಿಕೆ ನೀಡಿದರು.
ತಾಲ್ಲೂಕಿನ ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಮುತುವರ್ಜಿವಹಿಸಿ ರೋಗ ನಿಯಂರ್ತಣಕ್ಕೆ ಕ್ರಮಗೊಳ್ಳುವಂತೆ ಹಾಗೂ ರೈತರ ಕರೆಗೆ ತಕ್ಷಣ ಸಂದಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸೆ.೧೪ ೨೦೨೩ ರಂದು ಬೆಂಗಳೂರಿನ ಹಿರಿಯ ವಿಜ್ಞಾನಿಗಳಾದ ಡಾ. ಮಂಜುನಾಥ ರೆಡ್ಡಿ, ನಿವೇದಿ, ರವರು ತಮ್ಮ ತಂಡದೊಂದಿಗೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ರಾಜಾಪುರ, ಬಳೋಬಾಳ, ತುಕ್ಕಾನಟ್ಟಿ ಹಾಗೂ ಮೂಡಲಗಿ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಲ್ಲಿ ಕಂಡುಬಂದಿರುವ ಚರ್ಮಗಂಟು ರೋಗದ ಪರೀಕ್ಷೆ ನಡೆಸಿದರು.
ಹೆಚ್ಚಿನ ರೋಗ ತಪಾಸಣೆಗಾಗಿ ಚಾನುವಾರುಗಳ ರಕ್ತ, ಮೂಗಿನ ಸಾವ ಮತ್ತು ಚರ್ಮಗಂಟಿನ ಮಾದರಿಗಳನ್ನು ಸಂಗ್ರಹಿಸಿದರು. ಬೆಂಗಳೂರಿನ ಹಿರಿಯ ವಿಜ್ಞಾನಿಗಳು, ನಿವೇದಿ, ಡಾ. ಮಂಜುನಾಥ ರೆಡ್ಡಿ, ಇವರ ಜೊತೆಗೆ ಉಪನಿರ್ದೇಶಕರಾದ ರಾಜೀವ ಎನ್, ಲೇಶ ಹಾಗೂ ಡಾ. ರಮೇಶ ದೊಡಮನಿ, ಉಪನಿರ್ದೇಶಕರು, ಜಾನುವಾರು ಕಣ್ಗವಲು ಯೋಜನೆ, ಬೆಂಗಳೂರು, ಇವರು ಉಪಸ್ಥಿತರಿದ್ದರು. ನಂತರ ಗ್ರಾಮದ ರೈತರಿಗೆ ಚರ್ಮಗಂಟು ರೋಗದ ಕುರಿತು ಮಾಹಿತಿ ನೀಡುತ್ತಾ, ಇದು ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಆದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷ್ಯವಾಗಿ ಕಾಣಿಸಿಕೊಳ್ಳುತ್ತದೆ.
ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ(ಸೊಳ್ಳೆ, ನೊಣ, ಇತ್ತಯಾದಿ) ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ.
ರೋಗದ ಲಕ್ಷಣಗಳು
ಅತಿಯಾದ ಜ್ವರ (೧೦೫-೧೮೦ಈ)ಕಣ್ಣುಗಳಿಂದ ನೀರು ಸೋರುವುದು, ನಿಶಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕಂಟುವುದು, ಜಾನುವಾರುಗಳ ಚರ್ಮದ ಮೇಲೆ ೨-೫ ಸೆ.ಮೀನಷ್ಟು ಅಗಲವಿರುವ ಗುಳ್ಳೆ ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ, ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನೊಣಗಳಿಂದ ಹುಳುಗಳು ಬಿದ್ದು ಹುಣ್ಣಾಗುತ್ತದೆ,
ಹಾಲಿನ ಇಳುವರಿ ಕಡಿಮೆಯಾಗುವುದು ಕೆಲಸದ ಸಾಮರ್ಥ್ಯ ಕುಂಠಿತವಾಗುತ್ತದೆ. ಕರುಗಳು ತೀವ್ರವಾಗಿ ಬಳಲಿ ಸಾವಿಗೀಡಾಗಬಹುದು, ಮಿಶ್ರತ ಜರ್ಸಿ ಹೆಚ್.ಎಫ್. ರಾಸುಗಳು ಹಾಗೂ ಕರುಗಳು ಈ ರೋಗದಿಂದ ಹೆಚ್ಚು ಬಳಲುತ್ತವೆ.
ರೋಗ ಹರಡುವಿಕೆ
ಸೊಳ್ಳೆ, ಉಣ್ಣೆ, ನೋಣ ಹಾಗೂ ವಿವಿಧ ಕಚ್ಚುವ ಕೀಟಗಳಿಂದ, ಕಲುಷಿತಗೊಂಡ ನೀರು ಹಾಗೂ ಆಹಾರದಿಂದ, ಜಾನುವರುಗಳ ನೇರ ಸಂಪರ್ಕದಿಂದ, ರೋಗ ಹರಡುವಿಕೆ ಪ್ರಮಾಣ ೧೦-೨೦ ರಷ್ಟು ಹಗೂ ರೋಗದ ಸಾವಿನ ಪ್ರಮಾಣ ೧- ೫ ಇರುತ್ತದೆ.
ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ:
ಈ ರೋಗವು ವೈರಾಣು ರೋಗವಾಗಿರುವುದರಿಂದ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಹಾಗೂ ಈ ರೋಗಕ್ಕೆ ಯಾವುದೇ ಲಸಿಕೆ ಲಭ್ಯವಿರುವುದಿಲ್ಲ,ಜಾನುವಾರುಗಳಿಗೆ ರೋಗದ ಲಕ್ಷಣಗಳ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ,
ದೇಹವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕುವುದು ಹಾಗೂ ತಂಪಾದ ಜಾಗದಲ್ಲಿ ಕಟ್ಟುವುದು ,ತೊಳೆದು ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಶಿಯಂ ಪರಮಾಂಗನೇಟ್ ದ್ರಾವಣದಿಂದ ಐಯೋಡಿನ್ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸುವುದು,ರೋಗ ಹರಡುವುದನ್ನು ತಡೆಯಲು ರೋಗಗ್ರಸ್ಥ ಜಾನುವಾರುಗಳನ್ನು ಬೇರ್ಪಡಿಸುವುದು,ರೋಗಗಸ್ಥ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದು,ಹಸಿರು ಮೇವು, ಪೌಷ್ಟಿಕ ಆಹಾರ ಹಾಗೂ ಲವಣ ಮಿಶ್ರಣ ನೀಡಬೇಕು,ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ದಿನಕ್ಕೆ ೫-೬ ಬಾರಿ ಕುಡಿಸಬೇಕು,
ಕೀಟಗಳ ಹಾವಳಿ ತಪ್ಪಿಸಲು ಹಸಿಬೇವಿನ ಸೊಪ್ಪಿನ ಹೊಗೆ ಹಾಕಬೇಕು,ಈ ರೋಗವು ಸೊಳ್ಳೆ, ಉಣ್ಣೆ, ನೊಣ ಹಾಗೂ ಹರಡುವುದರಿಂದ ಕೊಟ್ಟಿಗೆಯ ಸುತ್ತಮುತ್ತ ಸ್ವಚ್ಛತೆ ಇತರ ಕೀಟಗಳಿಂದ ಮುಖ್ಯವಾಗಿ ಹಾಗೂ ಫಾರ್ಮಾಲಿನ್ (೧%)ಫಿನೈಲ್ (೨೪) ಅಥವಾ ಸೋಡಿಯಂ ಹಾಕ್ಲೋರೈಡ್ (೨೪) ದಿನಕ್ಕೆ ೨ ಬಾರಿ ಸಿಂಪಡಿಸಬೇಕು,ರೋಗಗ್ರಸ್ಥ ಜಾನುವಾರು ಮರಣ ಹೊಂದಿದ್ದಲ್ಲಿ ಆಳವಾದ ಗುಂಡಿಯಲ್ಲಿ ಹೊಳಬೇಕು ಎಂದು ತಿಳಿಸಿದರು.,
ಹೆಚ್ಚಿನ ಮಾಹಿತಿಗಾಗಿ ಅಥವಾ ಚಿಕಿತ್ಸೆಗಾಗಿ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಜಿಲ್ಲಾ ಉಪ ನಿರ್ದೇಶಕರಾದ ಡಾ: ರಾಜೀವ ಎನ್, ಕೂಲೇರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Beereshwara 27
Bottom Ad 1
Bottom Ad 2

You cannot copy content of this page