Karnataka NewsLatestPolitics

*ನರೇಗಾ ಹೆಸರು ಬದಲಿಸಿ ಗಾಂಧೀಜಿ ಹೆಸರಿಗೆ ಕತ್ತರಿ; ಬಿಜೆಪಿ ಅಂತಿಮ ದಿನಗಳು ಆರಂಭ: ಡಿಸಿಎಂ‌ ಡಿ.ಕೆ.ಶಿವಕುಮಾರ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: “ಹುಟ್ಟಿದ ಸೂರ್ಯ ಮುಳುಗಲೇ ಬೇಕು. ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವುದರ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ಕೊನೆಯ ದಿನಗಳು ಪ್ರಾರಂಭವಾಗಿದೆ” ಎಂದು ಡಿಸಿಎಂ‌ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.‌

“ಆರ್ಟಿಕಲ್ 21 ರ ಮೂಲಕ ಸಾಂವಿಧಾನಿಕವಾಗಿ ಕಾಂಗ್ರೆಸ್ ಪಕ್ಷ ನೀಡಿದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ಬಿಜೆಪಿ ಮುಟ್ಟುವ ಧೈರ್ಯ ಮಾಡುತ್ತದೆ ಎಂದುಕೊಂಡಿರಲಿಲ್ಲ. ಆದರೆ ಈಗ ಮನರೇಗಾ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದು ನೋಡಿದರೆ ಬಿಜೆಪಿಯ ಅಂತ್ಯ ಪ್ರಾರಂಭವಾಗಿದೆ ಎಂದು ನನಗೆ ಅನಿಸುತ್ತಿದೆ” ಎಂದರು.

“ಬಡವರಿಗೆ ಕೊಟ್ಟ ಕಾರ್ಯಕ್ರಮದ ಕುತ್ತಿಗೆ ಹಿಸುಕುವ ಕೆಲಸ ಮಾಡಲಾಗುತ್ತಿದೆ. ದೇಶದ ಬಡಜನತೆಗೆ ಎಸಗುತ್ತಿರುವ ದ್ರೋಹವಿದು. ಇದಕ್ಕಿಂತ ದೊಡ್ಡ ಅವಮಾನವಿಲ್ಲ” ಎಂದು ಕಿಡಿಕಾರಿದರು.

Home add -Advt

“ಮುಂಬರುವ 27 ರಂದು ಪಕ್ಷದ ಕಾರ್ಯಕಾರಿಣಿ‌ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಹೆಸರು ಬದಲಾವಣೆ ಹಿಂಪಡೆಯುವ ತನಕ ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಹೋರಾಟ ರೂಪಿಸಲಾಗುವುದು” ಎಂದರು.

ಅತ್ಯುತ್ತಮ ಯೋಜನೆಯನ್ನು ಕೊಲೆ, ಸಮಾಧಿ ಮಾಡಲಾಗಿದೆ

“ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ದೆಹಲಿಯಲ್ಲಿ ಮಂಗಳವಾರ ಸಭೆ ಕರೆದಿದ್ದಾರೆ. ಇಲ್ಲಿ ಇದರ ಬಗ್ಗೆ ಚರ್ಚೆ ನಡೆಸಲಾಗುವುದು. ಕೇಂದ್ರ ಸರ್ಕಾರ ಹೇಳಿದ ಅನುಪಾತದಲ್ಲಿ ಯಾವ ರಾಜ್ಯ ಸರ್ಕಾರವೂ ಹಣ ನೀಡಲು ಸಾಧ್ಯವಿಲ್ಲ. ಈ ರೀತಿ ಆದರೆ ಕಾರ್ಯಕ್ರಮ ಸತ್ತು ಹೋದಂತೆ. ಇದನ್ನು ಸಮಾಧಿ ಮಾಡಲಾಗಿದೆ. ಕೊಲೆ ಮಾಡಲಾಗಿದೆ” ಎಂದರು.

ಸರ್ಕಾರ ಮತ್ತು ಪಕ್ಷ‌ ಒಟ್ಟಾಗಿ ಹೋರಾಡಲಿದೆ

“ಸರ್ಕಾರ ಮತ್ತು ಪಕ್ಷ ಒಟ್ಟಾಗಿ ನರೇಗಾ ಯೋಜನೆಯ ವಿರುದ್ದ ಕೇಂದ್ರ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ವಿರೋಧಿಸಿ ಹೋರಾಟ ಮಾಡುತ್ತೇವೆ. ಇದು ರಾಷ್ಟ್ರೀಯ ವಿಚಾರ. ಈ ದೇಶದ ಗ್ರಾಮ ಪಂಚಾಯತಿಗಳನ್ನು ಸುಭದ್ರಗೊಳಿಸಿದ್ದು ಕಾಂಗ್ರೆಸ್ ಸರ್ಕಾರ. ರಾಜೀವ್ ಗಾಂಧಿ ಅವರು ತಂದ 73,74 ನೇ ತಿದ್ದುಪಡಿ ಮೂಲಕ ಅಧಿಕಾರ ವಿಕೇಂದ್ರೀಕರಣ ಮಾಡಿದರು” ಎಂದರು.

“ಪಂಚಾಯತಿಗೆ, ಮತದಾರರಿಗೆ, ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳಿಗೆ ನೀಡಿರುವ ಹಕ್ಕನ್ನು ಕಾಂಗ್ರೆಸ್ ಪಕ್ಷ ಕಾಪಾಡಲಿದೆ. ಕಾಪಾಡಲು ಹೋರಾಟ ರೂಪಿಸಲಿದೆ. ಇದರ ಬಗ್ಗೆ ರಾಜ್ಯದ ಎಲ್ಲಾ ಗ್ರಾಮಪಂಚಾಯತಿಗಳ ಮುಖಂಡರನ್ನು ಪಕ್ಷಾತೀತವಾಗಿ ಕರೆದು ಅವರ ಬಳಿ ಚರ್ಚೆ ನಡೆಸಲಾಗುವುದು. ಇದರ ಬಗ್ಗೆ ದೊಡ್ಡ ಆಂದೋಲನ ರೂಪಿಸಿ ಜನಾಭಿಪ್ರಾಯ ರೂಪಿಸಲಾಗುವುದು” ಎಂದು ತಿಳಿಸಿದರು.

“ಇದರ ವಿರುದ್ಧ ಜನಾಭಿಪ್ರಾಯ ರೂಪಿಸಲಾಗುವುದು. ಅನ್ಯಾಯದ ಬಗ್ಗೆ ತಿಳಿಸಲಾಗುವುದು. ಹೆಸರು ಬದಲಾವಣೆ ತೀರ್ಮಾನವನ್ನು ವಾಪಸ್ ಪಡೆಯುವ ತನಕ ಹೋರಾಟ ನಡೆಸಲಾಗುವುದು. ಕಾಂಗ್ರೆಸ್ ಪಕ್ಷ ದೇಶದ ಜನಸಾಮಾನ್ಯರ ಪರವಾಗಿ ನಿಲ್ಲಲಿದೆ. ಜನರ ಹಕ್ಕನ್ನು ಕಾಪಾಡುವುದು ನಮ್ಮ ಕರ್ತವ್ಯ. ಚುನಾವಣೆಗಳು ಬರುತ್ತವೆ ಹೋಗುತ್ತವೆ. ಸೋಲು, ಗೆಲುವು ಇದ್ದಿದ್ದೆ” ಎಂದರು.

“ಇಡೀ ಭಾರತದಲ್ಲಿಯೇ ನನ್ನ ಕನಕಪುರ ಕ್ಷೇತ್ರ ಅತಿ ಹೆಚ್ಚು ನರೇಗಾ ಕಾಮಗಾರಿಗಳನ್ನು ನಡೆಸಿದ ಕ್ಷೇತ್ರ. ಇಲ್ಲಿ ಅವ್ಯವಹಾರ ನಡೆದಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರ ತನಿಖಾ ತಂಡವನ್ನು ಕಳುಹಿಸಿತು. ಹತ್ತಾರು ನಿಯೋಗ ಬಂದಿತು. 250-300 ಕೋಟಿ ರೂಪಾಯಿ ಕೆಲಸವನ್ನು ನರೇಗಾ ಮೂಲಕ ಮಾಡಲಾಗಿತ್ತು. 50 ಸಾವಿರ ದನದ ಕೊಟ್ಟಿಗೆಗಳನ್ನು ಕಟ್ಟಲಾಗಿತ್ತು. ಶಾಲಾ ಕಟ್ಟಡ, ಜಮೀನು ಮಟ್ಟ ಮಾಡುವುದು, ಕೃಷಿ ಹೊಂಡ ನಿರ್ಮಾಣ, ನೂರಾರು ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಯಿತು. ಇಲ್ಲಿನ‌ ಕೆಲಸಗಳನ್ನು ನೋಡಿ ನನಗೆ ಎಲ್ಲಿ ಪ್ರಶಸ್ತಿ ನೀಡಬೇಕಾಗುತ್ತದೋ ಎಂದು ಕ್ಷೇತ್ರದ ತಾಲ್ಲೂಕು ಪಂಚಾಯತಿ ಅಧ್ಯಕ್ಷರಿಗೆ ಪ್ರಶಸ್ತಿ ನೀಡಿದರು” ಎಂದರು.

“ಪ್ರತಿಯೊಂದು ಪಂಚಾಯತಿಯಲ್ಲಿಯೂ ಯಾವ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕು ಎಂದು ಚರ್ಚೆ ನಡೆಸಿ ಕೈಗೆತ್ತಿಕೊಳ್ಳಲಾಗುತ್ತಿತ್ತು. ಪ್ರತಿದಿನ ಎನ್ ರೋಲ್ ಮೆಂಟ್ ಇರುತ್ತಿತ್ತು. ಎಷ್ಟು ಮಾನವದಿನ ಕೆಲಸ ನೀಡಬಹುದು ಎಂದು ಯೋಜಿಸಲಾಗುತ್ತಿತ್ತು. ಈಗಿನ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಕೂಲಿ ಹಣವನ್ನೇ ನೀಡುತ್ತಿಲ್ಲ” ಎಂದರು.

ಕೇಂದ್ರ ಸರ್ಕಾರ ಕೊಲೆ ಮಾಡಲು ಹೊರಟಿದೆ

“ಈ ಮೊದಲು ಕೇಂದ್ರ ‌ಹಾಗೂ ರಾಜ್ಯ ಸರ್ಕಾರ ಕ್ರಮವಾಗಿ ಶೇ 90:10 ಅನುಪಾತದಲ್ಲಿ ಅನುದಾನ ನೀಡಬೇಕಿತ್ತು. ಈಗ ಶೇ 60:40 ಅನುಪಾತ ತಂದು ಈ ಯೋಜನೆಯನ್ನು ಸಾಯಿಸಲಾಗುತ್ತಿದೆ. ಮಹಾತ್ಮಾ ಗಾಂಧಿ ಅವರ ಹೆಸರಿ‌ನಲ್ಲಿರುವ ಯೋಜನೆಯನ್ನು ಕೊಲೆ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ. ದೇಶದ ಎಲ್ಲಾ ಪ್ರಜಾ ಪ್ರತಿನಿಧಿಗಳಿಗೆ ಶಾಕಿಂಗ್ ವಿಚಾರ” ಎಂದರು.

“ಬಳ್ಳಾರಿ ಪಾದಯಾತ್ರೆ ಸಮಯದಲ್ಲಿ ಒಂದು ಕಡೆ ಮಹಿಳೆಯರು ಒಂದಷ್ಟು ವಿಚಾರಗಳನ್ನು ಈ ಯೋಜನೆ ಬಗ್ಗೆ ಹೇಳಿದರು. ಆಗ ಸಿ.ಪಿ.ಜೋಶಿ ಸಚಿವರಿದ್ದರು. ಆ ಮಹಿಳೆಯರು ತಿಳಿಸಿದ ವಿಚಾರಗಳನ್ನು ತಿಳಿಸಿ ಬೇರೆಯವರ ಜಮೀನಿನಲ್ಲಿ ಒಂದಷ್ಟು ಜನರಿಗೆ ಕೆಲಸ ಮಾಡಲು ನಾಚಿಕೆ‌ ಇರುತ್ತದೆ ಎಂದು ಸೋನಿಯಾ ಗಾಂಧಿ ಅವರಿಗೆ ಇದರ ಬಗ್ಗೆ ತಿಳಿಸಿದೆ. ಅವರು ಸಚಿವರಿಗೆ ಗಮನಿಸಲು ಸೂಚಿಸಿದರು. ಆ ನಂತರ ಸ್ವಂತ ಜಮೀನಿನಲ್ಲಿ ಈ ಯೋಜನೆ ಅಡಿ ಕೆಲಸ ಮಾಡಬಹುದು ಎಂದು ತಿದ್ದುಪಡಿ ಮಾಡಲಾಯಿತು” ಎಂದರು.

“ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವುದೇ ಎಫ್ ಐಆರ್ ಇಲ್ಲದೇ ಇ.ಡಿ ಈ ಪ್ರಕರಣವನ್ನು ಹೇಗೆ ಕೈಗೆತ್ತಿಕೊಂಡಿತು. ನಮ್ಮ ಮೇಲೂ ಇ.ಡಿ‌ ಬೇಕಾದಷ್ಟು ‌ಪ್ರಕರಣಗಳನ್ನು ದಾಖಲಿಸಿತ್ತು.‌ ಕೊನೆಗೆ ಏನಾಯಿತು? ಜೈಲಿನಲ್ಲಿ ಇಟ್ಟರು. ತುಘಲಕ್ ಪೊಲೀಸ್ ಠಾಣೆಯಲ್ಲಿ ಇಟ್ಟರು” ಎಂದರು.

“ಸೋನಿಯಾಗಾಂಧಿ ಅವರು ಹಾಗೂ ರಾಹುಲ್ ಗಾಂಧಿ ಅವರಿಗೂ ಇದೇ ರೀತಿ ಮಾಡಲು ಹೊರಟರು ಆದರೆ ಧೈರ್ಯ ಸಾಲದೆ ಚಾರ್ಜ್ ಶೀಟ್ ಹಾಕಿದರು. ನ್ಯಾಯಾಲಯ ಇದನ್ನು ತಿರಸ್ಕರಿಸಿತು. ನ್ಯಾಯಾಲಯವು ಪೊಲೀಸರ ಬಳಿ ಚಾರ್ಜ್ ಶೀಟ್ ಎಲ್ಲಿ, ಎಫ್ ಐಆರ್ ಎಲ್ಲಿ ಎಂದು ಕೇಳಿತು. ನಮ್ಮ ವಕೀಲರಾದ ಅಭಿಷೇಕ್ ಮನುಸಿಂಗ್ವಿ ಅವರು ವಾದ ಮಾಡಿದರು. ಇವರು ಕಾನೂನುಗಳನ್ನು ಪರಿಶೀಲಿಸಿದಾಗ, ಯಾವುದೇ ವ್ಯಕ್ತಿ ದೂರು ನೀಡಿದರೆ ಪ್ರಕರಣದಾಖಲಿಸಲು ಬರುವುದಿಲ್ಲ. ಯಾವುದಾದರೂ ಸಂಸ್ಥೆ ಮುಖಾಂತರ ದೂರು ನೀಡಬೇಕು” ಎಂದರು.

ನೋಟಿಸ್ ವಿರುದ್ಧ ಮೇಲ್ಮನವಿ

“ನನಗೂ ದೆಹಲಿ ಪೊಲೀಸರು ನೋಟಿಸ್ ನೀಡಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು. ನೋಟಿಸ್ ಗೆ ಉತ್ತರ ನೀಡಲು ನಾಳೆ (ಮಂಗಳವಾರ) ದೆಹಲಿಗೆ ನಾನು ತೆರಳಬಹುದು” ಎಂದರು.

“ಪಕ್ಷಕ್ಕೆ ಹಾಗು ಪಕ್ಷದ ಕಾರ್ಯಕ್ರಮಗಳಿಗೆ ಹಣ ನೀಡದೆ ಇನ್ನು ಯಾವ ಕೆಲಸಗಳಿಗೆ, ಇನ್ಯಾರಿಗೆ ಹಣ ನೀಡಬೇಕು. ಎಲ್ಲಾ ಶಾಸಕರಿಂದಲೂ ಹಣ ಸಂಗ್ರಹ ಮಾಡಲಾಗುತ್ತಿದೆ. ಎಸ್.ಎಸ್. ಮಲ್ಲಿಕಾರ್ಜುನ ಅವರ ಸಂಬಂಧಿಕರು 5 ಕೋಟಿ ರೂಪಾಯಿ ಹಣ ನೀಡಿದ್ದಾರೆ. ನಾವುಗಳು ಏನು ತಪ್ಪು ಮಾಡಿಲ್ಲ. ನಾವು ದುಡಿದ ಹಣವನ್ನೇ ನೀಡಿದ್ದೇವೆ.‌ ಕಪ್ಪು ಹಣ ನೀಡಿಲ್ಲ. ಸ್ವಂತ ಹಣದಿಂದ ದೇಣಿಗೆ ನೀಡಿದ್ದೇನೆ” ಎಂದು ಹೇಳಿದರು.

“ಬಿಜೆಪಿಯವರು ಕೋಟ್ಯಂತರ ರೂಪಾಯಿಯನ್ನು ದೇಣಿಗೆ ಪಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಎಷ್ಟೆಷ್ಟು ಕೋಟಿ ಹಣವನ್ನು ಚುನಾವಣಾ ಬಾಂಡ್ ಮೂಲಕ ಪಡೆದಿದ್ದಾರೆ ಎಂದು ಪತ್ರಿಕೆಗಳಲ್ಲಿ ಬಂದಿದೆ. ಸೆಕ್ಷನ್ 25 ರ ಅಡಿ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯನ್ನು ನೋಂದಣಿ ಮಾಡಿಸಲಾಗಿದೆ. ಕಾಂಗ್ರೆಸ್ ಪಕ್ಷ ಈ ಸಂಸ್ಥೆಗೆ ಸಾಲ ನೀಡಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಹೆಸರಿಗೆ ಷೇರುಗಳು ವರ್ಗಾವಣೆಯಾಗುತ್ತವೆ. ನಾನು ಕೂಡ ಕಾಂಗ್ರೆಸ್ ಭವನದ ಟ್ರಸ್ಟಿ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಇದ್ದೇನೆ ಎಂದರೆ ನನ್ನ ಹೆಸರಿಗೆ ಆಸ್ತಿಗಳು ನೋಂದಾಯಿಸಲ್ಪಡುತ್ತವೆ. ಬೇರೆಯವರು ಬಂದಾಗ ಅವರ ಹೆಸರಿಗೆ ಹೋಗುತ್ತದೆ‌” ಎಂದರು.

Gandhiji’s legacy being targeted; end of BJP is starting: DCM DK Shivakumar

Bengaluru, Dec 22: Hitting out at the Centre for renaming the MGNREGA rural employment scheme, Deputy Chief Minister DK Shivakumar today said the final days of BJP has started as they are trying to end the legacy of Mahatma Gandhi.

Addressing a press conference at the KPCC office, he said, “We didn’t think the BJP would dare touch the MGNREGA rural employment scheme which was enabled by Article 21. Now that it has done so, I think the final days of BJP has started.”

“The BJP is trying to finish off a scheme given to the poor of the country. There is no bigger shame than this. In the Congress Working Committee to be held on December 27, we will decide the modalities of the fight,” he said.

“The Rural Development and Panchayat Raj Minister Priyank Kharge has called for a meeting in Delhi on Tuesday and we will discuss it there. No state would be in a position to match the funds as specified by the Centre. This will ensure the rural employment scheme is dead and buried,” he noted.

“The Party and the government will fight against the decision of BJP on MGNREGA scheme. This is a national issue. The Congress party will protect the interests of the scheme beneficiaries. We will formulate a massive protest against this. We will not stop until the Centre revokes name change,” he added.

“The Centre was supposed to bear the cost of MGNREGA in the ratio of 90:10 but the new scheme has changed it to 60:40. This will kill the rural employment scheme. This is a shocking move,” he said.

National Herald case
“The ED took up the National Herald case without any FIR. The ED registered many cases, but nothing happened in the end. They were trying to do the same to Sonia Gandhi and Rahul Gandhi as well. The Court then turned it down saying the ED can’t file a chargesheet,” he informed.

Will appeal the notice
“The Delhi police had issued a notice to me also. We will submit an appeal on this. I may travel to Delhi to reply to the notice tomorrow. They have accused us of donating funds for National Herald. If not for the party, who else do we donate our money to? There is nothing wrong in this. BJP has received crores of rupees in donation as per the media reports. There are reports about Election Bonds as well,” he added.

Related Articles

Back to top button