*ದೇಸಿ ತಂತ್ರಜ್ಞಾನದಿಂದಲೇ ಸ್ವಾವಲಂಬಿ ಹಾಗೂ ಬಲಿಷ್ಠ ಭಾರತದ ನಿರ್ಮಾಣ*

ವಿ. ಟಿ. ಯು. ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಅಭಿಮತ
ಪ್ರಗತಿವಾಹಿನಿ ಸುದ್ದಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿ ಟಿ ಯು), ಬೆಳಗಾವಿಯಲ್ಲಿ ದಿನಾಂಕ 28.02.2024 ರಂದು ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆಯ ಕಾರ್ಯಕ್ರಮವನ್ನು ಮಾನ್ಯ ಕುಲಪತಿಗಳಾದ ಪ್ರೊ. ವಿದ್ಯಾಶಂಕರ ಎಸ್. ಇವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಕುಲಪತಿಗಳಾದ ಪ್ರೊ. ವಿದ್ಯಾಶಂಕರ ಎಸ್. ರವರು ಸರ್. ಸಿ. ವಿ. ರಾಮನ್ ಅವರು ರಾಮನ್ ಪರಿಣಾಮದಿಂದ ವಿಜ್ಞಾನಕ್ಕೆ ನೀಡಿದ ಕೊಡುಗೆಯನ್ನು ನೆನೆದು ನಮ್ಮ ರಾಷ್ಟ್ರದ ವೈಜ್ಞಾನಿಕ ಪರಂಪರೆ ಮತ್ತು ಶಕ್ತಿಯನ್ನು ಜಗತ್ತಿಗೆ ರಾಮನ್ ಪರಿಣಾಮದ ಮುಖಾಂತರ ತೋರಿದ ಶ್ರೇಷ್ಟ ದಿನ ಇವತ್ತು ಎಂದು ಹೇಳಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಿಯರು ನೀಡಿರುವ ಕೊಡುಗೆಯನ್ನು ಇಂದಿನ ಯುವಜನರ ಮುಖಾಂತರ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ತಿಳಿಸುವ ದಿನವಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ೨೦೨೪ ರ ಈ ರಾಷ್ಟ್ರೀಯ ವಿಜ್ಞಾನ ದಿನವನ್ನು “ಭಾರತ ಅಭಿವೃದ್ಧಿಗೆ ದೇಶಿಯ ತಂತ್ರಜ್ಞಾನ” ಎಂಬ ವಿಷಯವನ್ನಿಟ್ಟುಕೊಂಡು ಆಚರಿಸಲಾಗತ್ತದೆ. ಒಂದು ರಾಷ್ಟ್ರದ ಸರ್ವತೋಮುಖ ಮತ್ತು ಸ್ವಾವಲಂಭಿ ರಾಷ್ಟ್ರದ ಅಭಿವೃದ್ಧಿಗಾಗಿ ದೇಸಿಯ ತಂತ್ರಜ್ಞಾನ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಾರಣ ದೇಸಿಯ ತಂತ್ರಜ್ಞಾನವು ನಮ್ಮ ರಾಷ್ಟ್ರದಲ್ಲಿರುವ ಜ್ಞಾನಶಕ್ತಿಯನ್ನು ಜಗತ್ತಿಗೆ ತೋರುವುದಲ್ಲದೆ ಎಷ್ಟೋ ಅಸಂಖ್ಯಾತ ಉದ್ಯೋಗಗಳನ್ನು ಹುಟ್ಟು ಹಾಕಿ ಸಾಮಾಜಿಕವಾಗಿ ಆರ್ಥಿಕವಾಗಿ ಸ್ವಾವಲಂಭಿಯನ್ನಾಗಿಸುವ ಶಕ್ತಿ ದೇಸಿಯ ಉತ್ಪನ್ನ ಹಾಗೂ ತಂತ್ರಜ್ಞಾನಗಳಲ್ಲಿದೆ ಎಂದು ಹೇಳಿದರು.
ದೇಸಿಯ ತಂತ್ರಜ್ಞಾನಗಳು ಸ್ಥಳೀಯ ಸಮಸ್ಯೆಗಳ ಮೇಲೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳಾಗಿರುವುದರಿಂದ ನಮ್ಮ ಸಾಮಾಜಿಕ ಸಮಸ್ಯೆಗಳಿಗೆ ನಾವೇ ಪರಿಹಾರ ಕೊಂಡುಕೊಳ್ಳುವದರ ಜೊತೆಗೆ ಬೇರೆ ರಾಷ್ಟ್ರಗಳ ತಂತ್ರಜ್ಞಾನಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತ ತಂತಜ್ಞಾನ ಆಮದು ಕಡಿಮೆಯಾಗಿ ಆರ್ಥಿಕ ಹೊರೆ ಮತ್ತು ಹಣ ದುಬ್ಬರ ಕಡಿಮೆಯಾಗುತ್ತದೆ ಜೊತೆಗೆ ನಮ್ಮ ದೇಸಿ ತಂತಜ್ಞಾನವನ್ನು ಬೇರೆ ರಾಷ್ಟ್ರಕ್ಕೆ ರಫ್ತು ಸಹ ಮಾಡಬಹುದು ಇದರಿಂದ ನಮ್ಮ ಭಾರತ ಬಲಿಷ್ಠ ರಾಷ್ಟ್ರ್ರವಾಗುತ್ತದೆ ಎಂದು ಹೇಳಿದರು.
ಇದೇ ನಿಟ್ಟಿನಲ್ಲಿ, ಕಳೆದ ೧೦ ವರ್ಷಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದ್ದು ಜಾಗತಿವಾಗಿ ಸಂಶೋಧನೆ ಲೇಖನಗಳ ಪ್ರಕಟಣೆಯಲ್ಲಿ ಮೊದಲ ೫ ರಲ್ಲಿ ಭಾರತ ಸ್ಥಾನವನ್ನು ಪಡೆದಿದೆ. ಜೊತೆಗೆ ೨೦೧೫ ರಲ್ಲಿ ಜಾಗತಿಕ ನಾವಿನ್ಯತೆ ಕ್ರಮಾಂಕ (ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್) ದಲ್ಲಿ ೮೧ನೇ ಸ್ಥಾನದಿಂದ ೪೦ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಅಷ್ಟೇ ಅಲ್ಲದೆ ಪೇಟೆಂಟ್ ನೊಂದಣಿಯಲ್ಲಿ ಕಳೆದ ಎರಡು ದಶಕದಲ್ಲಿ ಅತಿ ಹೆಚ್ಚು ಅಂದರೆ ೯೦,೦೦೦ ಪೇಟೆಂಟ್ ನೊಂದಣಿಯನ್ನು ಮಾಡಿದ್ದು ರಾಷ್ಟ್ರದ ಸಂಶೋಧನಾ ಮತ್ತು ನಾವಿನ್ಯತಾ ಶಕ್ತಿಗೆ ಹಿಡಿದ ಕೈ ಗನ್ನಡಿಯಾಗಿದೆ ಎಂದು ಹೇಳಿದರು.
ಈ ದಿಸೆಯಲ್ಲಿ ಇವತ್ತಿನ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಬೇರೆ ಯಾವುದೇ ರಾಷ್ಟ್ರದ ಕಂಪನಿಗಳಿಗೆ ಕೇವಲ ಸೇವೆ ನೀಡಲು ಬಳಸುವ ಬದಲಾಗಿ ರಾಷ್ಟ್ರದಲ್ಲಿರುವ ಸಂಶೋಧನಾ ಮತ್ತು ನಾವಿನ್ಯತಾ ಪೂರಕ ವಾತಾವರಣವನ್ನು ಸರಿಯಾಗಿ ಉಪಯೋಗಿಸಿಕೊಂಡು ತಮ್ಮ ಸುತ್ತ ಮುತ್ತಲಿನ ಸಮಾಜವನ್ನು ಅಧ್ಯಯನ ಮಾಡಿ ಸಮಸ್ಯಗಳನ್ನು ವಿಶ್ಲೇಷಿಸಿ ಅವುಗಳಿಗೆ ದೇಶಿಯ ತಂತ್ರಜ್ಞಾನಗಳ ಮುಖಾಂತರ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಪಡೆಬೇಕು.
ಇದೇ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ನಾವಿನ್ಯತೆ ಸಂಸ್ಕೃತಿಯನ್ನು ಬೆಳೆಸುವ ಹಾಗೂ “ವಿಕಸಿತ ಭಾರತ” ಕಲ್ಪನೆಗೆ ಸಹಕಾರ ನೀಡುವ ಉದ್ದೇಶದಿಂದ ವಿ.ಟಿ.ಯು. ವಿಶ್ವೇಶ್ವರಯ್ಯ ರಿಸರ್ಚ್ ಮತ್ತು ಇನೋವೇಷನ್ ಫೌಂಡೇಶನ್ (VRIF) ಅನ್ನು ಸ್ಥಾಪನೆ ಮಾಡಿದೆ ಇಲ್ಲಿ ವಿದ್ಯಾರ್ಥಿಗಳ ಹೊಸ ಕಲ್ಪನೆಗಳಿಗೆ ಮೂರ್ತ ರೂಪಕೊಟ್ಟು ವಾಣಿಜ್ಯಕರಣಗೊಳಿಸಲು ನೆರವು ನೀಡಲಾಗುತ್ತಿದೆ ಎಂದು ತಿಳಿಸಿ ರಾಷ್ಟ್ರದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣ ಎಂದು ಹೇಳಿ ಮಾತು ಮಗಿಸಿದರು.
ಕಾರ್ಯಕ್ರಮದ ಪೂರದಲ್ಲಿ ಮಾನ್ಯ ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ ಸಿ. ವಿ. ರಾಮನ್ ಬಗ್ಗೆ ಮಾತನಾಡಿದರು. ಪ್ರೊ. ಸರಸ್ವತಿ ಭೂಸುನೂರ್ ಸ್ವಾಗತ ಕೋರಿದರು. ಎಂ. ಸಿ. ಎ. ವಿದ್ಯಾರ್ಥಿನಿ ನಂದಾ ಹಿರೇಮಠ್ ವಂದಿಸಿದರು ಹಾಗೂ ಕುಮಾರಿ ಮೈತ್ರಿ ಕಟ್ಟಿ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿ ಟಿ ಯುನ ಹಣಕಾಸು ಅಧಿಕಾರಿಗಳಾದ ಎಮ್. ಎ. ಸಪ್ನ ಮತ್ತು ಕಂಪ್ಯೂಟರ್ ಸಯನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಅಧ್ಯಕ್ಷರಾದ ಪ್ರೊ. ಎಸ್. ಎಲ್. ದೇಶಪಾಂಡೆಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ