ಅತ್ರಾಸ (ಕಜ್ಜಾಯ)
ಇದು ಅಕ್ಕಿ ಮತ್ತು ಬೆಲ್ಲ ಉಪಯೋಗಿಸಿ ಮಾಡುವ ಸಾಂಪ್ರದಾಯಕ ಕಜ್ಜಾಯ. ಕೆಲವು ಪ್ರದೇಶಕ್ಕನುಗುಣವಾಗಿ ದಸರಾದಲ್ಲಿ ಹಾಗು ದೀಪಾವಳಿಯಲ್ಲೂ ಸಹ ಮಾಡುತ್ತಾರೆ.
ಬೇಕಾಗುವ ಸಾಮಗ್ರಿಗಳು
ಅಕ್ಕಿ 2 ಕಪ್ , ಬೆಲ್ಲ 2 ಕಪ್ (ಜೋನಿ ಬೆಲ್ಲವಾದರೆ ಚನ್ನಾಗಿ ಇರುತ್ತೆ) ಹಸಿ ಕೊಬ್ಬರಿ ತುರಿ ಅರ್ಧ ಕಪ್ , ಎರಡು ಚಮಚ ಬಿಳಿ ಎಳ್ಳು, ಕರಿಯಲು ಎಣ್ಣೆ.
ಮಾಡುವ ವಿಧಾನ :
ಅಕ್ಕಿಯನ್ನು ತೊಳೆದು ನೆರಳಿನಲ್ಲಿ ಒಣ ಹಾಕಬೇಕು. ಒಂದು ತಾಸಿನ ಬಳಿಕ ಅದನ್ನು ಮಿಕ್ಸಿಯಲ್ಲಿ ಹಾಕಿ ಹಿಟ್ಟು ಮಾಡಿಕೊಳ್ಳಬೇಕು. ಇದನ್ನು ಗಾಳಿಸಿ ಬಂದ ನುಣ್ಣಗಿನ ಹಿಟ್ಟನ್ನು ಮಾತ್ರ ಬಳಸಬೇಕು.
ಹಿಟ್ಟನ್ನು ಮುಷ್ಟಿ ಕಟ್ಟಿದರೆ ಅದು ಮುದ್ದೆಯಾಗುವ ಹದದಲ್ಲಿ ಇರಬೇಕು. ಅಂದರೆ ಹಿಟ್ಟಿನಲ್ಲಿ ಸ್ವಲ್ಪ ತೇವಾವಂಶ ಇರಬೇಕು.
ಬೆಲ್ಲಕ್ಕೆ ಸ್ವಲ್ಪ ನೀರನ್ನು ಸೇರಿಸಿ ಪಾಕಕ್ಕೆ ಇಡಬೇಕು. ಬೆಲ್ಲ ನೊರೆ ಬಂದ ತಕ್ಷಣ ಗಾಳಿಸಿ ಇಟ್ಟುಕೊಂಡ ಹಿಟ್ಟು , ಬಿಳಿ ಎಳ್ಳು ಹಾಗೂ ಹಸಿ ಕೊಬ್ಬರಿಯನ್ನು ಹಾಕಿ ಕೈ ಆಡಿಸುತ್ತ ಇರಬೇಕು.
ಹಿಟ್ಟು ಮತ್ತು ಬೆಲ್ಲದ ಪಾಕ ಸಮನಾಗಿ ಹೊಂದಿಕೊಂಡಮೇಲೆ ಅದನ್ನು ಒಲೆಯಿಂದ ಕೆಳಗಿಳಿಸಿ ಇಟ್ಟುಕೊಳ್ಳಿ. ( ಈ ಹೂರಣವನ್ನು ಡಬ್ಬದಲ್ಲಿ ತುಂಬಿ ಇಟ್ಟುಕೊಂಡರೆ 2-3 ತಿಂಗಳ ಬೇಕಿದ್ದರೂ ಇಟ್ಟು ಬಳಸಬಹುದು )
ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಬಾಳೆಯ ಎಲೆ ಅಥವಾ ಪ್ಲಾಸ್ಟಿಕ್ ಪೇಪರ್ ಮೇಲೆ ಇದನ್ನು ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಕರಿದ ನಂತರ ಎರಡು ಸೌಟುಗಳಿಂದ ಇದನ್ನು ಪ್ರೆಸ್ ಮಾಡಿ. ಇದರಲ್ಲಿ ಇರುವ ಹೆಚ್ಚಿನ ಪ್ರಮಾಣದ ಎಣ್ಣೆ ಹೊರಬರುತ್ತದೆ. ಅತ್ರಾಸ ಸಿದ್ಧವಾಗಿದೆ. ಆರಿದಮೇಲೆ ಅತ್ರಾಸವನ್ನು ಡಬ್ಬದಲ್ಲಿ ತುಂಬಿಟ್ಟಕೊಳ್ಳಬಹುದು.
( ಸೂಚನೆ: ಹೂರಣ ತಯಾರಿಸುವಾಗ ಅಕ್ಕಿ ಹಿಟ್ಟು ತರಿತರಿಯಾಗಿದ್ದರೆ ಮತ್ತು ತೇವಾವಂಶ ಇಲ್ಲದಿದ್ದರೆ ಎಣ್ಣೆಯಲ್ಲಿ ಕರಿಯುವಾಗ ಕರಗಿಹೋಗುತ್ತದೆ. )
-ಸಹನಾ ಭಟ್, ಸಹನಾಸ್ ಕಿಚನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ