LatestPragativahini Special

*ಅಸುರಿ ಮನೋವೃತ್ತಿಗಳ ಮೇಲೆ ‘ವಿಜಯ’ದಶಮಿ*

ವಿಶ್ವಾಸ ಸೋಹೋನಿ

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ನವರಾತ್ರಿ ಅಥವಾ `ದಸರಾ’ ಹಬ್ಬಕ್ಕೆ ತನ್ನದೇ ಆದ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ.
ಜಗನ್ಮಾತೆಯ ನವದುರ್ಗಾ ಅವತಾರಗಳಲ್ಲಿ ಶೈಲಪುತ್ರಿ ಮೊದಲನೆಯ ಅವತಾರವಾಗಿದೆ. ದುರ್ಗೆಯನ್ನೇ ಮಾತೆ, ಸತಿ, ಭವಾನಿ, ಪಾರ್ವತಿ ಎಂದು ಕರೆಯಲಾಗುತ್ತದೆ. ಶೈಲ ಅಂದರೆ ಪರ್ವತ ಮತ್ತು ಭೂಮಿ. ಆಕೆಯ ಹಣೆಯ ಮಧ್ಯದಲ್ಲಿ ಆತ್ಮದ ಅಭಿವ್ಯಕ್ತಿಯಾಗಿ ಬೆಳಕನ್ನು ತೋರಿಸಲಾಗಿದೆ.


ಎರಡನೇ ಅವತಾರ ಬ್ರಹ್ಮಚಾರಿಣಿ, ಬ್ರಹ್ಮ ಎಂದರೆ ಪರಮಾತ್ಮನ ನಿಜವಾದ ಜ್ಞಾನವನ್ನು ತಿಳಿದವನು. ಬ್ರಹ್ಮಚರ್ಯವು ಪರಮಾತ್ಮನನ್ನು ಪಡೆಯುವ ಮೊದಲ ಹಂತವಾಗಿದ್ದು, ಈ ಸಾಧನೆಯನ್ನು ಎಲ್ಲಾ ಯೋಗಿ-ಋಷಿ-ಮುನಿಗಳು ಮಾಡುತ್ತಾರೆ.


ಮೂರನೆಯ ಅವತಾರ ಚಂದ್ರಘಂಟ ದೇವಿಯಾಗಿದೆ. ಅವಳು ಚಂದ್ರನ ಸಮಾನ ಪ್ರಕಾಶಮಾನವಾಗಿದ್ದಾಳೆ. ಅಜ್ಞಾನ, ಭಯ ಮತ್ತು ಆತಂಕದ ಛಾಯೆಯಲ್ಲಿ ಸಿಲುಕಿರುವ ಮನುಕುಲವನ್ನು ರಕ್ಷಣೆ ಮಾಡುವವಳೇ ಚಂದ್ರಘಂಟ ದೇವಿ. ನೀವು ಆತ್ಮ ಆಗಿದ್ದೀರಿ, ದೇಹವಲ್ಲ. ನೀವು ಸರ್ವಶಕ್ತಿವಂತ ಭಗವಂತನ ಮಗುವಾಗಿದ್ದೀರಿ.


ನಾಲ್ಕನೆಯ ಅವತಾರ ಕೂಷ್ಮಾಂಡಾ ದೇವಿ. ಅಂದರೆ ಶಿವ ಮತ್ತು ಶಕ್ತಿಯ ಸಂಯೋಜಿತ ರೂಪ. ಕಲಿಯುಗದ ಕೊನೆಯಲ್ಲಿ ಶಿವನು ಅವತರಿಸಿ ಬ್ರಹ್ಮ-ವಿಷ್ಣು-ಶಂಕರನ ಮೂಲಕ ಸ್ಥಾಪನೆ, ಪಾಲನೆ ಮತ್ತು ವಿನಾಶದ ಕರ್ತವ್ಯವನ್ನು ಮಾಡಿಸುತ್ತಾನೆ. ಅದೇ ರೀತಿ ಕೂಷ್ಮಾಂಡ ದೇವಿಯು ಕೂಡ ಸಂಯೋಜಿತಳಾಗಿದ್ದಾಳೆ. ಲಕ್ಷ್ಮಿ, ಪಾರ್ವತಿ ಮತ್ತು ಸರಸ್ವತಿ ದೇವಿಯ ಸ್ವರೂಪ ಅವಳಲ್ಲಿದೆ.


ಐದನೆಯ ಅವತಾರವನ್ನು ಸ್ಕಂದಮಾತೆ ಎಂದು ಕರೆಯಲಾಗುತ್ತದೆ. ಸ್ಕಂದ ಕಾರ್ತಿಕೇಯನ ಹೆಸರಾಗಿದ್ದು, ಈ ಹೆಸರು ಜ್ಞಾನಶಕ್ತಿ ಮತ್ತು ಕ್ರಿಯಾ ಶಕ್ತಿಯನ್ನು ಸೂಚಿಸುತ್ತದೆ. ತಾಯಿಯ ಜೊತೆಗೂಡಿ ತಾರಕಾಸುರನೊಂದಿಗೆ ಹೋರಾಡುವಾಗ ಶಿವನಿಂದ ಶಕ್ತಿಯನ್ನು ಪಡೆದನು ಎಂಬ ಗಾಯನವಿದೆ. ಹೀಗೆ ನಾವು ಶಿವಶಕ್ತಿಯಾಗಿದ್ದು, ಅಸೂಯೆ ಮತ್ತು ದ್ವೇಷದಂತಹ ರಾಕ್ಷಸರ ವಿರುದ್ಧ ಹೋರಾಡುತ್ತಿದ್ದೇವೆ.


ಕಾತ್ಯಾಯಿನಿ ದೇವಿ ಆರನೇ ಅವತಾರವಾಗಿದ್ದಾಳೆ. ಪತಂಜಲಿ ಯೋಗ ಭಾಷ್ಯದಲ್ಲಿ, ಬೌದ್ಧ ಮತ್ತು ಜೈನ ಧರ್ಮಗ್ರಂಥಗಳಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ. ದೇವಿ ಕಾತ್ಯಾಯಿನಿ ಆಜ್ಞಾ ಚಕ್ರದ ಪ್ರಥಮ ದೇವತೆಯಾಗಿದ್ದಾಳೆ. ಆಜ್ಞಾಚಕ್ರವೆಂದರೆ ಆತ್ಮದ ನಿವಾಸಸ್ಥಾನ ಭೃಕುಟಿ. ರಾಜಯೋಗದಲ್ಲಿ ಆತ್ಮವೆಂದು ತಿಳಿದು ಪರಮಾತ್ಮನ ಜೊತೆ ಸಂಬಂಧ ಜೋಡಿಸಿಕೊಂಡು ಶಕ್ತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.
ಏಳನೆಯ ಅವತಾರ ಕಾಲರಾತ್ರಿ. ಅಂದರೆ ಆಪತ್ತು ಮತ್ತು ಸಂಕಟಗಳನ್ನು ತರುವ ಸಾಮೂಹಿಕ ಶಕ್ತಿಯನ್ನು ಸಂಪೂರ್ಣವಾಗಿ ವಿನಾಶ ಮಾಡುವವಳು. ಶುಭಂಕರಿ ಎಂದು ಪೂಜಿಸುವ ಈಕೆಯ ಮೂರನೆಯ ಕಣ್ಣು ಆತ್ಮಜ್ಞಾನದ ಸಂಕೇತವಾಗಿದೆ. ಪ್ರತಿಯೊಬ್ಬರು ತಮಗೆ ತಾವೇ ಕಾಲರಾತ್ರಿಯ ಸ್ವರೂಪವನ್ನು ಧಾರಣೆ ಮಾಡಿಕೊಂಡು ಆತ್ಮದಲ್ಲಿರುವ ದುರ್ಗುಣಗಳನ್ನು ನಾಶ ಮಾಡಿಕೊಳ್ಳಬೇಕಾಗಿದೆ.


ಮಹಾಗೌರಿದೇವಿಯು ಎಂಟನೆಯ ಅವತಾರವಾಗಿದ್ದು, ವೃಷಭವಾಹನನಾಗಿದ್ದಾಳೆ. ಚತುರ್ಭುಜವಿದೆ, ಶ್ವೇತವರ್ಣವಾಗಿದ್ದಾಳೆ, ಬಲಗೈಯಲ್ಲಿ ಅಭಯ ಮುದ್ರೆ ಇದೆ. ಕೆಳಗಿನ ಬಲಗೈಯಲ್ಲಿ ತ್ರಿಶೂಲ, ಮೇಲಿನ ಎಡಗೈಯಲ್ಲಿ ಢಮರುಗ, ಕೆಳಗಿನ ಎಡಗೈ ವರದ ಮುದ್ರೆಯಲ್ಲಿದೆ. ಮಹಾಗೌರಿಯನ್ನು ತಪಸ್ವಿನಿ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಪರಮಾತ್ಮನು ರಾಜಯೋಗದ ಮೂಲಕ ತಪಸ್ವಿ ಮೂರ್ತಿಗಳನ್ನಾಗಿ ಮಾಡುತ್ತಿದ್ದಾನೆ. ಇದರಿಂದ ಆತ್ಮದ ತೇಜಸ್ಸು ವೃದ್ಧಿಯಾಗಿ ವರದಾನಿ ಮೂರ್ತಿಗಳಾಗುತ್ತೇವೆ.


ಸಿದ್ಧಿರಾತ್ರ್ರಿ ದೇವಿಯು ದುರ್ಗಾದೇವಿಯ ಕೊನೆಯ ಅವತಾರವಾಗಿದ್ದು, ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖಿಸಲಾಗಿರುವ ಅಷ್ಟಸಿದ್ಧಿಗಳಾದ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾವ್ಯೋ, ಈಶಿತ್ವ ಹಾಗೂ ವಶಿತ್ವ ಮುಂತಾದ ಎಲ್ಲಾ ಸಿದ್ಧಿಗಳನ್ನು ನೀಡುವ ಮಹಾಮಹಿಮೆಯಾಗಿದ್ದಾಳೆ. ಕಮಲ ಪುಷ್ಪವು ಪವಿತ್ರ ಜೀವನದ ಸಂಕೇತ, ಅಷ್ಟಶಕ್ತಿಗಳು ಅಷ್ಟಪ್ರಾಪ್ತಿಗಳ ಪ್ರತೀಕ, ಶಂಖ-ಚಕ್ರಗಳು ಜ್ಞಾನದ ಪ್ರತೀಕ, ಗದೆಯು ವಿಕಾರದ ಮೇಲಿನ ವಿಜಯವನ್ನು ಸೂಚಿಸುತ್ತದೆ. ಸಿದ್ಧಿ ಸ್ವರೂಪವು ಸಂಪೂರ್ಣತೆಯ ಸೂಚಕವಾಗಿದ್ದು, ಪರಮಾತ್ಮನ ಶಕ್ತಿಯ ಪ್ರಾಪ್ತಿಯ ಸಂಕೇತವಾಗಿದೆ.

ಪಶ್ಚಿಮ ಬಂಗಾಳದಲ್ಲಿ 9 ದಿನಗಳಲ್ಲಿ ದುರ್ಗಾದೇವಿಯ ವಿಶಾಲವಾದ ಸುಂದರ ಮೂರ್ತಿಗಳನ್ನು ದೊಡ್ಡ ಪ್ರಮಾಣದಲ್ಲಿ, ಅಲಂಕೃತ ಮಂಟಪಗಳಲ್ಲಿ ಇರಿಸಿ ಪೂಜಿಸಲಾಗುತ್ತದೆ. ಪಂಜಾಬ್‍ನಲ್ಲಿ ಭಕ್ತರು 7 ದಿನಗಳ ಉಪವಾಸ ಮಾಡಿದ ನಂತರ ಎಂಟನೇ ದಿನ ಪುಟ್ಟ ಬಾಲಕಿಯರನ್ನು ದೇವಿಯರ ಪ್ರತಿರೂಪವೆಂದು ಭಾವಿಸಿ ಅವರಿಗೆ ಪೂರಿ, ಹಲ್ವಾ ಮತ್ತು ಕಡಲೆಯ ನೈವೇದ್ಯ ಅರ್ಪಿಸುತ್ತಾರೆ. ಹೊಸ ಕೆಂಪು ಬಣ್ಣದ ‘ಚುನ್ನಿ’ಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಗುಜರಾತ್ ಮತ್ತು ರಾಜಸ್ಥಾನದ ಕೆಲವು ಪ್ರಾಂತಗಳಲ್ಲಿ ನವರಾತ್ರಿಯ ಸಮಯದಲ್ಲಿ ದಾಂಡಿಯ, ಗರ್ಭಾ ಲೋಕನೃತ್ಯವು ಪ್ರಸಿದ್ಧವಾಗಿದೆ. ‘ಧೋತಿ-ಕುರ್ತಾ ಮತ್ತು ಚನಿಯಾ-ಚೋಲಿ’ ವಿಶೇಷ ಉಡುಪುಗಳನ್ನು ಧರಿಸಿ, ಡೋಲು ವಾದ್ಯದ ತಾಳದಲ್ಲಿ ‘ಗಾರ್ಭಾ’ (ಅಶಾಂತಿ ಮತ್ತು ಅಂಧಕಾರ ದೂರಮಾಡಿ ಜ್ಞಾನದ ಬೆಳಕು ನೀಡುವುದು) ಎಂಬ ಸಣ್ಣ ದೀಪದ ಸುತ್ತಲು ನೃತ್ಯ ಮಾಡುತ್ತಾರೆ. ಕರ್ನಾಟಕ, ಆಂಧ್ರ ಮತ್ತು ತಮಿಳನಾಡಿನಲ್ಲಿ ದಸರಾ ಹಬ್ಬಕ್ಕೆ ಸುಮಂಗಳೆಯರು ಮನೆಯಲ್ಲಿ ಗೊಂಬೆಗಳನ್ನು ಪುಷ್ಪಗಳಿಂದ ಅಲಂಕರಿಸಿ, ರಂಗೋಲಿ ಹಾಕಿ ಪೂಜಿಸುತ್ತಾರೆ. ಮೈಸೂರಿನಲ್ಲಿ ಜಂಬೂಸವಾರಿ, ದೀಪಾಲಂಕಾರ, ಸಾಂಸ್ಕøತಿಕ ಕಾರ್ಯಕ್ರಮಗಳಿಂದ 10 ದಿನಗಳ ಕಾಲ ನಡೆಯುವ ದಸರಾ ಮಹೋತ್ಸವವನ್ನು ಆಚರಿಲಾಗುತ್ತದೆ. ಪ್ರತಿವರ್ಷವು ಧಾರವಾಡದಲ್ಲಿ ದಸರಾ ಜಂಬೂಸವಾರಿ ಉತ್ಸವ ನಡೆಯತ್ತದೆ. ಲಕ್ಷ್ಮಿ ನಾರಾಯಣ ಜಾತ್ರೆಯ ವಿಶೇಷವಾಗಿರುತ್ತದೆ.

ಈ ಹಬ್ಬವು ಆಶ್ವೀಜ ಮಾಸದ ಬಹುಳ ಪಾಡ್ಯಮಿಯಿಂದ ಪ್ರಾರಂಭವಾಗಿ ವಿಜಯದಶಮಿಯಂದು ಕೊನೆಗೊಳ್ಳುತ್ತದೆ. ಈ ಮಧ್ಯೆ ಬರುವ ಸಪ್ತಮಿ, ಅಷ್ಟಮಿ, ನವಮಿ ಹಾಗೂ ದಶಮಿಗಳಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ. ದುರ್ಗಾಷ್ಟಮಿಗೆ ಶಕ್ತಿಪೂಜೆ, ಮಹಾನವಮಿಯಂದು ಸರಸ್ವತಿ ಪೂಜೆ, ಆಯುಧ ಪೂಜೆ ಮಾಡುತ್ತಾರೆ. ನವರಾತ್ರಿಯ ಹಿಂದಿನ ದಿನ ಮಹಾಲಯ ಅಮಾವಾಸ್ಯೆ ಇರುತ್ತದೆ. ಅಮಾವಾಸ್ಯೆ ಎಂದರೆ ಕತ್ತಲು, ಈ ಕತ್ತಲಿನಲ್ಲೂ ಮಹಾ+ಲಯ, ಮಹಾ ವಿನಾಶ ಅಂದರೆ ಮಹಾನ್ ಪರಿವರ್ತನೆ ಆಗುತ್ತದೆ. ಆ ದಿನ ಸರ್ವ ಪಿತೃಗಳಿಗೆ ತರ್ಪಣ ಹಾಗೂ ಭಕ್ಷ ಭೋಜನಾದಿಗಳನ್ನು ಮಾಡಿ ಅರ್ಪಿಸುತ್ತಾರೆ. ಆದ್ದರಿಂದ ಈ ದಿನಕ್ಕೆ ಸರ್ವಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ವಿಜಯದಶಮಿಯ ದಿನದಂದು ಶಮಿಪೂಜೆಯೆಂದು ಬನ್ನಿಮರಕ್ಕೆ ಪೂಜಿಸುತ್ತಾರೆ. ಶಮಿ' ಎಂದರೆ ಶಾಂತಿ, ಸಮಾಧಾನವೆಂದರ್ಥ. ಆ ದಿನ ಬನ್ನಿ ಮರಕ್ಕೆ ಪೂಜಿಸುವುದರೊಂದಿಗೆ ಬನ್ನಿಮರದ ಎಲೆಗಳನ್ನು ಪರಸ್ಪರ ಕೊಟ್ಟು ಶುಭ ಹಾರೈಸುತ್ತಾರೆ.ಬನ್ನಿ’ ಎಂಬ ಶಬ್ದವೇ ಸ್ವಾಗತ ಶಬ್ದಾರ್ಥವಾಗಿರುವುದರಿಂದ ತಮ್ಮ ಆಪ್ತ ಸ್ನೇಹಿತರಿಗೆಲ್ಲ ಆಮಂತ್ರಣ ನೀಡಿ ಸಿಹಿ ಹಂಚುತ್ತಾರೆ. ಹೊಲಗಳಲ್ಲಿ ಬೆಳೆದ ಜೋಳ ಮತ್ತು ಗೋಧಿüಯ ಹುಲ್ಲನ್ನು ಅರ್ಥಾತ್ ಶಾಂತಿಯ ಸಂಕೇತವಾದ ಹಸಿರನ್ನು ಪೂಜಿಸುತ್ತಾರೆ. ವಿಜಯದಶಮಿ ಶಾಂತಿ, ಸಮಾಧಾನ ನೀಡುವ ಹಬ್ಬವಾಗಿದೆ.
ರಾವಣ ಎಂದರೆ ರಾಕ್ಷಸಿ ಪ್ರವೃತ್ತಿಯ ಸಂಕೇತ. ರಾವಣನ ಹತ್ತು ತಲೆಗಳು ಸ್ತ್ರೀ ಮತ್ತು ಪುರುಷರಲ್ಲಿರುವ ಪಂಚವಿಕಾರಗಳಾದ ಕಾಮ, ಕ್ರೋಧ, ಮೋಹ, ಲೋಭ, ಅಹಂಕಾರಗಳ ಪ್ರತೀಕವಾಗಿವೆ. ನಮ್ಮಲ್ಲಿರುವ ಈ ಪಂಚ ವಿಕಾರಗಳನ್ನು ಸುಟ್ಟು ಹಾಕಿದರೆ ನಿಜವಾದ ದಶಹರವಾಗುತ್ತದೆ. ಆಗಲೇ ರಾವಣನ ಸಂಹಾರವಾಗುತ್ತದೆ. ನವರಾತ್ರಿಯಲ್ಲಿ ವಿಶೇಷವಾಗಿ ದೇವಿಯರ ಆರಾಧಾನೆ ಮತ್ತು ಪೂಜೆ ನಡೆಯುತ್ತದೆ. ದುರ್ಗಾದೇವಿಯ 8 ಭುಜಗಳು ಅಷ್ಟಶಕ್ತಿಗಳ ಪ್ರತೀಕವಾಗಿವೆ. ಅವುಗಳೆಂದರೆ ಸಹನಶಕ್ತಿ, ಅಳವಡಿಸಿಕೊಳ್ಳುವ ಶಕ್ತಿ, ಪರೀಕ್ಷಿಸಿಕೊಳ್ಳುವ ಶಕ್ತಿ, ನಿರ್ಣಯ ಶಕ್ತಿ, ಧೈರ್ಯ ಶಕ್ತಿ, ಸಹಯೋಗ ಶಕ್ತಿ, ಸಂಕುಚಿತಗೊಳಿಸುವ ಶಕ್ತಿ ಮತ್ತು ಸಂಕ್ಷಿಪ್ತಗೊಳಿಸುವ ಶಕ್ತಿಗಳು. ದೈವಿ ಗುಣಗಳಾದ ಶಾಂತಿ, ಪ್ರೀತಿ ಸ್ನೇಹ, ಮಧುರತೆ, ಆನಂದ, ಮುಂತಾದಗಳನ್ನು ಸ್ವಯಂ ನಿರಾಕಾರ ಪರಮಪಿತ ಪರಮಾತ್ಮನು ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಕಲಿಸುವ ರಾಜಯೋಗದ ಮೂಲಕ ಜೀವನದಲ್ಲಿ ಅಳವಡಿಸಿಕೊಂಡರೆ ನಾವೂ ಸಹ ದೇವಮಾನವರಾಗಬಹುದು.


ಹಾಗಾದರೆ ಬನ್ನಿ, ನಾವು ಈ ದಸರಾ ಹಬ್ಬದ ಆಧ್ಯಾತ್ಮಿಕ ಹಿನ್ನಲೆಯನ್ನು ತಿಳಿದು, ವಿಶ್ವಪಿತನಾದ ನಿರಾಕಾರ ಭಗವಂತನ ಮಕ್ಕಳು ಎಂಬುದನ್ನು ಅರಿತು, ಪರಸ್ಪರದಲ್ಲಿ ಸ್ನೇಹ ಆತ್ಮಿಯತೆಯನ್ನು ಬೆಳೆಸಿಕೊಂಡು ದುರ್ಗುಣಗಳನ್ನು ಭಸ್ಮಮಾಡಿ ವಿಶ್ವಶಾಂತಿಯ ಉಗಮಕ್ಕೆ ನಾಂದಿಯನ್ನು ಹಾಡೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button