Kannada NewsLatest

ಇದರ ಹಿಂದೆ ಯಾರದ್ದೋ ಕೈವಾಡ, ಷಡ್ಯಂತ್ರವಿದೆ; ಕಾಂಗ್ರೆಸ್ ನಾಯಕಿ ನವ್ಯಶ್ರೀ ಆರೋಪ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಈ ಬಗ್ಗೆ ಮಾತನಾಡಿರುವ ನವ್ಯಶ್ರೀ, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳು ಸುಳ್ಳು. ಇದೊಂದು ಷಡ್ಯಂತ್ರ ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ನವ್ಯಶ್ರೀ, ಕಳೆದ 15 ದಿನಗಳಿಂದ ನಾನು ಭಾರತದಲ್ಲಿ ಇರಲಿಲ್ಲ. ದುಬೈಗೆ ಹೋಗಿದ್ದೆ. ಅಲ್ಲಿ ನನಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವಿತ್ತು. ನಾನು ದುಬೈನಿಂದ ನಿನ್ನೆ ಬಂದಿದ್ದು, ಬರುವಷ್ಟರಲ್ಲಿ ನನ್ನ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ನನ್ನ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ರಾಜ್ಯದ ಯಾವುದೇ ಭಾಗದಲ್ಲಿಯೂ ನನ್ನ ವಿರುದ್ಧ ಯಾವುದೇ ಕೇಸ್ ಗಳಿಲ್ಲ. ಈಗ ಇದ್ದಕ್ಕಿದ್ದಂತೆ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಾನು ನವ್ಯಶ್ರೀ ಫೌಂಡೇಶನ್ ಮೂಲಕ ನನ್ನ ಕೈಲಾದ ಸಮಾಜ ಸೇವೆಯನ್ನು ಮಾಡುತ್ತಿದ್ದೇನೆ. ರಾಜಕುಮಾರ್ ಅವರಿಗೆ ನಾನು ತೊಂದರೆ ಕೊಟ್ಟಿದ್ದೇನೆ ಎಂಬುದು ಸುಳ್ಳು. ನನ್ನಿಂದ ಅವರಿಗೆ ಯಾವುದೇ ತೊಂದರೆ, ಸಮಸ್ಯೆಯೂ ಆಗಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ಜೊತೆಗೆ ಪಕ್ಷದ ಹೆಸರನ್ನು ಎಳೆದು ತರಲಾಗುತ್ತಿದೆ. ಇದರ ಹಿಂದೆ ಬೇರೆ ಯಾರದ್ದೋ ಕೈವಾಡವಿದೆ. ಇದು ನನ್ನ ವಿರುದ್ಧ ನಡೆದಿರುವ ಷಡ್ಯಂತ್ರ. ನಾನು ಕಮಿಷನರ್ ಅವರ್ನ್ನು ಭೇಟಿಯಾಗಿ ದೂರು ನೀಡಿದ್ದೇನೆ ಎಂದು ಹೇಳಿದರು.

ಇನ್ನು ನನಗೆ ಒಂದು ದಿನ ಅವಕಾಶ ನೀಡಿ. ಎಲ್ಲಾ ದಾಖಲೆಗಳ ಸಮೇತ ನಾಳೆ ನಾನೇ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟ ಪಡಿಸುತ್ತೇನೆ ಎಂದು ಹೇಳಿದರು.

ನವ್ಯಶ್ರೀ ರಾಮಚಂದ್ರರಾವ್ 2018ರ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಬಳಿಕ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದಾರೆ.
ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ವಿರುದ್ಧ ಬೆಳಗಾವಿಯಲ್ಲಿ FIR ದಾಖಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button