Latest

2022ರಲ್ಲಿ 2 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ ಗಳ ಕಾರ್ಯಾಚರಣೆ ಸ್ಥಗಿತ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 2022 ರಲ್ಲಿ ಸುಮಾರು 2,000 ಭಾರತೀಯ ಸ್ಟಾರ್ಟ್‌ಅಪ್‌ಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದಾಗಿ ವರದಿಯೊಂದು ಹೇಳಿದೆ.

2021 ರಲ್ಲಿ 975 ರಷ್ಟಿದ್ದ ಮುಚ್ಚಿಹೋದ ಭಾರತೀಯ ಸ್ಟಾರ್ಟ್‌ಅಪ್‌ಗಳ ಸಂಖ್ಯೆ  2022 ರಲ್ಲಿ 1,996 ಕ್ಕೆ ಏರಿದೆ ಎಂದು ಟ್ರ್ಯಾಕ್‌ಎಕ್ಸ್‌ಎನ್‌ ವರದಿ ತೋರಿಸಿದೆ. ಸ್ಟಾರ್ಟ್‌ಅಪ್‌ಗಳು 2022 ರ ಮೂರನೇ ತ್ರೈಮಾಸಿಕದಲ್ಲಿ 3 ಶತಕೋಟಿ ಡಾಲರ್ ಸಂಗ್ರಹಿಸಿವೆ. ಇದು ಕಳೆದ ವರ್ಷ ಇದೇ ಸಮಯದಲ್ಲಿ ಸಂಗ್ರಹಿಸಿದ ನಿಧಿಗಿಂತ ಮೂರು ಪಟ್ಟು ಕಡಿಮೆಯಾಗಿದೆ ಎಂದು ಅದು ಸೇರಿಸಿದೆ.

ರಾಜಧಾನಿ ಬೆಂಗಳೂರಿನ ಆನ್‌ಲೈನ್ ಆಹಾರ ಮತ್ತು ದಿನಸಿ ವಿತರಣಾ ಕಂಪನಿಗಳಲ್ಲಿ ಮೂರನೇ ಒಂದು ಭಾಗದಷ್ಟು ಕಂಪನಿಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.

ಸ್ಟಾರ್ಟ್ಅಪ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಟ್ರ್ಯಾಕ್‌ಎಕ್ಸ್‌ಎನ್‌ ಈ ಕುರಿತ ಡೇಟಾ ಬಹಿರಂಗಪಡಿಸಿದೆ. ದೊಡ್ಡ ಉದ್ದಿಮೆದಾರರು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದು, ಅವರ ಸಣ್ಣ ಸಹವರ್ತಿಗಳಿಗೆ ಕಡಿಮೆ ಅವಕಾಶ ಬಿಟ್ಟುಕೊಡುವುದರಿಂದ ಈ ಬೆಳವಣಿಗೆಗಳಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಟ್ರ್ಯಾಕ್‌ಎಕ್ಸ್‌ಎನ್‌ ಪ್ರಕಾರ ಬೆಂಗಳೂರಿನಲ್ಲಿ 383 ಆಹಾರ ಮತ್ತು ದಿನಸಿ ವಿತರಣಾ  ಆ್ಯಪ್ ಗಳಲ್ಲಿ 129 ಈಗಾಗಲೇ ಮುಚ್ಚಿವೆ.

ನವೆಂಬರ್ ಕೊನೆಯ ವಾರದಲ್ಲಿ, ಹಣ್ಣಿನ ವಿತರಣಾ ಆ್ಯಪ್, ಜುಝಿ, ಪ್ರತಿಕೂಲ  ಆರ್ಥಿಕ ಸ್ಥಿತಿಗತಿಗಳನ್ನು ಉಲ್ಲೇಖಿಸಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ.

ಕಂಪನಿಯ ಎಕ್ಸಿಕ್ಯೂಟೀವ್ ಗಳಿಗೆ ಗ್ರಾಹಕರಿಂದ ಮಾಡಲಾದ ಕರೆಗಳಿಗೆ ಯಾವುದೇ ನಿರ್ದಿಷ್ಟ ಉತ್ತರಗಳನ್ನು ನೀಡಲಾಗುತ್ತಿಲ್ಲ. ಅಪರೂಪಕ್ಕೆ ಸ್ವೀಕರಿಸಲಾದ ಕರೆಗೆ ಇ-ಮೇಲ್ ಗಳ ಮೂಲಕ ದೊರೆಯುವ ಉತ್ತರಗಳು ಗ್ರಾಹಕರಿಗೆ ದಿಗ್ಭ್ರಮೆ ಮೂಡಿಸಿವೆ.

ಬೆಂಗಳೂರು 11,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಹೊಂದಿದ್ದರೂ, ಹೆಚ್ಚಿನ ಗಮನ ಅಗಾಧವಾಗಿ ಬೆಳೆದ ಓಲಾ, ಬೈಜುಸ್, ಸ್ವಿಗ್ಗಿ ಮತ್ತಿತರ ಕಂಪನಿಗಳ ಮೇಲೆ ಕೇಂದ್ರೀಕೃತವಾಗಿದೆ. ಇವರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಮಾರುಕಟ್ಟೆಯ ಸಿಂಹಪಾಲನ್ನು  ಆಕ್ರಮಿಸಿಕೊಂಡು ಶತಕೋಟಿ-ಡಾಲರ್ ಮೌಲ್ಯಮಾಪನದಲ್ಲಿ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಪ್ಯಾನ್-ಇಂಡಿಯಾ ಅಂಕಿಅಂಶವು ಆಶ್ಚರ್ಯಕರವಾಗಿದೆ. 2021 ರಿಂದ ಕಾರ್ಯಾಚರಣೆ ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಿಸಿದ ದೇಶಾದ್ಯಂತದ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ದ್ವಿಗುಣಗೊಂಡಿದೆ. ಟ್ರ್ಯಾಕ್‌ಎಕ್ಸ್‌ಎನ್‌ನ ಡೇಟಾ ಮಾತ್ರ  ಹಲವಾರು ಕಂಪನಿಗಳು ಆರ್ಥಿಕ ಬಿಕ್ಕಟ್ಟು ಎದುರಿಸುವುದನ್ನು ತೋರಿಸುತ್ತಿದೆ.

ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ; ಐವರ ದುರ್ಮರಣ, 49 ಜನರಿಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button