ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಉತ್ತರ ಕರ್ನಾಟಕದ ಪ್ರಥಮ ನರರೋಗ ಶಸ್ತ್ರಚಿಕಿತ್ಸಕರಾದ ಮೂಲತಃ ಬೈಲಹೊಂಗಲ ಪಟ್ಟಣದ ನಿವಾಸಿ ಹಾಗೂ ಸದ್ಯಕ್ಕೆ ಸದಾಶಿವ ನಗರದಲ್ಲಿ ವಾಸಿಸುತ್ತಿದ್ದ ಡಾ. ಶಂಬುಲಿಂಗ ಶ್ರೀಶೈಲಪ್ಪ ಮಹಾಂತಶೆಟ್ಟಿ (೬೯ ವರ್ಷ) ಇಂದು ಸಂಜೆ ಲಿಂಗೈಕ್ಯರಾಗಿದ್ದಾರೆ.
ಮೃತರು ಇಬ್ಬರು ಪುತ್ರಿಯರು, ಧರ್ಮಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಅತ್ಯಂತ ಮಿತಭಾಷಿ, ಸರಳ ಸಜ್ಜನ ಡಾ. ಶಂಬುಲಿಂಗ ಅವರು ತಮ್ಮ ವೃತ್ತಿ ಜೀವನವನ್ನು ೧೯೮೦ ರಿಂದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಜವಾಹರ ಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾರಂಭಿಸಿ ಈ ಭಾಗದಲ್ಲಿ ನರಶಸ್ತ್ರಚಿಕಿತ್ಸೆಕರ ಕೊರತೆಯನ್ನು ನೀಗಿಸಿ, ಅನೇಕ ಜನರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸುಮಾರು ೪೦ ವರ್ಷಗಳ ಕಾಲ ನಿರಂತರ ಶಸ್ತ್ರಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದ ಡಾ. ಮಹಾಂತಶೆಟ್ಟಿ ಅವರು ಅತೀ ಹೆಚ್ಚು ನರಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದರು. ಇವರ ಸಾಧನೆಯನ್ನು ಗುರುತಿಸಿದ ಅನೇಕ ಸಂಘಸಂಸ್ಥೆಗಳು ಸತ್ಕರಿಸಿದರೆ, ಜೀವಮಾನ ಸಾಧನೆಗಾಗಿ ಕೆಎಲ್‌ಇ ವಿಶ್ವವಿದ್ಯಾಲಯವು ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ. ಎಸ್ ಎಸ್ ಮಹಾಂತಶೆಟ್ಟಿ ಅವರ ಧರ್ಮಪತ್ನಿ ಡಾ ನಿರಂಜನಾ ಮಹಾಂತಶೆಟ್ಟಿ ಅವರು ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಕೋರೆ ಶೋಕ: ಅತ್ಯಂತ ಸರಳ ಸಜ್ಜನ ಮಿತಭಾಷಿಯಾದ ಡಾ. ಶಂಬುಲಿಂಗ ಅವರು ವೈದ್ಯಕೀಯ ಕ್ಷೇತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡವರಲ್ಲ. ಚಾಕಚಕ್ಯತೆಯ ಪ್ರಯೋಗಗಳ ಮೂಲಕ ನರಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಅನೇಕ ಜನರ ಜೀವ ಉಳಿಸುತ್ತಿದ್ದ ಹಾಗೂ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಬೆಳವಣೆಗೆಯಲ್ಲಿ ತಮ್ಮ ಸಲಹೆ ಮೂಲಕ ಅಭಿವೃದ್ದಿಪಥಕ್ಕೆ ಕೊಂಡೊಯ್ಯುತ್ತಿದ್ದ ಅವರ ಸಾವು ನನಗೆ ಅತೀವ ದುಃಖ ತರಿಸಿದೆ. ಅತ್ಯಂತ ಆತ್ಮೀಯರಾಗಿ, ಸಲಹೆಗಾರರಾಗಿದ್ದರು. ಅವರ ನಿಧನದಿಂದ ನಾನು ಓರ್ವ ಚಾಣಾಕ್ಷ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ ಎಂದು ಕೆಎಲ್‌ಇ ಸಂಸ್ಥೆ ಕಾರ‍್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಪ್ರಭಾಕರ ಕೋರೆ ಅವರು ಶೋಕ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ