*- ಲೋಕಸಭೆ ಅಖಾಡಕ್ಕೆ ಕಟೀಲ್ ಬದಲು ಬ್ರಿಜೇಶ್ ಚೌಟ, ಮಹೇಶ್ ವಿಕ್ರಮ್ ಹೆಗ್ಡೆ ಹೆಸರು ಚಾಲ್ತಿಗೆ*
*- ಕುತೂಹಲ ಮೂಡಿಸಿದೆ BJP ನಡೆ; ಮಹೇಶ್ ವಿಕ್ರಮ್ ಹೆಗ್ಡೆಗೆ ಬಿಜೆಪಿ ರಾಷ್ಟ್ರೀಯ ನಾಯಕರಿಂದ ದೆಹಲಿಗೆ ಬುಲಾವ್*
ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಲೋಕಸಭೆ ಚುನಾವಣೆ ಇನ್ನೇನು ಎದುರಾಗುತ್ತಿದೆ. ಆದರ ಬೆನ್ನಲ್ಲೇ ಹಾಲಿ- ಮಾಜಿಗಳಲ್ಲಿ ಟಿಕೇಟ್ ಗುಮ್ಮ ಆವರಿಸಿದೆ. ಇದಕ್ಕೆ ಕರಾವಳಿ ಪ್ರದೇಶ ದಕ್ಷಿಣ ಕನ್ನಡವೂ ಹೊರತಲ್ಲ.
ಹೌದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸದ್ಯ ಬಿಜೆಪಿ- ಕಾಂಗ್ರೆಸ್ ನಲ್ಲಿ ಟಿಕೆಟ್ ಗುಮ್ಮ ಹಾಲಿ ಮಾತ್ರವಲ್ಲ ಹೊಸ ಆಕಾಂಕ್ಷಿಗಳನ್ನು ಕಾಡುತ್ತಿದೆ.
ಅಚ್ಚರಿಯ ಅಭ್ಯರ್ಥಿ ಆಯ್ಕೆಯಲ್ಲಿ ಯಾವತ್ತೂ ಮುಂದಿರುವ ಕಮಲ ಪಾಳೆಯದ ನಡೆ ಕರಾವಳಿ ಪಾಲಿಗೆ ತುಸು ನಿಗೂಢ ಎನಿಸಿದರೂ
ತೀವ್ರ ಅಚ್ಚರಿ ಮೂಡಿಸುವಂತಿದೆ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಹೊಸ ಮುಖದ ನಿರೀಕ್ಷೆಯಲ್ಲಿದ್ದಾರೆ. ಕರಾವಳಿಯಲ್ಲಿ *ಹಿಂದೂ ಬ್ರ್ಯಾಂಡ್* ಮಂಕಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.
ಇತ್ತೀಚೆಗೆ, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹೊಣೆ ಹೊತ್ತಿದ್ದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಿಂದೂಗಳ ರಕ್ಷಣೆಗೆ ನಿಲ್ಲುತ್ತಿಲ್ಲ ಎಂಬ ಪ್ರಬಲ ಆರೋಪ, ಆಕ್ರೋಶ ಕೇಳಿ ಬರುತ್ತಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಬೇರೆಯದ್ದೇ ಚಿಂತನೆ ನಡೆಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಜತೆಗೆ ಪಕ್ಷದಲ್ಲಿ ಆಂತರಿಕವಾಗಿ ಮತ್ತು ಸಾರ್ವಜನಿಕವಾಗಿ ಸಹ ಪ್ರಬಲ ಕೂಗು ಕೇಳಿ ಬರುತ್ತಿದೆ.
ಈ ಬಾರಿ ನಳಿನ್ ಕುಮಾರ್ ಕಟೀಲ್ ಬದಲು ರಾಷ್ಟ್ರೀಯತೆ, ಸಾಮಾಜಿಕ ಹಾಗೂ ಹಿಂದೂಪರ ಕೆಲಸ ಮಾಡುತ್ತಿರುವ ಮುಖಂಡರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ತಮ್ಮದೇ ವರಸೆಯಲ್ಲಿ ವರಿಷ್ಠರೆದುರು ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗುತ್ತಿದೆ.
ಕಟೀಲ್ ಗೆ ಬಿಜೆಪಿ ಟಿಕೆಟ್ ತಪ್ಪಿಸಲು ಸಾಧ್ಯವೇ? ಎಂಬ ಅನುಮಾನ ಇದೆಯಾದರೂ ತೆರೆಮರೆಯಲ್ಲಿ ಒಂದಷ್ಟು ಅಚ್ಚರಿ ಬೆಳೆವಣಿಗೆಗಳು ಸದ್ದಿಲ್ಲದೆ ನಡೆಯುತ್ತಿದೆ ಎಂಬುದೂ ಅಷ್ಟೇ ಸತ್ಯ.
*ಬ್ರಿಜೇಶ್ ಚೌಟ, ಮಹೇಶ್ ವಿಕ್ರಮ್ ಹೆಗ್ಡೆ ಅಚ್ಚರಿ ಹೆಸರು ಚಾಲ್ತಿ*:
ಸ್ಥಳೀಯ ಮಟ್ಟದಲ್ಲಿ ಹಿಂದೂಪರ ಕೆಲಸ ಮಾಡುತ್ತಿರುವ ಬ್ರಿಜೇಶ್ ಚೌಟ ಹಾಗೂ ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಮ್ ಹೆಗ್ಡೆ ಈರ್ವರ ಬಗ್ಗೆ ಬಿಜೆಪಿ ಯುವ ಕಾರ್ಯಕರ್ತರು ಒಲವು ತೋರುತ್ತಿದ್ದಾರೆ.
*ವಿಕ್ರಮ್ ಹೆಗ್ಡೆ ಹೆಸರೇಕೆ?*:
ಮೋದಿ ಪ್ರಧಾನಿಯಾದ ಬಳಿಕ ರಾಷ್ಟ್ರೀಯತೆ, ಸಿದ್ಧಾಂತಕ್ಕಾಗಿ ಪೋಸ್ಟ್ ಕಾರ್ಡ್ ಆರಂಭಿಸಿ ಗಮನ ಸೆಳೆದಿದ್ದಾರೆ ಮಹೇಶ್ ಹೆಗ್ಡೆ. ಹೀಗಾಗಿ ಸ್ಚತಃ ಮೋದಿ ಅವರೇ ಟ್ವೀಟರ್ ನಲ್ಲಿ ಇವರನ್ನು ಫಾಲೋ ಮಾಡುವ ಹಂತಕ್ಕೆ ಹೆಸರಾಗಿದ್ದಾರೆ ಮಹೇಶ ವಿಕ್ರಮ್ ಹೆಗ್ಡೆ.
ವಿಶೇಷವಾಗಿ ಹಿಂದೂ ಕಾರ್ಯಕರ್ತರ ಹತ್ಯೆಗಳಾದಾಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನೇ ನಡೆಸಿ ನೊಂದ ಕುಟುಂಬಗಳಿಗೆ ಆರ್ಥಿಕ ನೆರವು ಕಲ್ಪಿಸಿದ ಸಹೃದಯಿ. ಹೀಗಾಗಿ ದಕ್ಷಿಣ ಕನ್ನಡದ ಹಿಂದೂ ಕಾರ್ಯಕರ್ತರು ಈಗ ಲೋಕಸಭೆ ಟಿಕೆಟ್ ಗೆ ಇವರ ಹೆಸರನ್ನ ಚಾಲ್ತಿಗೆ ತಂದಿದ್ದಾರೆ.
ಶಿವಮೊಗ್ಗದ ಹರ್ಷ ಹತ್ಯೆ ವೇಳೆ ಪೋಸ್ಟ್ ಕಾರ್ಡ್ ಅಭಿಯಾನದ ಮೂಲಕವೇ ಸಂತ್ರಸ್ತ ಕುಟುಂಬಕ್ಕೆ ಬರೋಬ್ಬರಿ 86 ಲಕ್ಷ ರು. ಆರ್ಥಿಕ ನೆರವು ಒದಗಿಸಿ ಜನಮನ ಗೆದ್ದವರು. ಪ್ರವೀಣ್ ನೆಟ್ಟಾರ ಹತ್ಯೆಯಾದಾಗ ಕುಟುಂಬಕ್ಕೆ 38 ಲಕ್ಷ ರು. ಹರಿದು ಬಂದಿತ್ತು. ಕುಟುಂಬದವರ ಖಾತೆಗೆ ನೇರವಾಗಿ ಹಣ ಜಮಾ ಮಾಡಿಸುವ ಪಾರದರ್ಶಕ ಅಭಿಯಾನಕ್ಕೆ ವಿಕ್ರಮ್ ಹೆಗ್ಡೆ ವಿಶ್ವಾಸಿಗರು.
ವಿಶೇಷವಾಗಿ ಕಲ್ಲಡ್ಕ್ ಪ್ರಭಾಕರ್ ಅವರ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಮಧ್ಯಾಹ್ನದ ಬಿಸಿ ಉಟಕ್ಕೆ ಸರ್ಕಾರ ಅನುದಾನ ಕಡಿತ ಮಾಡಿದಾಗ *ಭೀಕ್ಷಾಂದೇಹಿ* ಎಂಬ ಅಭಿಯಾನಕ್ಕೆ ಕರೆ ಕೊಟ್ಟಿದ್ದ ಮಹೇಶ್ ವಿಕ್ರಮ್ ಹೆಗ್ಡೆ ದೊಡ್ಡ ಪ್ರಮಾಣದಲ್ಲಿ ನೆರವು ಹರಿದು ಬರುವಂತೆ ನೋಡಿಕೊಂಡು ಸಂಘ ಪರಿವಾರಕ್ಕೂ ಅತ್ಯಂತ ಹತ್ತಿರವಾದವರು.
ವಿಕ್ರಮ ಫೌಂಡೇಶನ್ ಅಡಿಯಲ್ಲಿ 100 ಮಕ್ಕಳನ್ನು ದತ್ತು ಪಡೆದು ಅವರ ಅಕ್ಷರಭ್ಯಾಸಕ್ಕೆ, ಭವಿಷ್ಯಕ್ಕೆ ಬೆಳಕಾಗಿದ್ದಾರೆ. ಜಾತಿ-ಮತ ನೋಡದೇ ಎಲ್ಲ ಧರ್ಮದ ಬಡ ಮಕ್ಕಳಿಗೆ ನೆರವಿನ ಹಸ್ತ ಚಾಚಿದ್ದಾರೆ.
ಸುಳ್ಯದ ಕಡು ಬಡವರಿಗೆ ಮನೆ ಕಟ್ಟಿಸಿ ಕೊಡುವ ಮೂಲಕ ವಸತಿ ಭಾಗ್ಯ ಕಲ್ಪಿಸಿದ್ದಾರೆ. ಇದೆಲ್ಲವನ್ನೂ ಬಹು ಸೂಕ್ಷ್ಮವಾಗಿ ಗಮನಿಸಿರುವ ಹಿಂದೂ ಕಾರ್ಯಕರ್ತರು ಈಗ ಲೋಕಸಭೆಗೆ ಬ್ರಿಜೇಶ್ ಚೌಟ ಅಥವಾ ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗಿದೆ.
*ಕಟೀಲ್ ಗೆ ಏಕೆ ವಿರೋಧ*:
ಪ್ರವೀಣ್ ನೆಟ್ಟಾರ ಹತ್ಯೆ ಆದಾಗಲೇ ದಕ್ಷಿಣ ಕನ್ನಡದಲ್ಲಿ ಕಟ್ ವಿರುದ್ಧ ಹಿಂದೂ ಕಾರ್ಯಕರ್ತರು ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದರು.
ಬಿಜೆಪಿ ಸರ್ಕಾರವಿದ್ದೂ, ಕಟೀಲ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೂ ಹಿಂದೂ ಕಾರ್ಯಕರ್ತರ ರಕ್ಷಣೆಗೆ ಏನೂ ಮಾಡಲಿಲ್ಲ ಎಂಬ ಅಸಮಾಧಾನ ಮನೆ ಮಾಡಿದೆ ಸ್ಥಳೀಯ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರಲ್ಲಿ.
ಇನ್ನು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತಿಲ ಅವರಿಗೆ ಟಿಕೆಟ್ ತಪ್ಪಿದಾಗ ಕಟೀಲ್ ವಿರುದ್ಧ ಇನ್ನಷ್ಟು ಹೆಚ್ಚಾದ ಆಕ್ರೋಶ ಈಗಲೂ ತಣಿದಿಲ್ಲ.
*ಕೈ ತಂತ್ರವೇನು? :*
ಹಿಂದುತ್ವದ ಮೇಲೆಯೇ ಚುನಾವಣೆ ನಡೆಯುವ ಮಂಗಳೂರಿನಲ್ಲಿ ಜಾತಿವಾರು ರಾಜಕಾರಣ ಅಷ್ಟೊಂದು ಪ್ರಭಾವ ಬೀರಿಲ್ಲ. ಆದರೂ ಒಂದು ವೇಳೆ ಕಟೀಲ್ ಬದಲು ಬಿಜೆಪಿ, ಬಂಟ ಸಮುದಾಯದ ಬ್ರಿಜೇಶ್ ಚೌಟ ಅಥವಾ ಮಹೇಶ್ ವಿಕ್ರಮ್ ಹೆಗ್ಡೆಗೆ ಟಿಕೇಟ್ ನೀಡಿದರೆ ಕಾಂಗ್ರೆಸ್ ಈಡಿಗ-ಬಿಲ್ಲವ ಸಮುದಾಯದ ವಿನಯ ಕುಮಾರ್ ಸೊರಕೆಯನ್ನ ಕಣಕ್ಕಿಳಿಸಲು ತಂತ್ರ ಹೆಣೆಯುತ್ತಿದೆ.
ಈ ಹಿಂದೆ ಬಂಟ ಸಮುದಾಯದ ಮಿಥುನ್ ರೈ ಗೆ ಟಿಕೆಟ್ ನೀಡಿದ್ದ ಕಾಂಗ್ರೆಸ್ ಈ ಬಾರಿ ತನ್ನ ತಂತ್ರವನ್ನು ಬದಲಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ