Belagavi NewsBelgaum NewsElection NewsKannada NewsKarnataka NewsPolitics

ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ 

*

* *2 ದಿನ 9 ಜಿಪಂ ಕ್ಷೇತ್ರದಲ್ಲಿ ನಿರಂತರ ಸಭೆ ನಡೆಸಿದ ಸಚಿವರು, ಮುಖಂಡರು*

 ಪ್ರಗತಿವಾಹಿನಿ ಸುದ್ದಿ, *ಕೊಣ್ಣೂರ (ಗೋಕಾಕ್) :*  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎರಡು ದಿನಗಳ ಕಾಲ ಸ್ಛಥಳೀಯ ಮುಖಂಡರೊಂದಿಗೆ ಗೋಕಾಕ್ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡರು. 

  ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಪರ ಗೋಕಾಕ್ ಕ್ಷೇತ್ರದ 9  ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಮಾವೇಶಗಳನ್ನು ಆಯೋಜಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸ ಚೈತನ್ಯ ತುಂಬಿದರು. ಗೋಕಾಕ್ ಕ್ಷೇತ್ರದ ಪ್ರಚಾರದ ಎರಡನೇ ದಿನವಾದ ಸೋಮವಾರ ಅಂಕಲಗಿ, ಸಾವಳಗಿ, ಕೊಣ್ಣೂರ ಹಾಗೂ ಘಟಪ್ರಭಾದಲ್ಲಿ ಸಚಿವರು ಪ್ರಚಾರ ನಡೆಸಿದರು. 

ಕೊಣ್ಣೂರಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷದಿಂದ ಮಾತ್ರ ಬಡವರ, ದಿನದಲಿತರ ಅಲ್ಪಸಂಖ್ಯಾತರ ಅಭಿವೃದ್ಧಿ ಸಾಧ್ಯ. ಪಂಚ ಗ್ಯಾರಂಟಿ ಯೋಜನೆಗಳು ಇವತ್ತು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಮನೆ ಮನೆಗೆ ತಲುಪುತ್ತಿವೆ. ಅದರಲ್ಲೂ ಗೃಹಲಕ್ಷ್ಮಿಯಂತ ಯೋಜನೆ ಇಡೀ‌ ವಿಶ್ವದಲ್ಲೆ ಇಂಥ ಯೋಜನೆ ಇಲ್ಲ‌. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ದೂರದೃಷ್ಟಿಯ ಫಲವಾಗಿ ಇವತ್ತು ನಮ್ಮ ಮನೆಯ ಒಡತಿಯರಿಗೆ 2 ಸಾವಿರ‌ ರೂಪಾಯಿ ನೀಡಲಾಗುತ್ತಿದೆ ಎಂದರು. 

ಸ್ವಾಭಿಮಾನಿ ಬೆಳಗಾವಿ ಜನರು ಮನೆ ಮಗನಿಗೆ ಬೆಂಬಲ ನೀಡಿ. ಕಳೆದ ಐದು ಬಾರಿ ಬಿಜೆಪಿ ಸಂಸದರಿದ್ದರೂ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು. ಜಿಲ್ಲೆಯ ನಾಡಿ ಮಿಡಿತ ಅರಿತಿರುವ ನಿಮ್ಮ ಮನೆ ಮಗ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಬೆಂಬಲಿಸಿ ಎಂದು ಸಚಿವರು ಮನವಿ ಮಾಡಿದರು. 

 *ತಾಯಿ-ಮಗ ಡಬಲ್ ಎಂಜಿನ್ ಇದ್ದಂತೆ* 

ಗೋಕಾಕ್ ಕ್ಷೇತ್ರದಲ್ಲಿ ಜನ ಭಯಭೀತರಾಗಿದ್ದಾರೆ. ಇಂಥ ಭಯ ಹೋಗಬೇಕೆಂದರೆ ಜನರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮುಖಂಡರಾದ ಡಾ.ಮಹಾಂತೇಶ್ ಕಡಾಡಿ ಹೇಳಿದರು. ನಮ್ಮ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಯೋಗ್ಯವಂತ, ಗುಣವಂತ ಹಾಗೂ ವಿದ್ಯಾವಂತ ಕೂಡ. ತಾಯಿ ಲಕ್ಷ್ಮೀ ಹೆಬ್ಬಾಳ್ಕರ್ ಮಂತ್ರಿಯಾಗಿದ್ದು, ಮಗ ಲೋಕಸಭಾ ಸದಸ್ಯರಾದರೆ ‘ಡಬಲ್ ಎಂಜಿನ್’ ಮಾದರಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು ಎಂದು ಕಡಾಡಿ ಹೇಳಿದರು. 

 *ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಮಾಡಿಕೊಡಿ: ಮೃಣಾಲ್‌ ಮನವಿ* 

ಬಿಜೆಪಿಯವರು ಸ್ಥಳೀಯ ಅಭ್ಯರ್ಥಿಗೆ ಮಣೆಹಾಕದೆ ದೂರದ ಹುಬ್ಬಳ್ಳಿ ವ್ಯಕ್ತಿಗೆ ಮಣೆ ಹಾಕಿದ್ದಾರೆ. ಹಿಂದೆ ಬೆಳಗಾವಿ ಜಿಲ್ಲೆಗೆ ಸಾಕಷ್ಟು ಅನ್ಯಾಯ ಎಸಗಿದ್ದ ಜಗದೀಶ್ ಶೆಟ್ಟರ್ ಇವತ್ತು ನನ್ನ ಕರ್ಮ ಭೂಮಿ ಎಂದು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಟೀಕಿಸಿದರು. ಗೋಕಾಕ್ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದನ್ನು ನೋಡುತ್ತಿದ್ದರೆ ಕಾಂಗ್ರೆಸ್ ಗೆಲುವು ಗ್ಯಾರಂಟಿ ಎಂದು ಹೇಳಿದರು. 

 *ಸಚಿವರಿಗೆ ಡಾ.ಮಹಾಂತೇಶ್ ಕಡಾಡಿ, ಅಶೋಕ್ ಪೂಜಾರಿ ಸಾಥ್*

ಎರಡು ದಿನಗಳ ಗೋಕಾಕ್ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸ್ಥಳೀಯ ಮುಖಂಡರಾದ ಡಾ.ಮಹಾಂತೇಶ್ ಕಡಾಡಿ ಹಾಗೂ‌ ಅಶೋಕ್ ಪೂಜಾರಿ ಸಾಥ್ ನೀಡಿದರು. ಎರಡು ದಿನಗಳಲ್ಲಿ 9  ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿತ್ತು. ಅಚ್ಚುಕಟ್ಟಾಗಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಕಾರ್ಯಕರ್ತರು ಮೆಚ್ಚುಗೆಗೆ ಪಾತ್ರರಾದರು. ಸ್ಥಳೀಯ ಮುಖಂಡರು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಸಚಿವರು ಭೇಟಿ ನೀಡುವಾಗಲೂ‌ ಪ್ರಮುಖರು, ಕಾರ್ಯಕರ್ತರು  ಸಾಥ್ ನೀಡಿದರು.

 *ಮಠ, ಮಂದಿರಗಳಿಗೆ ಭೇಟಿ** 

 ಅಂಕಲಗಿಯಲ್ಲಿರುವ ಪಾವನ ಕ್ಷೇತ್ರ ಶ್ರೀ ಅಡವಿ ಸಿದ್ದೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ ಸಚಿವರು, ಶ್ರೀ ಅಮರ ಸಿದ್ದೇಶ್ವರ ಮಹಾ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಸಾವಳಗಿ ಗ್ರಾಮದಲ್ಲಿರುವ ಶಿವಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಸಚಿವರು ಹೋದಲೆಲ್ಲಾ ಕಡೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಗ್ರಾಮಸ್ಥರು ಹೂಮಳೆ ಸುರಿದು ಸ್ವಾಗತಿಸಿ ವೇದಿಕೆಗೆ ಬರಮಾಡಿಕೊಂಡರು‌. 

*ದಳವಾಯಿ ಕುಟುಂಬಕ್ಕೆ ಸಾಂತ್ವನ ಹೇಳಿದ‌‌ ಸಚಿವರು*

ಇತ್ತೀಚೆಗೆ ಮೃತಪಟ್ಟ ಘಟಪ್ರಭಾ ಗ್ರಾಮದ ವಿಕ್ರಮ್ ಡಿ. ದಳವಾಯಿ ಕುಟುಂಬದ ಸದಸ್ಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಸಾಂತ್ವನ ಹೇಳಿದರು. ವಿಕ್ರಮ್ ಡಿ‌ ದಳವಾಯಿ ಅವರು ಹಿರಿಯ ಮುಖಂಡರಾದ ಡಿ.ಎಂ.ದಳವಾಯಿ ಅವರ ಪುತ್ರ.

ಸ್ಥಳೀಯ  ಡಾ.ಮಹಾಂತೇಶ್ ಕಡಾಡಿ, ಅಶೋಕ್ ಪೂಜಾರಿ, ಚಂದ್ರಶೇಖರ ಕೊಣ್ಣೂರ ಮೊದಲಾದವರು ಸಚಿವರಿಗೆ ಪ್ರಚಾರದ ವೇಳೆ ಸಾಥ್ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button