ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಬದ್ಧ: ಪ್ರದೀಪಕುಮಾರ ಇಂಡಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ: ತಾಲೂಕಿನ ಪಿಜಿ ಹುಣಶ್ಯಾಳನಲ್ಲಿರುವ ಸತೀಶ ಶುಗರ್ಸ ಕಾರ್ಖಾನೆಯ ನೂತನ ಎಥೆನಾಲ್ ಘಟಕವನ್ನು ಚೇರಮನ್ನ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಎಂ ಇಂಡಿ ಉದ್ಘಾಟಿಸಿದರು.
ಈ ವೇಳೆ ಚೇರಮನ್ನ ಮತ್ತು ಸಿ.ಎಪ್.ಓ ಪ್ರದೀಪಕುಮಾರ ಎಂ ಇಂಡಿ ಅವರು ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ ಬೇಡಿಕೆಗಿಂತಲೂ ಅಧಿಕ ಕಬ್ಬು ಬೆಳೆಯಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳು ಬೇಡಿಕೆಗಿಂತ ಹೆಚ್ಚು ಉತ್ಪಾದನೆಯಾಗುವ ಸಕ್ಕರೆಯನ್ನಷ್ಟೇ ಉತ್ಪಾದನೆ ಮಾಡುವದರಿಂದ ಅಷೊಂದು ಲಾಭ ಬರುವುದಿಲ್ಲ. ಸಕ್ಕರೆ ಉತ್ಪಾದಿಸಿದ ಬಳಿಕ ಮಾರುಕಟ್ಟೆಯಲ್ಲಿ ದರ ಕಡಿಮೆಯಿದ್ದರೆ ಅದನ್ನು ಶೇಖರಣೆ ಮಾಡಿಕೊಳ್ಳಬೇಕು. ಹೀಗೆ ದಾಸ್ತಾನಾಗಿದ್ದ ಸಕ್ಕರೆ ಮಳೆ, ಗಾಳಿಗೆ ಹಾಳಾಗಿ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ.
ಇದರಿಂದ ಕಾರ್ಖಾನೆಗಳಿಗೆ ಆರ್ಥಿಕ ಸಂಕಷ್ಟಗಳು ಉಂಟಾಗುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರವು ಪರಿಸರ ಸ್ನೇಹಿ ಇಂಧನ ಮತ್ತು ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸಲು ಎಥೆನಾಲ್ ಮಿಶ್ರಿತ ಪೆಟೋಲ್(ಇಬಿಪಿ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಇದರಿಂದ ದೇಶದಲ್ಲಿ ಸಕ್ಕರೆ ಉತ್ಪಾದನೆಯನ್ನು ಮಿತಗೊಳಿಸಿ ಎಥೆನಾಲ್ ದೇಶಿಯ ಉತ್ಪಾದನೆಯನ್ನು ಹೆಚ್ಚಿಸಿ, ಕಚ್ಚಾ ತೈಲದ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯೊಂದಿಗೆ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಿದಂತಾಗುತ್ತದೆ.
ಕೇಂದ್ರ ಸರ್ಕಾರವು 2022 ರಲ್ಲಿ ಪೆಟ್ರೋಲ್ ನಲ್ಲಿ ಶೇ.10ರಷ್ಟು ಹಾಗೂ 2025ರಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡಲು ಯೋಜಿಸಿದೆ. ಇದರಿಂದ ಇಥೆನಾಲ್ ಪರ್ಯಾಯ ಇಂಧನವಾಗಿ ಬಳಕೆಯಾಗುವುದರಿಂದ ಕಾರ್ಖಾನೆಗಳು ಆರ್ಥಿಕ ನಷ್ಟದಿಂದ ಹೊರಬರಲು ಮತ್ತು ರೈತರಿಗೆ ಶೀಘ್ರದಲ್ಲಿ ಕಬ್ಬಿನ ದರ ನೀಡಲು ಮತ್ತು ರೈತರ ಆದಾಯ ಹೆಚ್ಚಿಸಲು ಮತ್ತು ಗ್ರಾಮೀಣ ಭಾಗದ ಜನತೆಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಎಥೆನಾಲ್ ಉತ್ಪಾದನೆಯು ಹೊಸ ಮಾರ್ಗವಾಗಿದೆ. ಅಲ್ಲದೇ ಇದರಿಂದ ಸರ್ಕಾರಕ್ಕೆ ವಿದೇಶಿ ವಿನಿಮಯ ಉಳಿತಾಯವಾಗಿ ಪೆಟ್ರೋಲ್‍ನ ರಿಟೇಲ್ ದರವನ್ನು ಕಡಿಮೆ ಮಾಡಿ ಜನ ಸಾಮಾನ್ಯರಿಗೆ ನೆರವಾಗಬಹುದಾಗಿದೆ ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಾಸಕ ಸತೀಶ ಜಾರಕಿಹೊಳಿ ರವರ ಮಾರ್ಗದರ್ಶನದಲ್ಲಿ ಕೇವಲ ಐದೂವರೆ ತಿಂಗಳುಗಳಲ್ಲಿ ಪ್ರತಿದಿನ 210 ಕೆ.ಎಲ್.ಪಿ.ಡಿ ಉತ್ಪಾದನಾ ಸಾಮಥ್ರ್ಯವುಳ್ಳ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ನೂತನ ಕೇನ್ ಸಿರಪ್ ಮತ್ತು ಗ್ರೇನ್ ಆಧಾರಿತ ಎಥೆನಾಲ್ ಘಟಕವನ್ನು ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟೋಲ್(ಇಬಿಪಿ) ಕಾರ್ಯಕ್ರಮದಡಿಯಲ್ಲಿ ನಿರ್ಮಿಸಲಾಗಿದೆ.
ಈ ದಾಖಲೆಯ ಘಟಕದ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಎಲ್ಲ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಿಗೂ, ಸ್ಥಳಿಯ ಸಂಸ್ಥೆಗಳಿಗೂ, ಎಲ್ಲ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಿಗೂ, ಪೂರೈಕೆದಾರರಿಗೂ, ಗ್ರಾಹಕರಿಗೂ ಎಲ್ಲ ಆಧಿಕಾರಿ ವರ್ಗದವರಿಗೂ, ಕಾರ್ಮಿಕ ಸಿಬ್ಬಂದಿ ವರ್ಗದವರಿಗೂ, ರೈತ ಬಾಂಧವರಿಗೂ, ಮತ್ತು ಕಾರ್ಖಾನೆಯ ಎಲ್ಲ ಶ್ರೇಯೋಭಿಲಾಷಿಗಳಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.
ರಿಗ್ರೀನ್ ಎಕ್ಸೆಲ್ ಇಪಿಸಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಯೋಜನಾ ನಿರ್ದೇಶಕರಾದ ಕಿರಣ ಗೌಳಿ ಯವರು ಮಾತನಾಡಿ, ಸತೀಶ ಶುಗರ್ಸ ಕಾರ್ಖಾನೆಯ ಈ ನೂತನ ಘಟಕದ ನಿರ್ಮಾಣ ಕಾರ್ಯದಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಪ್ರತಿಯೊಂದು ವಿಭಾಗದ ಕಾರ್ಮಿಕ ಹಾಗೂ ಸಿಬ್ಬಂದಿಯವರು ನೀಡಿರುವ ಸಹಕಾರ ಇವೆಲ್ಲವೂ ಸಾಧ್ಯವಾಗಿದೆ.
ಕಾರ್ಖಾನೆಯ ಸಿವೀಲ್ ವಿಭಾಗದ ಸಂಬಂಧಿತ ಎಲ್ಲ ಕೆಲಸಗಳನ್ನು ನಿಗಧಿತ ಅವಧಿಯಲ್ಲಿ ವ್ಯವಸ್ಥಿತವಾಗಿ ಪರಿಪೂರ್ಣಗೊಳಿಸಿ ಕೊಟ್ಟಿರುವುದು, ಸಧ್ಯದ ಕರೋನಾ ನಿಯಮಾವಳಿಗನುಗುಣವಾಗಿ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ತೋರಿದ ಅಭೂತಪೂರ್ವ ಸಹಕಾರ ಇರದೆ ಇದ್ದಿದ್ದರೆ, ನಮಗೆ ಇಂತಹ ಒಂದು ಬೃಹತ್ ಘಟಕದ ಸ್ಥಾಪನೆಯನ್ನು ಕೇವಲ ಐದೂವರೆ ತಿಂಗಳುಗಳಲ್ಲಿ ಪೂರ್ಣಗೊಳಿಸುವುದು ಕಷ್ಟಸಾಧ್ಯ ಎಂದರು.
ನಮ್ಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರಿಗೆ ಮತ್ತು ಆಡಳಿತ ಮಂಡಳಿಯ ಎಲ್ಲ ಸದಸ್ಯರಿಗೂ ಹಾಗೂ ಕಾರ್ಮಿಕ ಸಿಬ್ಬಂದಿಯವರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಮತ್ತು ಮುಂಬರುವ ದಿನಗಳಲ್ಲಿಯೂ ಸಹ ನಾವು ಸತೀಶ ಶುಗರ್ಸ ಸಮೂಹದೊಂದಿಗೆ ಇನ್ನು ಹೆಚ್ಚಿನ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ನಾನು ಅವರ ಹಾಗೆ ಬೇಜವಾಬ್ದಾರಿಯಿಂದ ಮಾತನಾಡಲ್ಲ ಎಂದ ಬಸವರಾಜ ಬೊಮ್ಮಾಯಿ; ಯಾರ ಹಾಗೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ