
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮಂತ್ರಾಲಯದಿಂದ ಮಕ್ಕಳ ಸಹಾಯವಾಣಿಯ ೧೦೯೮ ನೂತನ ಲೋಗೋ ಬಿಡುಗಡೆಗೊಳಿಸಲಾಗಿದೆ.
ರಕ್ಷಣೆ ಮತ್ತು ಆರೈಕೆ ಮಕ್ಕಳಿಗಾಗಿ ತುರ್ತು ಸೇವೆ ಒದಗಿಸುವ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುವ ಮಕ್ಕಳ ಉಚಿತ ಸಹಾಯವಾಣಿ ಸಂಖ್ಯೆ-೧೦೯೮ ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಿದ್ದು ಮಿಷನ್ ವಾತ್ಸಲ್ಯ ಯೋಜನೆ ಅನ್ವಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಮಕ್ಕಳ ಸಹಾಯವಾಣಿ ಘಟಕ ೧೦೯೮ನ್ನು ರಾಜ್ಯ ಸರ್ಕಾರವು ERSS/೧೧೨ ನೊಂದಿಗೆ ಏಕೀಕರಿಸಿ ಅನುಷ್ಠಾನಗೊಳಿಸಿದ್ದು ಮಕ್ಕಳ ರಕ್ಷಣಾ ನಿರ್ದೇಶನಾಲಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಮಕ್ಕಳ ಸಹಾಯವಾಣಿ ೧೦೯೮/೧೧೨ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ಕೆಲಸ ನಿರ್ವಹಿಸುತ್ತಿದೆ.
ಸಾರ್ವಜನಿಕರು, ಸಂಘ ಸಂಸ್ಥೆಯ ಮುಖ್ಯಸ್ಥರು, ಮಕ್ಕಳು, ಮಕ್ಕಳ ಸ್ನೇಹಿ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು, ಸಮಾಜದ ಯಾವುದೇ ವ್ಯಕ್ತಿಗಳು ಸಂಕಷ್ಟದಲ್ಲಿರುವ ಮಕ್ಕಳು ಅಂದರೆ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿರುವ ಸಂದರ್ಭದಲ್ಲಿ, ಬಾಲಕಾರ್ಮಿಕ ಮಕ್ಕಳು ಕಂಡಾಗ, ಕಾಣೆಯಾದ ಮಕ್ಕಳು, ದೈಹಿಕ ದಂಡನೆಗೆ ಒಳಗಾದ, ವಸತಿ ಅವಶ್ಯವಿರುವ ಮಕ್ಕಳು, ಭಿಕ್ಷಾಟನೆ/ಚಿಂದಿ ಆಯುವ ಮಕ್ಕಳು, ವೈದ್ಯಕೀಯ ಸಹಾಯ ಅವಶ್ಯವಿರುವ ಮಕ್ಕಳಿಗಾಗಿ, ಆಪ್ತಸಮಾಲೋಚನೆ ಅವಶ್ಯವಿರುವ ಮಕ್ಕಳು, ಮಾರಾಟ ಮತ್ತು ಸಾಗಾಣಿಕೆಗೆ ಒಳಗಾದ ಮಕ್ಕಳು, ನಿರ್ಗತಿಕ ಹಾಗೂ ಒಂಟಿ ಮಗು ಕಂಡು ಬಂದಲ್ಲಿ, ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ, ದೈಹಿಕ ಕಿರುಕುಳ/ಮಾನಸಿಕ ಕಿರುಕುಳಕ್ಕೊಳಗದ ಮಕ್ಕಳು, ನೆರೆ ಮತ್ತು ಪ್ರವಾಹ ಸಂತ್ರಸ್ತಕ್ಕೊಳಗಾದ ಮಕ್ಕಳು, ಮಾದಕ ವ್ಯಸನಕ್ಕೆ ಬಲಿಯಾದ ಮಕ್ಕಳು ಕಂಡು ಬಂದಾಗ ಮಕ್ಕಳ ಸಹಾಯವಾಣಿ-೧೦೯೮/೧೧೨ಗೆ ತುರ್ತು ಕರೆಗಳನ್ನು ಮಾಡಬಹುದಾಗಿದೆ.
ಈ ಹಿಂದೆ ಜಾರಿಯಲ್ಲಿರುವ ಮಕ್ಕಳ ಸಹಾಯವಾಣಿ ಲೋಗೋ ಬದಲಾಗಿ ಸರ್ಕಾರ ಬಿಡುಗಡೆಗೊಳಿಸಿದ ನೂತನ ಮಕ್ಕಳ ಸಹಾಯವಾಣಿ ಲೋಗೋವನ್ನು ಎಲ್ಲ ಸರ್ಕಾರಿ/ಖಾಸಗಿ ಶಾಲೆಗಳು, ಸರ್ಕಾರಿ ವಸತಿ ನಿಲಯಗಳ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ, ಗ್ರಾಮ ಪಂಚಾಯತಿಗಳ, ಅಂಗನವಾಡಿ ಕೇಂದ್ರಗಳ, ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೂಕ್ತ ಸ್ಥಳದ ಮೇಲೆ ಗೋಡೆ ಬರಹ ಬರೆಯಿಸಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಡಾ. ಪರ್ವಿನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.