ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಈಗ ಹೊಸ ಟೆನ್ಶನ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾವು ಈಗ ಹೊಸ ಟೆನ್ಶನ್ ನಲ್ಲಿ ಇರುವುದಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಹಿರಂಗಪಡಿಸಿದ್ದಾರೆ.

ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಭಾನುವಾರ 68ನೇ ಮಾಸಿಕ ಸುವಿಚಾರ ಚಿಂತನೆಯ ಅಂಗವಾಗಿ ಗುರು ಪೂರ್ಣಿಮೆ ಹಾಗೂ ದಿವ್ಯ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ಇಲ್ಲಿಗೆ ಬರುತ್ತಲೇ ಸ್ವಾಮಿಗಳು ಯಾಕೆ ಟೆನ್ಶನ್ ನಲ್ಲಿದ್ದೀರಿ ಎಂದು ಕೇಳಿದರು. ನಿಜವಾಗಿಯೂ ನಾನು ಟೆನ್ಶನ್ ನಲ್ಲಿದ್ದೇನೆ. ನಾನು ನನ್ನ ಗ್ರಾಮೀಣ ಕ್ಷೇತ್ರವನ್ನು ನನ್ನ ಕುಟುಂಬದಂತೆ ಕಂಡಿದ್ದೇನೆ. ಇಲ್ಲಿಯ ಜನರನ್ನು ಅಷ್ಟೊಂದು ಹಚ್ಚಿಕೊಂಡಿದ್ದೇನೆ. ಅವರನ್ನು ಬಿಟ್ಟಿರುವುದು ಕಷ್ಟ. ಮೊದಲೆಲ್ಲ ಅವರ ಬಂದ ತಕ್ಷಣ ಅವರ ಕಷ್ಟ ಸುಖ ಆಲಿಸಿ, ಪರಿಹರಿಸಿ ಕಳಿಸುತ್ತಿದ್ದೆ. ಆದರೆ ಈಗ ಮಂತ್ರಿಯಾದ ಮೇಲೆ ರಾಜ್ಯದ ಜನ ಬರುತ್ತಾರೆ, ಜಿಲ್ಲೆಯ ಜನ ಬರುತ್ತಾರೆ. ಎಲ್ಲರನ್ನೂ ಮಾತನಾಡಿಸಬೇಕಾಗಿದೆ. ಕಷ್ಟ ಸುಖ ಕೇಳಬೇಕಾಗಿದೆ. ಹಾಗಾಗಿ ನನ್ನನ್ನು ದೊಡ್ಡ ಬಹುಮತದಿಂದ ಆರಿಸಿ ಕಳಿಸಿರುವ ನನ್ನ ಮನೆಯ ಜನರನ್ನು ಮಾತನಾಡಿಸುವುದು ಕಷ್ಟವಾಗುತ್ತಿದೆ ಎನ್ನುವ ಟೆನ್ಶನ್ ನನಗೆ ಕಾಡುತ್ತಿದೆ ಎಂದು ಹೇಳಿದರು.
ಮನೆ ಗೆದ್ದು ಮಾರು ಗೆಲ್ಲು ಎನ್ನುತ್ತಾರೆ. ಹಾಗೆಯೇ ನಾನು ಗ್ರಾಮೀಣ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಿ ಅವರ ಕಷ್ಟ ಸುಖ ಪರಿಹರಿಸಿದರೆ ರಾಜ್ಯದಲ್ಲಿ ಸಾಧನೆ ಮಾಡಬಹುದು, ಹೆಸರು ಮಾಡಬಹುದು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದಷ್ಟು ಶೀಘ್ರದಲ್ಲೇ ಈ ಸಮಸ್ಯೆಗೆ ದಾರಿ ಕಂಡುಕೊಳ್ಳುತ್ತೇನೆ ಎಂದು ಅವರು ಹೇಳಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮಿಗಳು 2011ರಿಂದ ನನಗೆ ಆಶಿರ್ವಾದ, ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ. ಅವರ ಮಾತನ್ನು ಚಾಚೂ ತಪ್ಪದೆ ಕೇಳುತ್ತ ಬಂದಿದ್ದೇನೆ. ಮಠಗಳು ನಮ್ಮ ಸಂಸ್ಕೃತಿಯ ಪ್ರತೀಕ. ಅವು ಇದ್ದರೆ ಸಮಾಜ ಉಳಿಯುತ್ತದೆ, ಸಂಸ್ಕೃತಿ ಉಳಿಯುತ್ತದೆ. ಹಾಗಾಗಿ ಮಠಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ ನೆರವು ನೀಡಬೇಕಾಗಿದೆ. ಆ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಆಶಿರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ನಟ ಅರವಿಂದ, ರಾಜೇಶ್ವರಿ ಸಂಬರಗಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ