Latest

ಕರಾವಳಿ,‌ ಮಲೆನಾಡು ಭಾಗಕ್ಕೆ ‌ಹೊಸ ಪ್ರವಾಸೋದ್ಯಮ ನೀತಿ

ಕರಾವಳಿ,‌ ಮಲೆನಾಡು ಭಾಗಕ್ಕೆ ‌ಹೊಸ ಪ್ರವಾಸೋದ್ಯಮ ನೀತಿ ರೂಪಿಸಲು ಜ‌.10ಕ್ಕೆ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ನಡೆಸುತ್ತಿರುವವರ ಒಕ್ಕಲೆಬ್ಬಿಸದಂತೆ ಸೂಚನೆ

ಸೂಪರ್ ‌ಸ್ಪೆಷಾಲಿಟಿ ಆಸ್ಪತ್ರೆಗೆ ಶಾಸಕರಿಂದ‌ 210 ಕೋಟಿ ರೂ. ಮೊತ್ತದ ಯೋಜನೆ

ಪ್ರಗತಿವಾಹಿನಿ ಸುದ್ದಿ, ಕಾರವಾರ, :

Home add -Advt

“ಮಂಗಳೂರು, ಉಡುಪಿ,‌ ಉತ್ತರ ಕನ್ನಡ‌‌ ಜಿಲ್ಲೆಯ ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ಮಾಡಬೇಕು ಎನ್ನುವ ಆಲೋಚನೆ ಸರ್ಕಾರದ‌ ಮುಂದಿದೆ. ಜನವರಿ 10ರಂದು ಮಂಗಳೂರಿನಲ್ಲಿ ಈ‌ ಬಗ್ಗೆ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಮಲೆನಾಡು ಪ್ರದೇಶದ ಜಿಲ್ಲಾಧಿಕಾರಿಗಳ ಸಭೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕಾರವಾರ ಶಾಸಕ ಸತೀಶ್ ಸೈಲ್ ಅವರ ಕಚೇರಿಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭಾನುವಾರ ರಾತ್ರಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.

“ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನು ಈ ಭಾಗದ ಶಾಸಕರ ಜೊತೆ ನಡೆಸಿದ್ದೇನೆ. ಮಲೆನಾಡು ಹಾಗೂ ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಪಿಪಿಪಿ ಮಾದರಿಯಲ್ಲಿ ಹೊಸ ನೀತಿ ತರಲಾಗುವುದು. ಖಾಸಗಿಯವರಿಗೆ ಹೆಚ್ಚಿನ ಬಂಡವಾಳ ಹೂಡಿಕೆಗೆ ಅವಕಾಶ ನೀಡಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗುವುದು‌” ಎಂದರು.

“ಈ ಸಭೆಗೆ ಬಂಡವಾಳ ಹೂಡಿಕೆದಾರರಿಗೆ ಆಹ್ವಾನ ನೀಡಲಾಗುತ್ತಿದೆ. ಹೊರದೇಶದವರಿಗೂ ಆಹ್ವಾನ ನೀಡಲಾಗುವುದು.‌ ಇವರು ತಮ್ಮ ಬೇಡಿಕೆ ಜೊತೆಗೆ ಸಲಹೆ ಸೂಚನೆಗಳನ್ನು ನೀಡಬಹುದು. ಬಂಡವಾಳ ಹೂಡಿಕೆ ಮಾಡುವವರನ್ನು ಆಹ್ವಾನಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದರು.

“ಮುಖ್ಯಮಂತ್ರಿಯವರು, ಪ್ರವಾಸೋದ್ಯಮ ಸಚಿವರು, ವಿಧಾನಸಭೆ ಸಭಾಧ್ಯಕ್ಷರು ಈ ಸಭೆಯಲ್ಲಿ ಇರಲಿದ್ದಾರೆ.‌ ನಾನೇ ಖುದ್ದಾಗಿ ಇದರ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಸಂಸತ್ ಸದಸ್ಯರು, ಶಾಸಕರು, ಸ್ಥಳೀಯ ಸಂಸ್ಥೆಗಳ ಸದಸ್ಯರಿಗೂ ಆಹ್ವಾನ ನೀಡುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದರು.

ಸಿಆರ್ ಜೆಡ್ ಅನುಮತಿ ಕೇಂದ್ರ ಸರ್ಕಾರ ನೀಡಬೇಕಾಗುತ್ತದೆ ಇದನ್ನು ಪಡೆಯದೇ ಪ್ರವಾಸೋದ್ಯಮ ಅಭಿವೃದ್ಧಿಗೆ ಸಭೆ ನಡೆಸಿದರೆ ಪ್ರಯೋಜನ ಏನು ಎಂದು ಕೇಳಿದಾಗ, “ಇದರ ಬಗ್ಗೆ ಚರ್ಚೆ ನಡೆಸಲು ಎಂದೇ ಸಭೆಗೆ ಕೇಂದ್ರದ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಗೋವಾದಿಂದ ಬರುವಾಗ ನೋಡಿಕೊಂಡು ಬಂದೆ. ಅಲ್ಲಿಗೆ ಒಂದು ಕಾನುನು ಹಾಗೂ ಕರ್ನಾಟಕಕ್ಕೆ ಒಂದು ಕಾನುನು ಮಾಡಲು ಆಗುವುದಿಲ್ಲ. ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಲಾಗುವುದು. ಸಮುದ್ರ ತೀರ ರಕ್ಷಣೆಗೆ ಏನು ಗೈಡ್ ಲೈನ್ ಇದೆ ಅದರಂತೆ ಕೆಲಸ ಮಾಡುತ್ತೇವೆ” ಎಂದರು.

ಕಾರವಾರ ಏರ್ ಪೋರ್ಟ್ ನಿರ್ಮಾಣಕ್ಕೆ ಆದ್ಯತೆ

“ಈ ಭಾಗದ ಯುವ ಜನತೆ ಮುಂಬೈ, ಗೋವಾ, ಬೆಂಗಳೂರು, ಸೌದಿ ಕಡೆಗೆ ಕೆಲಸ ಅರಸಿ ಹೋಗುತ್ತಿದ್ದಾರೆ. ಇಲ್ಲಿನ ಮಾನವ ಸಂಪನ್ಮೂಲ ಇಲ್ಲಿಗೆ ಹೆಚ್ಚು ಬಳಕೆಯಾಗಬೇಕು. ಕಾರವಾರ ಏರ್ ಪೋರ್ಟ್ ನಿರ್ಮಾಣಕ್ಕೆ ಭೂಮಿ ನೀಡಿಕೆ, ಸಂತ್ರಸ್ತರಿಗೆ ಪರಿಹಾರ ಸೇರಿದಂತೆ ಇತರೆ ಸಂಗತಿಗಳಿಗೆ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ನೀಡಲಾಗಿದೆ. ನೌಕಾದಳದವರ ಜೊತೆ ಒಪ್ಪಂದ‌ ಮಾಡಿಕೊಂಡು ಇಲ್ಲಿ ಅಭಿವೃದ್ಧಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದರು.

“ಶಾಸಕರಾದ ಸತೀಶ್ ಸೈಲ್ ಅವರು ಈ ಭಾಗಕ್ಕೆ 210 ಕೋಟಿ ರೂಪಾಯಿ ಮೊತ್ತದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬೇಡಿಕೆ ಸಿದ್ಧಪಡಿಸಿದ್ದಾರೆ. ಅನೇಕ ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆಯನ್ನು ಸಹ ಸಲ್ಲಿಸಿದ್ದಾರೆ. ಒಂದಷ್ಟು ಶಿಥಿಲಾವಸ್ಥೆಯ ಕಟ್ಟಡಗಳನ್ನು ಒಡೆದು ಹಾಕಿ ನೂತನ ಕಟ್ಟಡಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ” ಎಂದರು.

ರೈತರನ್ನು ಒಕ್ಕಲೆಬ್ಬಿಸದಂತೆ ಸೂಚನೆ

“ನಮ್ಮ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವೇಳೆಯಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದವರಿಗೆ ಭೂಮಿ ನೀಡುವ ಕಾನೂನು ತಂದಿತ್ತು. ಇಲ್ಲಿ ರೈತರು ಭೂಮಿಗಾಗಿ ಅರ್ಜಿ ಹಾಕಿದ್ದಾರೆ. ಅರಣ್ಯ ಭೂಮಿಗಳಲ್ಲಿ ವ್ಯವಸಾಯ ಮಾಡುತ್ತಿರುವವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಡಿಎಫ್ ಓಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ” ಎಂದರು.

“ಪಂಚಾಯತಿ ಮಟ್ಟದಲ್ಲಿಯೇ ಇದರ ಬಗ್ಗೆ ರೆಸಲ್ಯೂಷನ್ ಹೊರಡಿಸಿ ಮೂರು ತಲೆಮಾರಿನಿಂದ ಇದ್ದಾರೆ ಎಂದು ಪ್ರಮಾಣ ಪತ್ರ ನೀಡಿದರೆ ಇದಕ್ಕಿಂತ ದೊಡ್ಡದಾದ ದಾಖಲೆ ಮತ್ತೊಂದಿಲ್ಲ. ಯಾರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಭೀಮಣ್ಣ ನಾಯ್ಕ, ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ್ ವೈದ್ಯ ಅವರು ಸೇರಿದಂತೆ ಎಲ್ಲಾ ಶಾಸಕರು ಗಮನ ಸೆಳೆದಿದ್ದಾರೆ” ಎಂದರು.

“ಮೂರು ಎಕರೆ ಒಳಗೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬದುಕುತ್ತಿರುವ ಬಡವರು, ರೈತರನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಇದು ನಮ್ಮ ಪಕ್ಷ ಜಾರಿಗೆ ತಂದ ಕಾನೂನು ಅದಕ್ಕೆ ನಮಗೆ ಇದರ ಬಗ್ಗೆ ಬದ್ದತೆ ಇದೆ. ಬುಡಕಟ್ಟು ಸಮುದಾಯಗಳಿಗೆ 25 ವರ್ಷ, ಇತರೇ ಸಮುದಾಯದವರಿಗೆ 75 ವರ್ಷ ಅವಕಾಶವಿದೆ” ಎಂದರು.

ನದಿ ಜೋಡಣೆ ವಿಚಾರವಾಗಿ ಕೇಳಿದಾಗ, “ಬೇಡ್ತಿ ಮತ್ತು ವರದಾ ನದಿ ಜೋಡಣೆ ವಿಚಾರವಾಗಿ ಈಗಾಗಲೇ ಡಿಪಿಆರ್ ತಯಾರು ಮಾಡಲು ಅನುಮತಿ ನೀಡಿ ಸಹಿ ಕೂಡ ಮಾಡಿದ್ದೇವೆ. ನಮ್ಮ ನೀರನ್ನು ನಾವು ಬಳಸಿಕೊಳ್ಳಲು ಬದ್ದವಾಗಿದ್ದೇವೆ. ಕೇಂದ್ರ ಸರ್ಕಾರ ಶೇ.90, ರಾಜ್ಯ ಸರ್ಕಾರ ಶೇ.10 ರಷ್ಟು ಅನುದಾನ ನೀಡಲಿದೆ” ಎಂದರು.

ಸ್ಥಳೀಯ ಶಾಸಕರ ವಿರೋಧದ ಬಗ್ಗೆ ಕೇಳಿದಾಗ, “ಯಾರು ಏನೇ ವಿರೋಧ ಮಾಡುತ್ತಾರೋ ಬಿಡುತ್ತಾರೋ ಮುಖ್ಯವಲ್ಲ. ನಮ್ಮ ಜನರಿಗೆ, ರೈತರಿಗೆ ಇದರಿಂದ ಅನುಕೂಲವಾಗುವುದು ಮುಖ್ಯ. ಅಂತರ್ಜಲ ಹೆಚ್ಚಾಗಬೇಕು. ಯಾವುದೇ ಒಳ್ಳೆ ಕೆಲಸ ಆಗುವಾಗ ವಿರೋಧ ವ್ಯಕ್ತ ಮಾಡುತ್ತಾರೆ. ಸಂತ್ರಸ್ತರಿಗೆ ಕಾನೂನು ಪ್ರಕಾರ ಪರಿಹಾರ ನೀಡಲಾಗುವುದು” ಎಂದರು.

“ರಸ್ತೆ ಅಗಲ ಮಾಡಿದರು, ಕಾರ್ಖಾನೆ ತಂದರು, ಸೇತುವೆ ನಿರ್ಮಾಣ ಮಾಡಿದರೂ ವಿರೋಧ ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳಿಗೂ ವಿರೋಧ ಮಾಡುತ್ತಿದ್ದರು. ಈಗ ಗ್ಯಾರಂಟಿಗಳನ್ನು ತೆಗೆದುಕೊಳ್ಳುತ್ತಿಲ್ಲವೇ? ವಿರೋಧ ಮಾಡುತ್ತಿದ್ದ ಪಕ್ಷದವರು ಗ್ಯಾರಂಟಿಗಳನ್ನು ವಾಪಸ್ ನೀಡಲಿ” ಎಂದರು.

ನೀವು ಉದ್ಘಾಟನೆ ಮಾಡುವವರೆಗೆ ನೂತನ ಸೇತುವೆಯನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡುವ ಬಗ್ಗೆ ಕೇಳಿದಾಗ, “ಗಂಗಾವತಿ ಮತ್ತು ಗೋಕರ್ಣ ಸೇತುವೆಯನ್ನು ಮತ್ತೊಂದು ದಿನ ಬಂದು ಉದ್ಘಾಟಿಸಲಾಗುವುದು. ಇದರ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ. 45 ವರ್ಷವೇ ಕಾದಿದ್ದೀರಂತೆ ಸ್ವಲ್ಪ ದಿನ ಕಾಯಿರಿ. ಇಡೀ ಜಿಲ್ಲೆಯಲ್ಲಿ ಐದು ಮಂದಿ ಶಾಸಕರು ಒಟ್ಟಾಗಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಶಿವರಾಂ ಹೆಬ್ಬಾರ್ ಅವರು ಸೇರಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ಜಿಲ್ಲೆಯಿಂದ ರಾಜ್ಯಕ್ಕೆ ಶಕ್ತಿಯನ್ನು ಈ ಜನತೆ ನೀಡಿದ್ದಾರೆ” ಎಂದರು.

ಜಿಲ್ಲೆಗೆ ಕಡಿಮೆ ಅವಧಿಯಲ್ಲಿ ಎರಡು ಬಾರಿ ಭೇಟಿ ನೀಡಿದ್ದೀರಿ ಏನಾದರೂ ಶುಭ ಸೂಚನೆ ಇದೆಯೇ ಎಂದಾಗ, “ನಿಮ್ಮನ್ನು ಭೇಟಿ ಮಾಡಿದ್ದೇ ಶುಭ ಸೂಚನೆ” ಎಂದರು.

ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ನಾನು ಈ ಹಿಂದೆ ಇಂಧನ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೆ‌ ಆಗ ಜರ್ಮನಿ ಹಾಗೂ ಸ್ವಿಜರ್ಲ್ಯಾಂಡ್ ಅಲ್ಲಿ ಇದರ ಬಗ್ಗೆ ನೋಡಿಕೊಂಡು ಬಂದಿರುವೆ‌. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. 100- 200 ಎಕರೆಯಲ್ಲಿ ಸ್ಟೋರೇಜ್ ಪಾಯಿಂಟ್ ಮಾಡಲಾಗುತ್ತದೆ. ಅಲ್ಲಿಂದ ಪಂಪ್ ಮಾಡಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಶರಾವತಿಯಿಂದ ಈಗ ಉತ್ಪಾದನೆ ಮಾಡುತ್ತಿರುವ ಪ್ರಮಾಣದಷ್ಟೇ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ರಾಜ್ಯಕ್ಕೆ ದೊಡ್ಡ ಆಸ್ತಿಯಾಗುತ್ತದೆ. ಇದಕ್ಕೆ ವಿರೋಧ ಮಾಡುವ ಅವಶ್ಯಕತೆಯಿಲ್ಲ” ಎಂದರು.

ಜನವರಿ ನಂತರ ನೀವು ಮುಖ್ಯಮಂತ್ರಿ ಆಗುವಿರಾ ಎಂದಾಗ, “ನಾವು ನಿಮ್ಮ‌ ಬಳಿ‌ ಹೇಳಿದ್ದೇವಾ? ನೀವುಗಳೇ ಸೃಷ್ಟಿ ಮಾಡುತ್ತಿರುವ ವಿಚಾರ” ಎಂದರು.

ನಾಲ್ಕೈದು ತಿಂಗಳಿನಿಂದ ಸಚಿವ ಸಂಪುಟ‌ ವಿಸ್ತರಣೆ ಆಗದ ಬಗ್ಗೆ ಆರ್.ವಿ.ದೇಶಪಾಂಡೆ ‌ಅವರು ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ಆರ್.ವಿ.ದೇಶಪಾಂಡೆ ಅವರು ಹಿರಿಯರಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಯವರು ಹಾಗೂ ಅವರ ಬಳಿ ನೀವೆ ಮಾತನಾಡಿದರೆ ಒಳ್ಳೆಯದು” ಎಂದರು.

Related Articles

Back to top button