
ಪ್ರಗತಿವಾಹಿನಿ ಸುದ್ದಿ: ವಿವಾಹವಾಗಿ ಕೇವಲ 6 ತಿಂಗಳಲ್ಲೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇಲ್ಲಿನ ಕುರಂಬಳ್ಳಿ ಬಳಿಯ ಗೂಜಾನುಮಕ್ಕಿ ಎಂಬಲ್ಲಿ ಈ ಘಟನೆ ನಡೆದಿದೆ. ಮಾಲಾಶ್ರೀ (22) ಮೃತ ಮಹಿಳೆ.
ಪತಿ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತು ಮಾಲಾಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಡಮನೆ ಗ್ರಾಮದ ಮಾಲಾಶ್ರೀ ಕುರಂಬಳ್ಳಿಯ ಗಾಜಾನುಮಕ್ಕಿಯ ಅಶೋಕ್ ಎಂಬಾತನೊಂದಿಗೆ ಏಪ್ರಿಲ್ ನಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಬಂದಾಗಿನಿಂದಲೂ ಪತಿ ಅಶೋಕ್ ಹಾಗೂ ಅತ್ತೆ ನಿರಂತರ ಕಿರುಕುಳ ನೀಡುತ್ತಿದ್ದರು. ಮಾಲಾಶ್ರೀ ತನ್ನ ತವರು ಮನೆಯವರೊಂದಿಗೆ ಮಾತನಾಡದಂತೆ ಪತಿ ಮಹಾಶಯ ಹಿಂಸಿಸುತ್ತಿದ್ದ. ಗಂಡ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತ ಮಾಲಾಶ್ರೀ ವಿಷಸೇವಿಸಿದ್ದಳು.
ತೀವ್ರ ಅಸ್ವಸ್ಥಳಾಗಿದ್ದ ಆಕೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತ್ನಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ವಿಚಾರವನ್ನು ಆಕೆಯ ಪೋಷಕರಿಂದ ಅಶೋಕ್ ಮುಚ್ಚಿಟ್ಟಿದ್ದಾನೆ. ನಾಲ್ಕು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಮಾಲಾಶ್ರೀ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಮಗಳ ಸಾವಿಗೆ ಪತಿ ಹಾಗೂ ಅತ್ತೆಯೇ ಕಾರಣ ಎಂದು ಮಾಲಾಶ್ರೀ ಪೋಷಕರು ಆರೋಪಿಸಿದ್ದು, ಕುಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಪತಿ ಅಶೋಕ್ ನನ್ನು ಪೊಲೀಸರು ಬಂಧಿಸಿದ್ದಾರೆ.




