
ಪ್ರಗತಿವಾಹಿನಿ ಸುದ್ದಿ, ಸವದತ್ತಿ (ಬೆಳಗಾವಿ) – ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನ ಜಲಾವೃತಗೊಂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯು ಸತ್ಯಕ್ಕೆ ದೂರವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸಿ.ಕೊಟಾರಗಸ್ತಿ ಸ್ಪಷ್ಟಪಡಿಸಿದ್ದಾರೆ.

ಪರಶುರಾಮನ ಗುಡಿಯ ಬಲಭಾಗದಲ್ಲಿರುವ ಎಣ್ಣೆಹೊಂಡದ ಮೇಲ್ಭಾಗದ ಗುಡ್ಡದ ಪ್ರದೇಶದಿಂದ ಹರಿದುಬರುವ ನೀರಿನ ವಿಡಿಯೋ ಚಿತ್ರೀಕರಣ ಮಾಡಿಕೊಂಡು ದೇವಸ್ಥಾನ ಜಲಾವೃತಗೊಂಡಿದೆ ಎಂಬಂತೆ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುಳ್ಳು ಮಾಹಿತಿಯಿಂದ ಭಕ್ತಾಧಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಅನೇಕ ರಾಜ್ಯಗಳಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ.
ಸತ್ಯಕ್ಕೆ ದೂರವಾದ ಇಂತಹ ಮಾಹಿತಿಗಳಿಂದ ಭಕ್ತಾಧಿಗಳಿಗೆ ಅನಾನುಕೂಲ ಆಗುವುದರಿಂದ ಪರಿಸ್ಥಿತಿ ಪರಾಮರ್ಶಿಸದೇ ಸುಳ್ಳು ಮಾಹಿತಿಯನ್ನು ಪ್ರಕಟಿಸದಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಮಳೆಯಿಂದ ದೇವಸ್ಥಾನ ಆವರಣದಲ್ಲಿ ಯಾವುದೇ ರೀತಿಯ ತೊಂದರೆಯಾಗಿಲ್ಲ. ಆದ್ದರಿಂದ ಭಕ್ತರು ಆತಂಕಕ್ಕೆ ಒಳಗಾಗಬಾರದು ಎಂದು ಕೊಟಾರಗಸ್ತಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ