ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿಗಮ ಮಂಡಳಿ ಪಟ್ಟಿ ಅಂತಿಮವಾಗಿದ್ದು, ಮೊದಲ ಹಂತದಲ್ಲಿ ನೂತನ ಶಾಸಕರಿಗೆ ಅವಕಾಶವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರವಾಗಿ ಪ್ರತಿಕ್ರಿಸಿದ ಅವರು, ಮೊದಲ ಪಟ್ಟಿಯಲ್ಲಿ ಮೊದಲ ಬಾರಿಗೆ ಶಾಸಕರಾದವರಿಗೆ ಅವಕಾಶ ನೀಡಿಲ್ಲ. ಮುಂದಿನ ಪಟ್ಟಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲು ತೀರ್ಮಾನವಾಗಿದೆ ಎಂದರು.
ನಿಗಮ ಮಂಡಳಿ ನೇಮಕಾತಿ ವಿಚಾರವಾಗಿ ನಾನು ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಅವರು ಮಾತನಾಡಿದ್ದೇವೆ. ನಾವು ಪಟ್ಟಿಯನ್ನು ರಂದೀಪ್ ಸುರ್ಜೇವಾಲ ಅವರಿಗೆ ನೀಡಿದ್ದು ಅವರು ಅದನ್ನು ದೆಹಲಿಗೆ ತೆಗದುಕೊಂಡು ಹೋಗಿದ್ದಾರೆ. ತೆಲಂಗಾಣದಲ್ಲಿ ಇಂದು ನಾಳೆ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದ್ದು, ನಂತರ ಹೈಕಮಾಂಡ್ ನಾಯಕರು ನಮ್ಮ ಪಟ್ಟಿಯನ್ನು ಪರಿಶೀಲಿಸಿ ಎರಡು- ಮೂರು ದಿನಗಳಲ್ಲಿ ಅಂತಿಮ ಪಟ್ಟಿಯನ್ನು ರವಾನಿಸುತ್ತಾರೆ. ನಾವು ನೀಡಿದ ಪಟ್ಟಿಯನ್ನು ಪಕ್ಷದ ಹೈಕಮಾಂಡ್ ಪರಿಶೀಲಿಸಬೇಕು. ಏಕೆಂದರೆ ಚುನಾವಣೆ ಹೊತ್ತಿನಲ್ಲಿ ಒಂದಷ್ಟು ಮಾತುಗಳನ್ನು ಕೊಟ್ಟಿರುತ್ತಾರೆ. ಹೈಕಮಾಂಡ್ ಯಾರಿಗೆ ಏನು ಸೂಚನೆ ನೀಡಿತ್ತೊ ಅದರ ಪ್ರಕಾರ ಅಂತಿಮ ಪಟ್ಟಿ ಸಿದ್ಧವಾಗಲಿದೆ.” ಎಂದು ಹೇಳಿದರು.
ಬಿ.ಆರ್.ಪಾಟೀಲ್ ಅವರ ಅಸಮಾಧಾನದ ಬಗ್ಗೆ ಕೇಳಿದಾಗ “ಅವರು ಪತ್ರ ಬರೆದಿರುವ ವಿಚಾರ ತಿಳಿದಿಲ್ಲ. ಅದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ಮಾಹಿತಿ ಗೊತ್ತಿಲ್ಲದೇ ಮಾತನಾಡಲು ನನಗೆ ಇಷ್ಟವಿಲ್ಲ. ಯಾವುದೇ ಶಾಸಕರಾಗಲಿ ಮಾತನಾಡಲು, ದನಿ ಎತ್ತಲು ಅವಕಾಶವಿದೆ. ಸದನದಲ್ಲಿ ಮಾತನಾಡುವಾಗ ತನಿಖೆಯಾಗಲಿ ಎಂದು ಹೇಳಿರಬಹುದು. ಕಂದಾಯ ಸಚಿವ ಕೃಷ್ಣಬೈರೇಗೌಡರು ಈಗಾಗಲೇ ತನಿಖೆ ಮಾಡಲು ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ, ತನಿಖೆಗಳು ನಡೆಯುತ್ತಿರುವ ವಿಚಾರ ನನಗೂ ಗೊತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ” ಎಂದು ಹೇಳಿದರು.
ಬಿ.ಆರ್.ಪಾಟೀಲ್ ಅವರನ್ನು ಕರೆದು ಮಾತನಾಡುತ್ತೀರ ಎಂದಾಗ “ಖಂಡಿತಾ ಮಾತನಾಡಬೇಕು. ವಿಚಾರ ತಿಳಿದುಕೊಂಡು, ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ