
ಪ್ರಗತಿವಾಹಿನಿ ಸುದ್ದಿ: ಇದೇ 19 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಇಂದಿರಾ ಭವನದಲ್ಲಿ ಪಕ್ಷದ ಲೋಕಸಭೆ ಚುನಾವಣೆ ಸಮಿತಿ ಸಭೆ ಕರೆಯಲಾಗಿದೆ ಹಾಗೂ ಜ. 21 ರಂದು ಮಂಗಳೂರಲ್ಲಿ ರಾಜ್ಯಮಟ್ಟದ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಜ. 19 ರಂದು ನಡೆವ ಸಭೆಗೆ ದೆಹಲಿಯಿಂದ ವೀಕ್ಷಕರು ಕೂಡ ಆಗಮಿಸಲಿದ್ದು, ಜಿಲ್ಲಾ ಸಚಿವರು ಅಭ್ಯರ್ಥಿ ಆಯ್ಕೆ ವಿಚಾರವಾಗಿ ನೀಡಿರುವ ವರದಿ ಬಗ್ಗೆ ಚರ್ಚೆ ಮಾಡಲಾಗುವುದು. ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ.
ಇದೇ ತಿಂಗಳು 21 ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷರು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಶೀಘ್ರ ನಿಗಮ ಮಂಡಳಿ ನೇಮಕ ಪಟ್ಟಿ ಪ್ರಕಟ:
ಸಂಕ್ರಾಂತಿ ಉಡುಗೊರೆಯಾಗಿ ನಿಗಮ ಮಂಡಳಿ ನೇಮಕ ಆಗುತ್ತದೆಯೇ ಎಂದು ಕೇಳಿದಾಗ, “ಯಾವ ಕ್ಷಣದಲ್ಲಿ ಬೇಕಾದರೂ ನಿಗಮ, ಮಂಡಳಿ ಆಯ್ಕೆ ಪಟ್ಟಿ ಪ್ರಕಟವಾಗಬಹುದು. ಈ ಪಟ್ಟಿ ಮುಂದೂಡುವ ಸಾಧ್ಯತೆ ಇಲ್ಲ. ಚುನಾವಣೆ ಸಮಯದಲ್ಲಿ ನಾವು ಯಾರಿಗೆ ಮಾತು ಕೊಟ್ಟಿದ್ದೆವೋ ಅವರಿಗೆ ಸ್ಥಾನಮಾನ ನೀಡಲಾಗುತ್ತದೆ” ಎಂದು ತಿಳಿಸಿದರು.
ಅನಂತ ಕುಮಾರ್ ಹೆಗಡೆಗೆ ಮಾನಸಿಕ ಸ್ಥಿರತೆ ಇಲ್ಲ:
ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, “ಮಾನಸಿಕ ಸ್ಥಿಮಿತ ಇರುವವರು ಈ ರೀತಿ ಮಾತನಾಡುವುದಿಲ್ಲ. ಅವರ ಮಾತು ತಪ್ಪು ಎಂದು ಅವರ ನಾಯಕರುಗಳಿಗೆ ಅರ್ಥವಾಗಿರುವುದು ಉತ್ತಮ ಬೆಳವಣಿಗೆ. ಅನಂತ ಕುಮಾರ್ ಹೆಗಡೆ ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ” ಎಂದು ತಿಳಿಸಿದರು.
ಸಂಕ್ರಾಂತಿ ಹಬ್ಬದ ಶುಭಾಶಯಗಳು:
ರಾಜ್ಯದ ಜನರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ವರ್ಷ ಉತ್ತಮ ಮಳೆಯಾಗಿ, ಒಳ್ಳೆಯ ಬೆಳೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಈ ವರ್ಷ 220ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪ್ರದೇಶ ಎಂದು ಘೋಷಣೆ ಮಾಡಿದ್ದು, ಮತ್ತೆ ಇಂತಹ ಪರಿಸ್ಥಿತಿ ಬರಬಾರದು. ರೈತರ ಬದುಕು ಹಸನಾಗಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ