
ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಹಲವು ದಶಕಗಳಿಂದ ಅಭಿವೃದ್ಧಿ ಕಾಣದ ಶಿರಗುಪ್ಪಿ ಗ್ರಾಮದಲ್ಲಿ ಸರಣಿ ಕಾಮಗಾರಿಗಳ ಮೂಲಕ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರಸಕ್ತ ಅಧಿಕಾರಾವಧಿಯಲ್ಲಿ ರೂ.22 ಕೋಟಿಗಳ ಕಾಮಗಾರಿ ಮಾಡಿ ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರೂ.2 ಕೋಟಿ ಅನುದಾನದಲ್ಲಿ ನಿಪ್ಪಾಣಿ-ಶಿರಗುಪ್ಪಿ-ಶೇಂಡೂರ 3 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ನಿಪ್ಪಾಣಿ-ಶೇಂಡೂರ ಪ್ರಮುಖ ರಸ್ತೆಯ ಅಗಲವನ್ನು 12 ಅಡಿಗಳಿಂದ 18 ಅಡಿಗಳವರೆಗೆ ಹೆಚ್ಚಿಸಲಾಗಿದೆ. ಇದರಿಂದ ನಗರಕ್ಕೆ ದಿನನಿತ್ಯ ತೆರಳುವ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಇತರೆ ವಾಹನಗಳಿಗೆ ಅನುಕೂಲವಾಗಲಿದೆ. 10 ವರ್ಷಗಳ ಅಧಿಕಾರಾವಧಿಯಲ್ಲಿ ಹಗಲಿರುಳು ಶ್ರಮಿಸಿ ಫಲಾನುಭವಿಗಳ ಮನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ತಲುಪಿಸಲಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕ ಫಲಾನುಭವಿಗಳಿಗೆ ವೃದ್ಧಾಪ ವೇತನದ ಆದೇಶ ಪ್ರತಿಗಳನ್ನು ಸಚಿವೆ ಜೊಲ್ಲೆ ವಿತರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸ್ಥಾಯಿ ಸಮಿತಿ ಚೇರ್ಮನ್ ರಾಜು ಗುಂದೇಶಾ, ಗುತ್ತಿಗೆದಾರ ಅನಿಲ ಬೆನ್ನಳ್ಳಿ, ರಾಜು ಕುಂಭಾರ, ಪ್ರಕಾಶ ಕುಂಭಾರ, ಮಲ್ಲಪ್ಪ ನಾಯಿಕ, ಪಂಕಜ ದೇಸಾಯಿ, ರಮೇಶ ಚವಾಣ, ಸಂಜಯ ಕುಂಭಾರ, ಸಂಭಾಜಿ ಚವಾಣ, ಗೀತಾ ಚವಾಣ, ಮಾಧುರಿ ಬುವಾ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
*ನನ್ನ ಬಗ್ಗೆ ಹೇಳಿಕೆ ಕೊಡುವಾಗ ಎಚ್ಚರಿಕೆ ಇರಲಿ; ಸಿ.ಟಿ.ರವಿಗೆ HDK ವಾರ್ನಿಂಗ್ *
https://pragati.taskdun.com/h-d-kumaraswamyc-t-raviwarning/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ