Belagavi NewsBelgaum NewsKannada NewsKarnataka NewsLatestPolitics

*ಅಮೃತ 2.0 ಯೋಜನೆಯಡಿ 32.83 ಕೋಟಿ ರೂ.ಗಳ ಪ್ರಸ್ತಾವನೆಗೆ ಅನುಮೋದನೆ; ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭ*

ಶಾಸಕಿ ಶಶಿಕಲಾ ಜೊಲ್ಲೆ ಮಾಹಿತಿ


ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ನಂತರದ ದೊಡ್ಡ ಹಾಗೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ. ಜವಾಹರ ಜಲಾಶಯ ಪ್ರಾರಂಭವಾದ ಸಮಯದಲ್ಲಿ ಆಗಿನ ಕಾಲದ ಈ ಭಾಗದ ಸರಕಾರ ಅಥವಾ ಆಡಳಿತ ಸರ್ಕಾರವು ನೀರು ಪೂರೈಕೆ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ದಿನದಿಂದ ದಿನಕ್ಕೆ ಜನಸಂಖ್ಯೆ ಬೆಳೆಯುತ್ತಲೇ ಬಂದಿದೆ. ಸದ್ಯ ಈ ಭಾಗದ ಜನಸಂಖ್ಯೆ 70,000 ಎಂದು ಭಾವಿಸಿದರೂ ಸಹ ಹೊರವಲಯ ಹಾಗೂ ಇನ್ನಿತರ ಗಮನಕ್ಕೆ ತೆಗೆದುಕೊಂಡರೆ 1 ಲಕ್ಷಕ್ಕೆ ಆಸು ಪಾಸು ಹೋಗುತ್ತದೆ. ಮುಂದೆ ಇದು ಇನ್ನು ಹೆಚ್ಚಾಗಬಹುದು. ಆದ್ದರಿಂದ ಮುಂಬರುವ 30 ರಿಂದ 40 ವರ್ಷಗಳ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡು, ಮುಂದೆ ನೀರಿನ ತೊಂದರೆ ಆಗಬಾರದೆಂಬ ದೃಷ್ಟಿಕೋನದಿಂದ ಕಳೆದು ಐದಾರು ವರ್ಷಗಳಿಂದ ತಾವು ಹಾಗೂ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರು ರೂಪುರೇಷೆಗಳನ್ನು ಕೈಗೊಳ್ಳುತ್ತಿದ್ದು, ಕಳೆದ ಎರಡು ವರ್ಷಗಳಿಂದ ಅದಕ್ಕಾಗಿ ಸತತವಾಗಿ ಪ್ರಯತ್ನಿಸಿದ ಫಲವಾಗಿ ಕೇಂದ್ರ ಸರ್ಕಾರದ ಮಾಧ್ಯಮದಿಂದ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅಮೃತ 2.0 ಯೋಜನೆಯಡಿ 32.83 ಕೋಟಿ ರೂ.ಗಳ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಲಾಗುವುದು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ನಿಪ್ಪಾಣಿಯ ತಮ್ಮ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಜರುಗಿಸಿ ಮಾತನಾಡಿದ ಅವರು ‘ಸದರಿ ಯೋಜನೆಯನ್ನು ನಗರದ ಮುಂದಿನ 50 ವರ್ಷಗಳ ಕಾಲಾವಧಿಯ ಜನಸಂಖ್ಯೆಯ ಆಧಾರದ ಮೇಲೆ ಲೆಕ್ಕಾಚಾರ ಮಾಡಿ ರೂಪುರೇಷೆಗಳನ್ನು ಸಿದ್ದ ಪಡಿಸಿ ಕಾಮಗಾರಿಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಲಾಗಿತ್ತು’ ಎಂದರು.

ರಾಜ್ಯ ಸರ್ಕಾರದ ಕರ್ನಾಟಕ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ಇಲಾಖೆಯಿಂದ ಅನುಷ್ಠಾನಗೊಳ್ಳಲಿರುವ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ. 50, ರಾಜ್ಯ ಸರ್ಕಾರದಿಂದ ಶೇ. 40 ಹಾಗೂ ಸ್ಥಳೀಯ ನಗರಸಭೆಯಿಂದ ಶೇ. 10 ರಷ್ಟು ಅನುದಾನ ದೊರೆಯಲಿದೆ. ವೇದಗಂಗಾ ನದಿಯ ದಡದಲ್ಲಿ 12 ಮೀ. ಸುತ್ತಳತೆಯ ಆರ್‌ಸಿಸಿ ಜಾಕವೆಲ್ ಕಮ್ ಪಂಪಹೌಸ ನಿರ್ಮಾಣ, 8×8 ಮೀಟರ್ ಟಿಸಿ ಪ್ಲಾಟ್‌ಫಾರ್ಮ, 5 ಮೀ. ಅಗಲ 30 ಮೀ. ಉದ್ದ ಕಾಲುಸೇತುವೆ ನಿರ್ಮಿಸಲಾಗುವುದು. ಈ ಜಾಕವೆಲ್‌ದಿಂದ ಜವಾಹರ ಜಲಾಶಯದವರೆಗೆ 7.7 ಕಿ.ಮೀ. ಉದ್ದ ಪೈಪಲೈನ್ ನಿರ್ಮಾಣ ಮತ್ತು ಅಗೆದ ರಸ್ತೆ ಮರುನಿರ್ಮಾಣ ಕಾಮಗಾರಿ ಒಳಗೊಂಡಿದೆ. ಜತೆಗೆ ವಲಯ-1 ರಲ್ಲಿ 10 ಲಕ್ಷ ಲೀ. ಕ್ಷಮತೆಯ ಮೇಲ್ಮಟ್ಟದ ಜಲಸಂಗ್ರಹಾಲಯ (ಓಹೆಚ್‌ಟಿ) ಮತ್ತು ವಲಯ-2 ರಲ್ಲಿ ರಲ್ಲಿ 5 ಲಕ್ಷ ಲೀ. ಕ್ಷಮತೆಯ ಮೇಲ್ಮಟ್ಟದ ಜಲಸಂಗ್ರಹಾಲಯ (ಓಹೆಚ್‌ಟಿ)ಗಳನ್ನು ನಿರ್ಮಿಸಲಾಗುವುದು. ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಯಾವುದೇ ಕೊರತೆಗಳಾಗದಂತೆ ಅನುಷ್ಠಾನಗೊಳಿಸಲಾಗುವುದು’ ಎಂದರು.

ಈ ಸಂದರ್ಭದಲ್ಲಿ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ಮಹಾಲಿಂಗ ಕೋಠಿವಾಲೆ, ರಾಜೇಂದ್ರ ಗುಂದೆಶಾ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ನೀತಾ ಬಾಗಡೆ ಸೇರಿದಂತೆ ಬಿಜೆಪಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button