ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಮುಕೇಶ್ ಸಿಂಗ್ ಎಂಬಾತ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ತಿರಸ್ಕರಿಸಿದ್ದಾರೆ.
ದೋಷಿ ಮುಕೇಶ್ ಸಿಂಗ್ ಸಲ್ಲಿಸಿದ್ದ ದಯಾ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಮುಕೇಶ್ ಸಿಂಗ್ ಕೆಲ ದಿನಗಳ ಹಿಂದೆ ತನಗೆ ಕ್ಷಮಾದಾನ ನೀಡುವಂತೆ ಮನವಿ ಮಾಡಿಕೊಂಡಿದ್ದ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಗುರುವಾರ ಈ ಮನವಿಯನ್ನು ಗೃಹ ಸಚಿವಾಲಯಕ್ಕೆ ರವಾನಿಸಿದ್ದರು. ಮನವಿ ತಿರಸ್ಕರಿಸುವಂತೆ ಶಿಫಾರಸು ಮಾಡಿದ್ದರು. ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗೃಹ ಸಚಿವಾಲಯ ರಾಷ್ಟ್ರಪತಿಗಳ ಅವಗಾಹನೆಗೆ ಕಳುಹಿಸಿಕೊಟ್ಟಿತ್ತು. ಅಲ್ಲದೇ ಮುಕೇಶ್ ಸಿಂಗ್ನ ಈ ಮನವಿಯನ್ನು ತಿರಸ್ಕರಿಸುವಂತೆ ಕೇಂದ್ರ ಗೃಹ ಸಚಿವಾಲಯ ಕೂಡ ಶಿಫಾರಸು ಮಾಡಿತ್ತು. ಅಂತಿಮವಾಗಿ ರಾಷ್ಟ್ರಪತಿ ಕೂಡ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದಾರೆ.
ದೆಹಲಿ ಹೈಕೋರ್ಟ್ ಈ ನಾಲ್ವರಿಗೆ ಈಗಾಗಲೇ ಡೆತ್ ವಾರೆಂಟ್ ಹೊರಡಿಸಿದೆ. ಜನವರಿ 22, ಬೆಳಗ್ಗೆ 7ಗಂಟೆಗೆ ಗಲ್ಲುಶಿಕ್ಷೆ ವಿಧಿಸುವಂತೆ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಮುಕೇಶ್ ಸಿಂಗ್ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಇನ್ನು ಅಪರಾಧಿಗಳಾದ ವಿನಯ್ ಹಾಗೂ ಮುಕೇಶ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಕೂಡ ಮಂಗಳವಾರ ಸುಪ್ರೀಂ ನ್ಯಾಯಪೀಠ ವಜಾಮಾಡಿ ಗಲ್ಲುಶಿಕ್ಷೆ ಖಚಿತಪಡಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ