*ಗ್ರಾಮ ಪಂಚಾಯತಿ ಆಡಳಿತದಲ್ಲಿ ಸುಧಾರಣೆ ಕಂಡರಷ್ಟೇ ದೇಶದ ಅಭಿವೃದ್ಧಿ ಸಾಧ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ನೀರೆ ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟಿಸಿದ ಸಚಿವರು
ಪ್ರಗತಿವಾಹಿನಿ ಸುದ್ದಿ: ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನ ಸಾಮಾನ್ಯರಿಗೆ ಉತ್ತಮ ಸೇವೆಗಳು ಲಭಿಸಿದರಷ್ಟೇ, ವಿಧಾನ ಸೌಧದ ಮಟ್ಟದಲ್ಲೂ ತ್ವರಿತಗತಿಯಲ್ಲಿ ಕೆಲಸಗಳಾಗುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಕಾರ್ಕಳ ತಾಲೂಕು ಪಂಚಾಯತ್ ವತಿಯಿಂದ ಮಹಿಳಾ ಸ್ನೇಹಿ ನೀರೆ ಗ್ರಾಮ ಪಂಚಾಯತ್ ನ ನೂತನ ಕಟ್ಟಡ, ಸಭಾಭವನ, ಸಂಜೀವಿನಿ ಸಭಾಭವನ ಹಾಗೂ ಗ್ರಾಮ ಆಡಳಿತ ಅಧಿಕಾರಿಯವರ ಕಚೇರಿಯನ್ನು ಉದ್ಘಾಟಿಸಿ, ಮಾತನಾಡಿದ ಸಚಿವರು, ಭ್ರಷ್ಟಾಚಾರವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಿತ್ತುಹಾಕಬೇಕು, ಆಗಷ್ಟೇ ಜನ ಸಾಮಾನ್ಯರಿಗೆ ನ್ಯಾಯ ಸಿಗುತ್ತದೆ ಎಂದರು.
ಉಡುಪಿ ಜಿಲ್ಲೆಯ ಜನರು ಸಾಂಸ್ಕೃತಿಕ ರಾಯಭಾರಿಗಳು, ಬೇರೆ ಊರುಗಳಲ್ಲಿ ನೆಲೆಸಿದ್ದರೂ ಊರ ದೇವಸ್ಥಾನಗಳು, ಶಾಲೆಗಳ, ಹಾಗೂ ಗ್ರಾಮ ಪಂಚಾಯತಿ ಕಟ್ಟಡಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರದ ಅನುದಾನಕ್ಕೆ ಕಾಯದೇ ಖಾಸಗಿಯವರ ನೆರವಿನಿಂದ ಗ್ರಾಮಗಳು ಅಭಿವೃದ್ಧಿ ಕಾಣುವಂತಗಾಬೇಕು ಎಂದು ಹೇಳಿದರು.
ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮ ಪಂಚಾಯಿತಿಯ ಮಳಿಗೆಗಳ ಹಂಚಿಕೆಯಲ್ಲಿ, ಎಲ್ಲ ಸೌಲಭ್ಯಗಳ ವಿತರಣೆಯಲ್ಲಿ, ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡುತ್ತಿರುವುದು ನನಗೆ ಬಹಳ ಖುಷಿ ನೀಡುವ ಸಂಗತಿಯಾಗಿದೆ. ರಾಜ್ಯದ ಬೇರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿ ನೀರೆ ಗ್ರಾಮ ಪಂಚಾಯಿತಿ ಮಹಿಳಾ ಸ್ವಾವಲಂಬನೆಗೆ ಕ್ರಮ ತೆಗೆದುಕೊಂಡಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಇದೊಂದು ಕೇವಲ ಕಟ್ಟಡ ಎನ್ನುವುದಕ್ಕಿಂತ ಇಡೀ ಗ್ರಾಮದ ಅಭಿವೃದ್ಧಿಯ ಸಂಕೇತ ಎಂದು ನಾನು ಪರಿಗಣಿಸುತ್ತೇನೆ. ಗಾಂಧೀಜಿಯವರ ಗ್ರಾಮ ಸ್ವರಾಜ್ ಕಲ್ಪನೆ ಸಾಕಾರವಾಗುವುದು ಇಲ್ಲಿಂದಲೇ. ಈ ಕಟ್ಟಡವು ಸ್ಥಳೀಯ ಆಡಳಿತ, ಸಮುದಾಯದ ಸಹಭಾಗಿತ್ವ ಮತ್ತು ಸಾರ್ವಜನಿಕ ಸೇವೆಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಮಹಾತ್ಮಗಾಂಧಿಯವರಿಗೆ ದೂರದೃಷ್ಠಿ ಇರುವುದರಿಂದಲೇ ಗ್ರಾಮಗಳ ಸುಧಾರಣೆಯಿಂದ ಮಾತ್ರ ದೇಶದ ಅಭಿವೃದ್ದಿ ಎಂದಿದ್ದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸುಧಾರಣೆ ತರುವಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮುಂದಿದೆ. ಆಧುನಿಕ ಭಾರತದ ನಿರ್ಮಾತೃ, ನಮ್ಮ ಪ್ರಧಾನಿ ಆಗಿದ್ದ ರಾಜೀವ್ ಗಾಂಧಿ ಅವರಿಗೆ ಪಂಚಾಯತ್ ರಾಜ್ ವ್ಯವಸ್ಥೆ ವಿಕೇಂದ್ರೀಕರಣಗೊಳಿಸಿದ ಕೀರ್ತಿ ಸಲ್ಲುತ್ತದೆ. ದೆಹಲಿಯಲ್ಲಿ ಬಿಡುಗಡೆ ಮಾಡಿದ ಹಣ ನೇರವಾಗಿ ಹಳ್ಳಿಗೆ ತಲುಪಬೇಕೆಂದರೆ ವಿಕೇಂದ್ರೀಕರಣ ವ್ಯವಸ್ಥೆ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದರು. ನರೇಗಾ ಯೋಜನೆ ಬಂದ ನಂತರ ಗ್ರಾಮ ಪಂಚಾಯಿತಿಗಳ ಬಲವರ್ಧನೆಯಾಗಿದೆ ಎಂದು ಸಚಿವರು ತಿಳಿಸಿದರು.
ಬೀದಿ ದೀಪಗಳ ಬಿಲ್ ತುಂಬುವ ಶಕ್ತಿಯೂ ಇಲ್ಲದ ಪಂಚಾಯಿತಿಗಳು ಇಂದು ಸಾಕಷ್ಟು ಅನುದಾನ ಪಡೆಯುತ್ತಿವೆ. ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಅತ್ಯಂತ ಮಹತ್ವದ್ದು. ಈ ಹಿಂದೆ ಗ್ರಾಮ ಪಂಚಾಯಿತಿ ಕಚೇರಿಗೆ ಯಾವುದೇ ಕೆಲಸ ಅರಸಿ ಬರುವವರ ಸಂಖ್ಯೆ ತುಂಬಾ ಕಡಿಮೆಯಾಗಿತ್ತು. ಆದರೆ, ಈಗ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದಲೇ ಕೋಟ್ಯಾಂತರ ರೂಪಾಯಿಗಳ ಕಾಮಗಾರಿಗಳು ನಡೆಯುತ್ತಿವೆ. ಗ್ರಾಮಗಳ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶದ ಜನರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಈ ವೇಳೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ನೀರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಚ್ಚಿದಾನಂದ ಎಸ್.ಪ್ರಭು, ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಜಿತ್ ಹೆಗ್ಡೆ, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಕಾರ್ಕಳ ತಹಶಿಲ್ದಾರರಾದ ಪ್ರದೀಪ್ ಆರ್, ತಾಲೂಕು ಪಂಚಾಯತ್ ಇಒ ಪ್ರಶಾಂತ್ ರಾವ್ ಸೇರಿದಂತೆ ನೀರೆ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.