ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನಾಳೆ ಪ್ರಸಕ್ತ ವರ್ಷದ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಇದರ ಮುನ್ನಾ ದಿನ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.
ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು: ಏಪ್ರಿಲ್ 1ರಿಂದ ಆರಂಭವಾಗುವ ಮುಂದಿನ ವರ್ಷದ ಹಣಕಾಸು ವರ್ಷದಲ್ಲಿ ಶೇಕಡಾ 6ರಿಂದ ಶೇಕಡಾ 6.5ರಷ್ಟು ಆರ್ಥಿಕ ಪ್ರಗತಿಯಾಗಬಹುದು ಎಂದು ಅಂದಾಜಿಸಲಾಗಿದೆ ಎಂದರು.
2019-20ನೇ ಸಾಲಿನ ವರ್ಷದಲ್ಲಿ ಜಿಡಿಪಿ ಕೇವಲ ಶೇ. 5ರಷ್ಟು ಮಾತ್ರ ಬೆಳವಣಿಗೆ ಕಾಣಬಹುದೆಂದು ಅಂದಾಜಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಮುಂಬರುವ ದಿನಗಳು ಆಶಾದಾಯಕವಾಗಿರಬಹುದು. ಜಾಗತಿಕವಾಗಿ ಅಭಿವೃದ್ಧಿ ಕುಂಠಿತಗೊಂಡಿರುವುದು ಭಾರತಕ್ಕೂ ಸಂಕಷ್ಟಕ್ಕೆ ತಂದಿದೆ. ಹಣಕಾಸು ವಲಯದ ಬಿಕ್ಕಟ್ಟಿನಿಂದಾಗಿ ಹೂಡಿಕೆ ಹರಿದುಬರುವುದು ಕಡಿಮೆಯಾಯಿತು. ಹೀಗಾಗಿ ಜಿಡಿಪಿ ಅಭಿವೃದ್ಧಿ ದರ ಕೇವಲ ಶೇ. 5 ಮಾತ್ರ ಇದೆ. ಇದು ಬಹುಶಃ ಅತ್ಯಂತ ಕಡಿಮೆ ಅಭಿವೃದ್ಧಿ ದರ ಇರಬಹುದು. ಹಣಕಾಸು ಪ್ರಗತಿ ಪುನರುಜ್ಜೀವಗೊಳಿಸಲು ಪ್ರಸಕ್ತ ಹಣಕಾಸಿನ ಕೊರತೆಯ ಗುರಿಯನ್ನು ಸಡಿಲಿಸಬೇಕಾಗಬಹುದು ಎಂದು ಸಾಮೀಕ್ಷೆಯಲ್ಲಿ ಹೇಳಲಾಯಿತು.
ಇಂದು ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ದೇಶದ ಆರ್ಥಿಕ ಪ್ರಗತಿ ಮತ್ತೆ ಏರಿಕೆಯಾಗಲಿದ್ದು ಮುಂದಿನ ಹಣಕಾಸು ವರ್ಷಕ್ಕೆ ದೇಶದ ಜಿಡಿಪಿ ಶೇಕಡಾ 6ರಿಂದ ಶೇಕಡಾ 6.5ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳು:
ದೇಶದಲ್ಲಿ ತೆರಿಗೆ ಸಂಗ್ರಹ, ಆದಾಯ ಹೆಚ್ಚಳ, ಭಾರೀ ಹೂಡಿಕೆ, ಉದ್ಯಮಗಳಿಂದ ದೇಶದ ಸಂಪತ್ತು ಹೆಚ್ಚಿಸಿ ಜಿಡಿಪಿ ಪ್ರಗತಿಗೆ ಕಾರಣರಾಗುವ ಉದ್ಯಮದಾರರನ್ನು ಗೌರವಿಸಬೇಕು. ನಾಗರಿಕರ ಅಗತ್ಯದ ವಸ್ತುಗಳಾದ ಈರುಳ್ಳಿ ಸೇರಿದಂತೆ ಕೆಲ ವಸ್ತುಗಳ ಬೆಲೆ ಏರಿಕೆ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ..
ಉದ್ಯೋಗ ಸೃಷ್ಟಿ ಸೇರಿದಂತೆ ದೇಶದ ಆರ್ಥಿಕ ಬೆಳವಣಿಗೆಗೆ ಉತ್ಪಾದನೆ ವಲಯದಲ್ಲಿ ಹೆಚ್ಚಳ ಮಾಡಲು ಜಗತ್ತಿನ ಮುಂದೆ ಭಾರತೀಯರ ಒಗ್ಗಟ್ಟು ಪ್ರದರ್ಶನವಾಗಬೇಕು.
ಬಂದರುಗಳಲ್ಲಿ ರೆಡ್ ಟೇಪ್ ಗಳನ್ನು ತೆಗೆದುಹಾಕುವ ಮೂಲಕ ರಫ್ತು ಪ್ರಮಾಣವನ್ನು ಹೆಚ್ಚಿಸಬೇಕು, ಸ್ಟಾರ್ಟ್ ಆಫ್ ಬ್ಯುಸಿನೆಸ್ ಪ್ರಕ್ರಿಯೆ ಸುಗಮಗೊಳಿಸುವುದು, ಆಸ್ತಿ ದಾಖಲಾತಿ, ತೆರಿಗೆ ಪಾವತಿ ಮತ್ತು ಒಪ್ಪಂದಗಳನ್ನು ಜಾರಿಗೊಳಿಸುವ ಮೂಲಕ ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವುದು.
ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಆಡಳಿತ ವಿಧಾನ ಸುಧಾರಣೆ, ನಂಬಿಕೆ ವಿಶ್ವಾಸಾರ್ಹತೆ ಹೆಚ್ಚಿಸಲು ಹೆಚ್ಚೆಚ್ಚು ಮಾಹಿತಿ ಬಹಿರಂಗ ಸೇರಿದಂತೆ ದೇಶದ ಅಭಿವೃದ್ಧಿಗೆ ಅರ್ಥಿಕ ಪುನಶ್ಚೇತನ ನೀಡಲು ಸಮೀಕ್ಷೆ ಒಂದಷ್ಟು ಸಲಹೆಗಳನ್ನು ನೀಡಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ