ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: “ಆದಿಚುಂಚನಗಿರಿ ಮಠ ತನ್ನದೇ ಇತಿಹಾಸ ಹೊಂದಿದ್ದು, ಭವ್ಯ ಕರ್ನಾಟಕ ನಿರ್ಮಾಣದ ದೊಡ್ಡ ಸಾಧನೆ ಈ ಮಠದಿಂದಲೇ ಆಗಲಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ಪಟ್ಟಾಭಿಷೇಕದ ದಶಮಾನೋತ್ಸವ ಸಮಾರಂಭ, ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಜ್ಯೋತಿರ್ದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಪಟ್ಟಾಭಿಷೇಕವಾಗಿ ಒಂದು ದಶಕ ಕಳೆದಿದ್ದು, ಇದು ಆತ್ಮಾವಲೋಕನ ಹಾಗೂ ಸಿಂಹಾವಲೋಕನ ಮಾಡಿಕೊಳ್ಳುವ ಘಟ್ಟ. ಹತ್ತು ವರ್ಷಗಳಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳು ಅಪಾರ ಸಾಧನೆ ಮಾಡಿದ್ದಾರೆ. ಬಾಲಗಂಗಾಧರನಾಥ ಸ್ವಾಮಿಗಳು ಬಿತ್ತಿದ ಬೀಜ ಹೆಮ್ಮರವಾಗಿ ಬೆಳೆದಿದೆ. ನಿರ್ಮಲಾನಂದನಾಥ ಸ್ವಾಮೀಜಿಗಳ ಕಾಲದಲ್ಲಿ ಸಂಸ್ಥೆ ಬೆಳೆಯುತ್ತಿದೆ. ಪ್ರಕಾಶನಾಥ ಸ್ವಾಮೀಜಿ ಕೂಡ ಬೆಂಗಳೂರಿನ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ. ಕಷ್ಟಪಟ್ಟು ನಿರ್ಮಾಣವಾಗಿರುವ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡು ಬೆಳೆಸಿರುವುದು ಸಂಸದ ಸಂಗತಿ” ಎಂದರು.
ವೈಜ್ಞಾನಿಕ ಮನೋಧರ್ಮ:
“ನಿರ್ಮಲಾನಂದನಾಥ ಶ್ರೀಗಳು ಅಪರೂಪದ ಸ್ವಾಮೀಜಿಗಳು. ವಿಜ್ಞಾನ ಮತ್ತು ತತ್ವಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಅವೆರಡನ್ನೂ ಆಳವಾಗಿ ಅಧ್ಯಯನ ಮಾಡಿ ಸಮಾಜಕ್ಕೆ ನೀಡುವ ದೊಡ್ಡ ಸಾಧನೆ ಅವರದ್ದು. ವಿಚಾರಗಳನ್ನು ವೈಜ್ಞಾನಿಕವಾಗಿ ನೋಡಿ ತತ್ವಜ್ಞಾನ ವನ್ನು ಅಳವಡಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ವಿಧಿವಿಧಾನ ಸ್ವಾಮೀಜಿಗಳಲ್ಲಿದ್ದರೆ ಇಡೀ ಸಮಾಜಕ್ಕೆ ದಾರಿದೀಪ ವಾಗಬಹುದು ಎನ್ನಲು ಅವರು ಉದಾಹರಣೆಯಾಗಿದ್ದಾರೆ” ಎಂದರು.
ಬಿಜಿಎಸ್ ಬ್ರಾಂಡ್:
“1.50ಲಕ್ಷ ಮಕ್ಕಳು ಬಿಜಿಎಸ್ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ, ಆಸ್ಪತ್ರೆಯಿಂದ ಪಬ್ಲಿಕ್ ಶಾಲೆಯವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಮ್ಮದೇ ಆದ ಬ್ರಾಂಡ್ ಸೃಷ್ಟಿಸಿರುವುದು ಕರ್ನಾಟಕದ ಹೆಮ್ಮೆ. ಕರ್ನಾಟಕದಾದ್ಯಂತ ಸಂಸ್ಥೆಯ ಸೇವೆಗಳು ಲಭ್ಯವಾಗಬೇಕೆನ್ನುವುದು ಸ್ವಾಮೀಜಿಗಳ ಇಚ್ಛೆ. ಉತ್ತರ ಕರ್ನಾಟಕದಲ್ಲಿ ಈ ಸಂಸ್ಥೆಗಳನ್ನು ತೆರೆದು ಅಭಿವೃದ್ದಿ ಮಾಡುತ್ತಿದ್ದಾರೆ. ಕಿಡ್ನಿ, ಲಿವರ್ ಕಸಿ ಮಾಡಿಸಿಕೊಳ್ಳಲು ಇತ್ತರ ಕರ್ನಾಟಕದ ಜನ ಬಿಜಿಎಸ್ ಆಸ್ಪತ್ರೆಗೆ ನೇರವಾಗಿ ಬರುವಷ್ಟು ಸೌಲಭ್ಯಗಳು ದೊರೆಯುತ್ತಿವೆ. ಬಿಜಿಎಸ್ ಸಂಸ್ಥೆಗಳು ಉತ್ತರ ಮತ್ತು ದಕ್ಷಿಣ ಬೆಸೆಯುವ ಕೇಂದ್ರವಾಗಿದೆ” ಎಂದು ಸಿಎಂ ತಿಳಿಸಿದರು.
ಅಭೂತಪೂರ್ವ ಸಾಧನೆ:
“ಗ್ರಾಮೀಣ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಪ್ರಮುಖ ಮಠ ಪ್ರಮುಖ ಪಾತ್ರ ವಹಿಸಿದೆ. ಸರ್ಕಾರ ಮಾಡುವ ಕೆಲಸವನ್ನು ಕರ್ನಾಟಕದ ಅನೇಕ ಮಠಗಳು ಮಾಡಿಕೊಂಡು ಬಂದಿವೆ. ಕರ್ನಾಟಕದಲ್ಲಿ ಶಿಕ್ಷಣ ಪ್ರಮಾಣ ಹೆಚ್ಚಳವಾಗಿದ್ದರೆ, ಸಾಧನೆಯಾಗಿದ್ದರೆ ಅದಕ್ಕೆ ಮಠ ಮಾನ್ಯಗಳು ಯಾವುದೇ ಬೆಂಬಲವಿಲ್ಲದೆ ಮಾಡಿರುವುದು ಕಾರಣ. ನಿರ್ಮಲಾನಂದನಾಥ ಸ್ವಾಮೀಜಿ ಗಳ ಒಂದು ದಶಕದ ಸಾಧನೆ ಅಭೂತಪೂರ್ವವಾಗಿದೆ. ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭದಲ್ಲಿ ಭವಿಷ್ಯದ ಚಿಂತನೆ ಮಾಡಬೇಕು” ಎಂದು ಅವರು ಹೇಳಿದರು.
ಮಾರ್ಗದರ್ಶನ ಅಗತ್ಯ
“ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ನೀಡಿ ಅವನನ್ನು ಸ್ವಾವಲಂಬಿಯನ್ನಾಗಿಸಲು ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಆಶೀರ್ವಾದ ಅಗತ್ಯ. ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಇದು ದೊರೆಯಲಿ” ಎಂದರು.
ಮಕ್ಕಳಿಗೆ ಕಿವಿ ಮಾತು
“ಮಕ್ಕಳ ಪ್ರೌಢಶಾಲಾ ಜೀವನ ಅತ್ಯಂತ ಮಹತ್ವದದ ಘಟ್ಟ. ಮಕ್ಕಳನ್ನು ನೋಡಿದಾಗ ನಾನು ನಮ್ಮ ರಾಜ್ಯ ಹಾಗೂ ದೇಶದ ಭವಿಷ್ಯದ ಬಗ್ಗೆ ಆಶಾದಾಯಕವಾಗಿ ಆಲೋಚಿಸುತ್ತೇನೆ. ಭವಿಷ್ಯ ನಿಮ್ಮಲ್ಲೇ ಅಡಗಿದ್ದು, ದೇಶವನ್ನು ಯುವಜನಾಂಗ ಕಟ್ಟಬೇಕು.
ಶೇ 40 ರಷ್ಟು ಯುವ ಸಮೂಹವಿರುವ ಈ ದೇಶಕ್ಕೆ ಅತ್ಯಂತ ದೊಡ್ಡ ಭವಿಷ್ಯವಿದೆ” ಎಂದರು.
“ನಿರಂತರ ಪ್ರಯತ್ನ ಮಾಡಬೇಕು. ಪರಿಶ್ರಮದಲ್ಲಿ ನಂಬಿಕೆಯಿಡಿ. ಸೋಲುಗಳಿಗೆ ಎದೆಗುಂದಬೇಡಿ. ಪರಮ ಹಂಸ ಪಕ್ಷಿಯಂತೆ ಎತ್ತರಕ್ಕೆ ಹಾರುವ ಕನಸು ಕಾಣಿರಿ” ಎಂದು ಮುಖ್ಯಮಂತ್ರಿ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಆರ್.ಅಶೋಕ್ , ಡಾ. ಕೆ.ಸುಧಾಕರ, ಶಾಸಕ ಸತೀಶ ರೆಡ್ಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರ, ಸಾಹಿತಿ ದೊಡ್ಡರಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮತ್ತಿತರರು ಉಪಸ್ಥಿತರಿದ್ದರು.
*4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ; ಅಮಿತ್ ಶಾ*
https://pragati.taskdun.com/amith-shahkarnatakabjp-winvidhanasabha-election/
ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಗೆ ‘ಅತ್ಯುತ್ತಮ’ ಪ್ರಶಸ್ತಿ
https://pragati.taskdun.com/best-award-for-nippani-rural-police-station/
*ಭೀಕರ ಭೂಕಂಪ; ಸಾವಿನ ಸಂಖ್ಯೆ 37,000ಕ್ಕೆ ಏರಿಕೆ*
https://pragati.taskdun.com/turkeysyriaearthquake/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ