ಭಾರಿ ಮಳೆ; ತುರ್ತು ಪರಿಸ್ಥಿತಿ ನಿರ್ವಹಣೆ: ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರವಾಹ ಸಂದರ್ಭದಲ್ಲಿ ಜನ-ಜಾನುವಾರುಗಳ ತಕ್ಷಣ ರಕ್ಷಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಇದಲ್ಲದೇ ಮಾನವ ಪ್ರಾಣಹಾನಿ ಅಥವಾ ಜಾನುವಾರ ಜೀವಹಾನಿಯಾದರೆ 24 ಗಂಟೆಗಳಲ್ಲಿ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ(ಮೇ 21) ನಡೆದ ಪ್ರವಾಹ ನಿರ್ವಹಣೆ ಕುರಿತ ಜಿಲ್ಲಾಮಟ್ಟದ ಅಧಿಕಾರಿಗಳ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅದೇ ರೀತಿ ಮನೆಗಳಿಗೆ ನೀರು ನುಗ್ಗಿದಾಗ ಆ ಕುಟುಂಬಗಳಿಗೆ ಪರಿಹಾರ ಒದಗಿಸುವಲ್ಲಿ ವಿಳಂಬ ಮಾಡಬಾರದು ಎಂದು ತಿಳಿಸಿದರು.
ಮಳೆಗಾಲ ಆರಂಭಗೊಳ್ಳಲಿರುವುದರಿಂದ ನದಿತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ನೆರೆಯ ರಾಜ್ಯದ ಜಲಾಶಯಗಳ ಸಂಗ್ರಹ, ಮಳೆ ಪ್ರಮಾಣದ ಮೇಲೆ ನಿಗಾ ವಹಿಸಲು ಅನುಕೂಲವಾಗುವಂತೆ ನೀರಾವರಿ ಇಲಾಖೆಯ ಅಧಕಾರಿಗಳ ತಂಡವನ್ನು ರಚಿಸಬೇಕು ಎಂದು ತಿಳಿಸಿದರು.
ಜಲಾಶಯಗಳಿಂದ ನೀರು ಬಿಡುಗಡೆ ಕುರಿತು ನಿರಂತರ ನಿಗಾ ವಹಿಸಿ ಪ್ರತಿದಿನ ಮಾಹಿತಿ ನೀಡುವಂತೆ ತಂಡ ರಚಿಸಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ತಿಳಿಸಿದರು.
ಸ್ಥಳೀಯ ಜನರ ತಂಡ ರಚನೆಗೆ ಸೂಚನೆ:
ಕೃಷ್ಣಾ ನದಿತೀರದ ಗ್ರಾಮಗಳ ಸಮೀಕ್ಷೆ ಕೈಗೊಂಡು ಹಿಂದಿನ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಬೋಟ್ ಮತ್ತಿತರ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಸ್ಥಳೀಯವಾಗಿ ತಕ್ಷಣವೇ ಸ್ಪಂದಿಸಲು ಅನುಕೂಲವಾಗುವಂತೆ ಸ್ಥಳೀಯ ಮಟ್ಟದಲ್ಲಿ ಹತ್ತು ಜನರ ತಂಡವನ್ನು ಸದಾ ಸಿದ್ಧವಾಗಿರುವಂತೆ ನೋಡಿಕೊಳ್ಳಬೇಕು.
ನದಿತೀರದ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ:
ಎಸ್.ಡಿ.ಆರ್.ಎಫ್. ಹಾಗೂ ಅಗ್ನಿಶಾಮಕ ಅಧಿಕಾರಿಗಳು ಮುಂಚಿತವಾಗಿಯೇ ನದಿತೀರದ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನಿರ್ದೇಶನ ನೀಡಿದರು.
ಆರೋಗ್ಯ ಇಲಾಖೆ, ಪಶುಪಾಲನೆ, ಗ್ರಾಮೀಣಾಭಿವೃದ್ಧಿ, ಪೊಲೀಸ್, ಕಂದಾಯ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಪಂಚಾಯತ ಮಟ್ಟದಲ್ಲಿ ಸ್ಥಳೀಯ ಜನರನ್ನು ಸೇರಿಸಿಕೊಂಡು ತಂಡಗಳನ್ನು ರಚಿಸಬೇಕು.
ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಜತೆಗೂಡಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು.
ಮಳೆಗಾಲ ಆರಂಭವಾಗುತ್ತಿರುವುದರಿಂದ ಯಾವುದೇ ಅಧಿಕಾರಿಗಳು ಹಾಗೂ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು/ಸಿಬ್ಬಂದಿಗೆ ರಜೆ ನೀಡಬಾರದು.
ಶಾಸಕರ ಅನುದಾನದಲ್ಲಿ ಬೋಟ್ ಖರೀದಿಗೆ ಸಲಹೆ:
ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಅನುಕೂಲವಾಗುವಂತೆ ಸ್ಥಳೀಯ ಶಾಸಕರ ಅನುದಾನದಲ್ಲಿ ಬೋಟ್ ಖರೀದಿಗೆ ಪ್ರಯತ್ನಿಸಬೇಕು ಎಂದು ತಹಶೀಲ್ದಾರರಿಗೆ ಸಲಹೆ ನೀಡಿದರು.
ಹೆಚ್ಚು ಹೆಚ್ಚು ಬೋಟ್ ಗಳು ಲಭ್ಯವಿದ್ದರೆ ತಕ್ಷಣವೇ ಜನರ ರಕ್ಷಣೆಗೆ ಬಳಸಬಹುದು. ಸಾಧ್ಯವಾದರೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಅವುಗಳನ್ನು ಒದಗಿಸಬಹುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು, ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಕಳೆದ ಬಾರಿಯ ಅನುಭವದ ಆಧಾರದ ಮೇಲೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೀರಿನ ಹರಿವು ಆಧರಿಸಿ ತುರ್ತು ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಸಜ್ಜಾಗಿರಬೇಕು ಎಂದರು.
ಬೋಟ್ ಗಳನ್ನು ದುರಸ್ತಿ ಮಾಡಿಸಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಾಲಾಗಳ ಸ್ವಚ್ಛತೆಗೆ ಸೂಚನೆ:
ಬೆಳಗಾವಿ ನಗರ ಹಾಗೂ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ನಾಲಾಗಳನ್ನು ಮೂರು ದಿನಗಳಲ್ಲಿ ಸ್ವಚ್ಛಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿದ್ಯುತ್ ಕಂಬಗಳು ಮತ್ತು ಮರಗಳು ಉರುಳಿಬಿದ್ದರೆ ತುರ್ತಾಗಿ ತೆರವುಗೊಳಿಸಬೇಕು. ಬೀದಿದೀಪ ಮತ್ತಿತರ ವ್ಯವಸ್ಥೆ ಸಮರ್ಪಕವಾಗಿ ಇರವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಅವರು ಹಿಂದಿನ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಸಿದ್ಧತೆ ಮಾಡಿಕೊಂಡರೆ ಅನಾಹುತಗಳನ್ನು ಕಡಿಮೆಗೊಳಿಸಬಹುದು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಮಕ್ಕಳಿಗೆ ವ್ಯಾಕ್ಸಿನೇಶನ್: ಬೆಳಗಾವಿಯಲ್ಲಿ ದಾಖಲೆ ಸಾಧನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ