ನಿಯತಿ ಫೌಂಡೇಶನ್ ಮಹಿಳಾ ದಿನಾಚರಣೆ; ಮಗಳ ಕೈಗೆ ಕಸಬರಿಗೆ ಮತ್ತು ಮಗನ ಕೈಗೆ ಹಣಕಾಸಿನ ವ್ಯವಹಾರ -ಡಿಸಿಪಿ ಪಿ.ವಿ.ಸ್ನೇಹಾ ವಿಷಾದ
ನಾರಿಶಕ್ತಿ ಸನ್ಮಾನ ಕಾರ್ಯಕ್ರಮ ಹಾಗೂ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ
ದಿನದ ಕಾರ್ಯವೆಲ್ಲ ಮುಗಿದ ಮೇಲೆ ರಾತ್ರಿ ನೆಮ್ಮದಿಯಂದ ನಿದ್ರಿಸುವುದೇ ನಿಜವಾದ ಯಶಸ್ಸು. ನೆಮ್ಮದಿಯ ನಿದ್ರೆಯೇ ಈ ಜಗತ್ತಿನಲ್ಲಿ ಅತ್ಯಂತ ದುಬಾರಿ ಬೆಲೆಯದ್ದು, ಅದು ಯಾರಲ್ಲಿದೆಯೋ ಅವರೇ ನಿಜವಾದ ಸಾಧಕರು
-ಪಿ.ವಿ.ಸ್ನೇಹಾ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಮಾಜದಲ್ಲಿ ಮಹಿಳೆಯನ್ನು ಅಸಹಾಯಕಿ ಎಂದು ಬಿಂಬಿಸುವಲ್ಲಿ ಸ್ವತಃ ಮಹಿಳೆಯರೂ ಕಾರಣರಾಗಿದ್ದೇವೆ. ನಾವು ನಮ್ಮ ಮಕ್ಕಳ ನಡುವೆಯೇ ತಾರತಮ್ಯ ಮಾಡುತ್ತ ಮಗಳ ಕೈಗೆ ಕಸಬರಿಗೆ ಮತ್ತು ಮಗನ ಕೈಗೆ ಹಣಕಾಸಿನ ವ್ಯವಹಾರ ನೀಡುತ್ತಿರುವುದರಿಂದ ಸಹಜವಾಗಿಯೇ ಹೆಣ್ಣಿನ ಸ್ಥಾನ ಕಡಿಮೆ ಎಂಬ ಭಾವನೆ ಬಾಲ್ಯದಿಂದಲೇ ಬೆಳೆದು ಬರುತ್ತಿದೆ ಎಂದು ಡಿಸಿಪಿ ಪಿ.ವಿ.ಸ್ನೇಹಾ ಅಭಿಪ್ರಾಯ ಪಟ್ಟರು.
ಬೆಳಗಾವಿಯ ನಿಯತಿ ಫೌಂಡೇಶನ್ ಹಾಗೂ ನಾಗಪುರದ ದಕ್ಷಿಣ ಕೇಂದ್ರೀಯ ವಲಯ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಇಲ್ಲಿನ ಕೆಎಲ್‌ಎಸ್‌ನ ಐಎಂಇಆರ್ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ನಾರಿಶಕ್ತಿ ಸನ್ಮಾನ ಕಾರ್ಯಕ್ರಮ ಹಾಗೂ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಮನೆಯೇ ಮೊದಲ ಪಾಠಶಾಲೆ ಎನ್ನುತ್ತೇವೆ. ಆದರೂ, ಎಲ್ಲರೂ ಸಮಾನರು ಎನ್ನುವ ಬದಲು ಮಗಳನ್ನು ಕಡಿಮೆಯಾಗಿ ನೋಡುವುದು ಸರಿಯಲ್ಲ. ಗಂಡು-ಹೆಣ್ಣು ಎಂಬ ತಾರತಮ್ಯವನ್ನು ಮನೆಯಿಂದಲೇ ಹೋಗಲಾಡಿಸಬೇಕು ಎಂದರು.
ಹಣ ಗಳಿಸುವುದು ಹಾಗೂ ಆಸ್ತಿ ಖರೀದಿಸುವುದೇ ಸಾಧನೆಯಲ್ಲ. ದಿನದ ಕಾರ್ಯವೆಲ್ಲ ಮುಗಿದ ಮೇಲೆ ರಾತ್ರಿ ನೆಮ್ಮದಿಯಂದ ನಿದ್ರಿಸುವುದೇ ನಿಜವಾದ ಯಶಸ್ಸು. ನೆಮ್ಮದಿಯ ನಿದ್ರೆಯೇ ಈ ಜಗತ್ತಿನಲ್ಲಿ ಅತ್ಯಂತ ದುಬಾರಿ ಬೆಲೆಯದ್ದು, ಅದು ಯಾರಲ್ಲಿದೆಯೋ ಅವರೇ ನಿಜವಾದ ಸಾಧಕರು ಎಂದರು.
ಇಂದು ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶಿಕ್ಷಣ ಪಡೆಯುತ್ತಿದ್ದು, ಭವಿಷ್ಯದಲ್ಲಿ ಪತಿಯಾಗಿ ಪತ್ನಿಯೊಂದಿಗೆ ತಾವೇ ಹೊಂದಾಣಿಕೆ ಮಾಡಿಕೊಂಡು ಸಂಸಾರ ನಡೆಸುವ ಸನ್ನಿವೇಶ ಬರಲಿದೆ. ಅಸುರಕ್ಷತೆ ಇದೆ ಎಂದು ಪುರುಷರನ್ನೇ ದೂರುವುದು ಸರಿಯಲ್ಲ. ಮಹಿಳೆಯರು ಎಚ್ಚರಿಕೆಯಿಂದ ಜವಾಬ್ದಾರಿಯುತವಾಗಿ ವರ್ತಿಸಬೇಕು. ಈ ಜಗತ್ತಿನಲ್ಲಿ ಮುಂದುವರಿಯಲು ಗಂಡು ಹೆಣ್ಣು ಇಬ್ಬರೂ ಅತ್ಯಗತ್ಯ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದೆ ಮಂಗಲ ಅಂಗಡಿ ಮಾತನಾಡಿ, ಬದುಕಿನ ಪ್ರತಿಯೊಂದೂ ಹಂತದಲ್ಲಿ ಹೆಣ್ಣು ಪರಿಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಾಳೆ, ಈ ಹಿನ್ನೆಲೆಯಲ್ಲಿ ಹೆಣ್ಣಿಗೆ ಜಗತ್ತಿನಲ್ಲಿ ಮಹತ್ವದ ಸ್ಥಾನವಿದೆ.
ಮಹಿಳೆಯರನ್ನು ಕೀಳಾಗಿ ನೋಡುವ ಪ್ರವೃತ್ತಿ ಇಂದಿಗೂ ಕಡಿಮೆ ಆಗುತ್ತಿಲ್ಲ. ಮಹಿಳೆಯರಿಗೆ ರಾಜಕೀಯ, ಶಿಕ್ಷಣ, ಜನಾಂಗೀಯ, ಉದ್ಯೋಗ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಕಲ್ಪಿಸಿ ಅವರಿಗೂ ಗೌರವದ ಬದುಕು ನಡೆಸುವ ಅವಕಾಶ ಸಿಕ್ಕರೂ ಕೂಡ ಶೋಷಣೆ ನಿಂತಿಲ್ಲ. ಬದಲಾದ ಕಾಲಘಟ್ಟದಲ್ಲಿ ಮಹಿಳೆಯು ತನ್ನ ಗೌರವ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.
ನಿಯತಿ ಫೌಂಡೇಶನ್ ಮುಖ್ಯಸ್ಥೆ ಡಾ.ಸೋನಾಲಿ ಸರ್ನೋಬತ್ ಮಾತನಾಡಿ, ಮಹಿಳೆಯರು ಸ್ವತಃ ವಿಚಾರ ಮಾಡಿ, ನಿರ್ಧಾರ ಕೈಗೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ, ಅಂಗನವಾಡಿ ಕಾರ್ಯಕರ್ತೆ ಸುವರ್ಣಾ ಪಿಟಗಿ, ಆಶಾ ಕಾರ್ಯಕರ್ತೆ ಸಂಜನಾ ಗಾಂವ್ಕರ್, ಶಿಕ್ಷಕಿ ಆಶಾ ರತ್ತೊಂಜಿ, ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಆರತಿ ಪಾಟೀಲ್, ಕಲಾವಿದೆ ಗೌರಿ ಗಜಬರ್, ಸಾಮಾಜಿಕ ಕಾರ್ಯಕರ್ತೆ ಲೀನಾ ಟೋಪಣ್ಣವರ, ಸಮಾಜಸೇವಕಿ ರೂಪಾ ದೇಸಾಯಿ, ಡಾ. ಹರ್‌ಪ್ರೀತ್ ಕೌರ್, ಸನಾತನ ಸಂಸ್ಥೆಯ ವಿಜಯಾ ದಿಕ್ಷಿತ್, ಸಮಾಜ ಸೇವಕಿ ಮೋನಿಕಾ ಡಾಂಟೆಸ್ ಅವರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ.ದೀಪಕ್ ಖಿರವಾಡ್ಕರ್ ಚಂದ್ರಕಾಂತ ಪಾಟೀಲ್, ಕಿಶೋರ್ ಕಾಕಡೆ ಮತ್ತಿತರರು ಉಪಸ್ಥಿತರಿದ್ದರು.
ಕ್ಷತ್ರೀಯ ಮರಾಠಾ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾಗಿ ಡಾ.ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ