Kannada NewsKarnataka NewsLatest

ಜಿಲ್ಲೆಯಲ್ಲಿ ಯಾವುದೇ ಕರೊನಾ ಸೋಂಕಿನ ಲಕ್ಷಣ ಕಂಡು ಬಂದಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಜಿಲ್ಲೆಯಲ್ಲಿ ಯಾವದೇ ಕರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಸ್ಪಷ್ಟ ಪಡಿಸಿದ್ದಾರೆ.

ಕರೊನಾ ಸೋಂಕು ಹರಡದಂತೆ ತಡೆಯಲು ಮಂಗಳವಾರ (ಮಾ.೧೭)ಅಯೋಜಿಸಿದ ವಿವಿಧ ಧಾರ್ಮಿಕ ಮುಂಖಂಡರ ಸಭೆಯ ಬಳಿಕ ಜಿಲ್ಲಾಧಿಕಾರಿ ಡಾ. ಎಸ್. ಬಿ ಬೊಮ್ಮನಹಳ್ಳಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಈಗಾಗಲೇ ಗೋವಾ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಹಾಗೂ ಸಂಪರ್ಕ ರಸ್ತೆಗಳಲ್ಲಿ ಆರೋಗ್ಯ ತಪಾಸಣಾ ತಂಡಗಳ ನಿಯೋಜನೆ ಮಾಡಲಾಗಿದೆ. ಕರೊನಾ ವೈರಸ್ ಹರಡದಂತೆ ತಡೆಯಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಕ್ಷಣದ ಚಿಕಿತ್ಸೆಗೆ ಅಗತ್ಯ ಔಷಧಿ, ಉಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದ್ದು, ಕ್ವಾರಂಟೈನ್ ಸ್ಥಳ ಮತ್ತು ಐಸೋಲೇಷನ್ ವಾರ್ಡ ಸಿದ್ಧಪಡಿಸಲಾಗಿದೆ. ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ ಸಿದ್ಧಪಡಿಸಲಾಗಿದೆ. ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕಾ ದೇವಸ್ಥಾನಗಳಿಗೆ ಬೇರೆ ಬೇರೆ ರಾಜ್ಯಗಳಿಂದ ಭಕ್ತಾಧಿಗಳು ಭೇಟಿ ನೀಡುವುದನ್ನು ಕನಿಷ್ಠ ಒಂದು ವಾರ ಮುಂದೂಡಲು ದೇವಸ್ಥಾನ ಮಂಡಳಿಗಳ ಮೂಲಕ ಮನವಿ ಮಾಡಿಕೊಳ್ಳಲಾಗುತ್ತಿದೆ.
ಕೋವಿಡ್ ೧೯ ತಡೆಗಟ್ಟಲು ಈಗಾಗಲೇ ಖಾಸಗಿ ಆಸ್ಪತ್ರೆಗಳು, ಟ್ರಾವೆಲ್ ಏಜೆನ್ಸಿಗಳು, ವ್ಯಾಪಾರಿಗಳು ಮತ್ತು ಧಾರ್ಮಿಕ ಮುಖಂಡರ ಸಭೆ ನಡೆಸಿ ಸಹಕಾರ ಕೋರಲಾಗಿದೆ. ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಬೇಕಿಲ್ಲ. ವೈರಾಣು ನಿಯಂತ್ರಣಕ್ಕೆ ಸರ್ಕಾರದ ನಿರ್ದೇಶನದ ಮೇರೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.
೫೪ ಜನರು ವಿದೇಶದಿಂದ ಬೆಳಗಾವಿ ಜಿಲ್ಲೆಗೆ ಆಗಮಿಸಿದ್ದು, ಅದರಲ್ಲಿ ೩ ಜನರು ೨೮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ೮ ಜನರು ೧೪ ದಿನಗಳ ನಿಗಾ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ೪೧ ಜನರು ೧೪ ದಿನಗಳ ಆರಂಭಿಕ ನಿಗಾ ವ್ಯವಸ್ಥೆಯಲ್ಲಿದ್ದಾರೆ. ಎಲ್ಲರಿಗೂ ಅವರವರ ಮನೆಯಲ್ಲಿಯೇ ನಿಗಾ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯವಿರುವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಗಾ ವಹಿಸಲು ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ. ೧೪ ದಿನಗಳ ನಿಗಾ ಬಳಿಕ ಅವರಲ್ಲಿ ಸೋಂಕಿನ ಲಕ್ಷಣ ಕಂಡುಬಂದರೆ ಮಾತ್ರ ರಕ್ತ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ ಬೊಮ್ಮನಹಳ್ಳಿ ಅವರು ತಿಳಿಸಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಡಾ.ತುಕ್ಕಾರ್ ಮತ್ತಿತರರು ಉಪಸ್ಥಿತರಿದ್ದರು.

ಬೆಳಗಾವಿಯಲ್ಲಿ 58 ಜನರ ಮೇಲೆ ನಿಗಾ

ಗಂಭೀರವಾಗುತ್ತಿರುವ ಕೊರೋನಾ: ಸಾರಿಗೆ ಸಂಚಾರ ಸ್ಥಗಿತಕ್ಕೆ ಚಿಂತನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button