ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅಂತಾರಾಜ್ಯ ಗಡಿ ವಿವಾದ ಹಾಗೂ ಮಹಾದಾಯಿ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಮಹಾರಾಷ್ಟ್ರದ ಜತೆ ನೀರು ವಿನಿಮಯ ಕುರಿತು ದೆಹಲಿಯಲ್ಲಿ ಚರ್ಚೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಇಲ್ಲಿನ ಪ್ರವಾಸಿಮಂದಿರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದರು.
ಸುವರ್ಣ ವಿಧಾನಸೌಧದಲ್ಲಿ ಎರಡು ತಿಂಗಳಿಗೊಮ್ಮೆ ಸಚಿವ ಸಂಪುಟದ ಸಭೆ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಒಳ್ಳೆಯ ಕೆಲಸ ಆಗಿದೆ. ಇನ್ನಷ್ಟು ಚುರುಕುಗೊಳಿಸಲು ಸೂಚನೆ ನೀಡಲಾಗಿದೆ. ಬೆಳಗಾವಿ ಸಾಮಾಜಿಕ, ಸಾಂಸ್ಕೃತಿಕವಾಗಿ ಆರ್ಥಿಕವಾಗಿ ರಾಜ್ಯದ ಪ್ರಮುಖ ನಗರವಾಗಿ ಬೆಳೆದಿದೆ.
ಸ್ಮಾರ್ಟ್ ಸಿಟಿಯಡಿ ಕಮಾಂಡ್ ಸೆಂಟರ್ ಸ್ಥಾಪನೆ ಶ್ಲಾಘನೀಯ ಎಂದರು.
ಸಂಚಾರ ದಟ್ಟಣೆ ನಿರ್ವಹಣೆ ವಿನೂತನ ಪ್ರಯತ್ನ. ಗುಣಮಟ್ಟದ ಕಾಮಗಾರಿ ಸೂಚನೆ ನೀಡಲಾಗಿದೆ.
ಪ್ರವಾಹದಿಂದ ಉಂಟಾಗಿರುವ ಹಾನಿ ಸರಿಪಡಿಸಲು ಮೂಲಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ೮೬೫ ಕೋಟಿ ಬಿಡುಗಡೆ ಮಾಡಿದೆ ಎಂದೂ ಯಡಿಯೂರಪ್ಪ ತಿಳಿಸಿದರು.
ನಾಳೆ ದೆಹಲಿಗೆ ಪ್ರಯಾಣ:
ನಾಳೆ ದೆಹಲಿಗೆ ಪ್ರಯಾಣ ಮಾಡುತ್ತೇನೆ. ರಾಷ್ಟ್ರೀಯ ಅಧ್ಯಕ್ಷರ ಭೇಟಿ ಮಾಡಿ ಎರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಗೆದ್ದಿರುವವರಿಗೆ ಮಂತ್ರಿ ಸ್ಥಾನ ನೀಡಲಾಗುವುದು. ಒಬ್ಬಿಬ್ಬರನ್ನು ಕೈಬಿಡುವ ಬಗ್ಗೆ ಹೈಕಮಾಂಡ್ ನಿರ್ದೇಶನದ ಮೇರೆಗೆ ಕ್ರಮ ವಹಿಸಲಾಗುತ್ತದೆ.
ಈಗಿರುವ ಉಪ ಮುಖ್ಯಮಂತ್ರಿಗಳು ಮುಂದುವರಿಯಲಿದ್ದಾರೆ. ಹೊಸದಾಗಿ ಉಪ ಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ, ದುರ್ಯೋಧನ ಐಹೊಳೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ