ಶಿಕ್ಷಕರಷ್ಟು ದೊಡ್ಡವರು ಯಾರೂ ಇಲ್ಲ : ಹುಕ್ಕೇರಿ ಶ್ರೀಗಳು
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ :
ಶಿಕ್ಷಕ ದೇಶದ ಎಲ್ಲಾ ರಂಗದಲ್ಲಿರುವ ವ್ಯಕ್ತಿಗಳನ್ನು ಸಮಾಜಮುಖಿ ಚಿಂತನೆಗೆ ಹಚ್ಚಿ, ರಾಷ್ಟ್ರದ ಹಿತವನ್ನು ಬಯಸುವ ಹಾಗೆ ಮಾಡುವವನು ಒಬ್ಬ ಶಿಕ್ಷಕ. ಪ್ರಧಾನಿ, ಮುಖ್ಯಮಂತ್ರಿ, ಗುರು, ಜಗದ್ಗುರು, ಅಧಿಕಾರಿ, ರಾಜಕಾರಣಿ ಎಲ್ಲಾ ರಂಗದಲ್ಲಿರುವ ವ್ಯಕ್ತಿಗಳನ್ನು ನಿರ್ಮಾಣ ಮಾಡಿದವನು ಒಬ್ಬ ಶಿಕ್ಷಕ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸ್ಥಳಿಯ ಗುರುಶಾಂತೇಶ್ವರ ಪ್ರೌಢಶಾಲೆ, ಪ್ರಾಥಮಿಕಶಾಲೆ, ಸಂಸ್ಕೃತ ಕಾಲೇಜುಗಳ ಸಹಯೋಗದಲ್ಲಿ ಜರುಗಿದ ಶಿಕ್ಷಕ ದಿನಾಚರಣೆಯಲ್ಲಿ ಎಲ್ಲಾ ಶಿಕ್ಷಕರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಶಿಕ್ಷಕರ ಬಗ್ಗೆ ಎಲ್ಲರೂ ಗೌರವವನ್ನು ತಾಳುವುದು ಬಹಳ ಮುಖ್ಯವಾಗಿದೆ. ಆದರ್ಶ ಶಿಕ್ಷಕರು ಎಂದರೆ ಕೇವಲ ಒಬ್ಬಿಬ್ಬರಲ್ಲ. ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಬಂದು ಮಕ್ಕಳ ಹಿತವನ್ನು ಬಯಸುವ ಎಲ್ಲಾ ಶಿಕ್ಷಕರು ಆದರ್ಶ ಶಿಕ್ಷಕರೇ. ಎಲ್ಲಾ ಶಿಕ್ಷಕಿಯರು ಆದರ್ಶ ಶಿಕ್ಷಕಿಯರೇ. ಶಿಕ್ಷಕರ ಬಗ್ಗೆ ಎಲ್ಲರೂ ಕೂಡ ಗೌರವವನ್ನು ಹೊಂದುವ ಅವಶ್ಯಕತೆ ಇದೆ. ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರೇ ಮಾಡಿಕೊಳ್ಳುವುದು ಒಳಿತಲ್ಲ. ಸಮಾಜ ಶಿಕ್ಷಕರ ದಿನಾಚರಣೆಯನ್ನು ಮಾಡ ಬೇಕು ಅಂದಾಗ ಮಾತ್ರ ಶಿಕ್ಷಕರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಅಧ್ಯಾಪಕ ಶಿವಾನಂದ ಜಿನ್ರಾಳಿ, ನಮ್ಮ ಸಂಸ್ಥೆ ಆರಂಭವಾದಾಗಿನಿಂದಲೂ ಗುರುಗಳು ಪ್ರತಿಯೊಬ್ಬನನ್ನು ಸನ್ಮಾನಿಸಿ ಬೆನ್ನು ತಟ್ಟುತ್ತಾರೆ. ಶಿಕ್ಷಕರಿಗೆ ವೇತನಕ್ಕಿಂತ ಪ್ರೋತ್ಸಾಹ ಅತೀ ಮುಖ್ಯವಾಗಿರುವಂತದ್ದು. ನಾವೆಲ್ಲರೂ ಕೂಡ ಸಮಾಜದಿಂದ, ಅಧಿಕಾರಿಗಳಿಂದ, ಗುರುಗಳಿಂದ, ಪಾಲಕರಿಂದ ಪ್ರೋತ್ಸಾಹದ ಮಾತುಗಳನ್ನು ಅಪೇಕ್ಷಿಸುತ್ತೇವೆ. ಆ ಅಪೇಕ್ಷೆ ನಮ್ಮ ಬದುಕಿನೊಳಗೆ ಪೂರಕವಾಗಿ ನಿಲ್ಲುತ್ತದೆ ಎಂದರು.
ಹುಕ್ಕೇರಿ ಹಿರೇಮಠದ ಗುರುಕುಲದ ಮುಖ್ಯಸ್ಥ ವಿದ್ವಾನ ಸಂಪತ್ಕುಮಾರ್ ಶಾಸ್ತ್ರಿಗಳು ಮಾತನಾಡುತ್ತಾ, ನಮ್ಮ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕೃತ ವೇದ ಎಲ್ಲವನ್ನೂ ಕೂಡ ಕಲಿಸುತ್ತೇವೆ. ದೇಶಿಯ ಸಂಸ್ಕೃತಿಯನ್ನು ಎತ್ತಿಹಿಡಿಯುವಲ್ಲಿ ನಮ್ಮ ಸಂಸ್ಥೆ ಹೆಚ್ಚು ಮುತುವರ್ಜಿ ವಹಿಸಿದೆ ಎಂದರು.
ಶಾಲೆಯ 20 ಜನ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಹುಕ್ಕೇರಿ ಹಿರೇಮಠದ ಗುರುಕುಲದ ವಿದ್ಯಾರ್ಥಿಗಳು ವೇದಘೋಷವನ್ನು ಮಾಡಿದರು. ಗುರುಶಾಂತೇಶ್ವರ ಪ್ರೌಢಶಾಲೆಯ ಮಕ್ಕಳು ಪ್ರಾರ್ಥನೆಯನ್ನು ಮಾಡಿದರು. ನಂತರ ವಿದ್ಯಾರ್ಥಿಗಳೇ ಮಾತನಾಡಿ ಎಲ್ಲಾ ಗುರುಗಳಿಗೆ ಗೌರವ ಸಮರ್ಪಣೆಯನ್ನು ನೆರವೇರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ