ಅಭಿವೃದ್ಧಿ ವಿಷಯದಲ್ಲಿ ವಿರೋಧಿಗಳ ಆಕ್ಷೇಪಕ್ಕೆ ಅವಕಾಶಗಳೇ ಉಳಿದಿಲ್ಲ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ನನ್ನ ರಾಜಕೀಯ ವಿರೋಧಿಗಳು ಕೇವಲ ರಾಜಕೀಯಕ್ಕೆ ಮಾತ್ರ ನನ್ನ ಬಗ್ಗೆ ಆಕ್ಷೇಪಗಳನ್ನು ಹುಡುಕಬೇಕೇ ಹೊರತು ಅಭಿವೃದ್ಧಿ ವಿಷಯದಲ್ಲಿ ಆಕ್ಷೇಪ ವ್ಯಕ್ತಪಡಿಸಲು ಯಾವುದೇ ಅವಕಾಶಗಳೇ ಉಳಿದಿಲ್ಲ. ಶಾಸಕತ್ವದ ಮೊದಲ ಅವಧಿಯಲ್ಲೇ ಇದನ್ನು ಸಾಧಿಸಲು ಆಶೀರ್ವದಿಸಿದ ಜನತೆಗೆ ಎಲ್ಲ ಶ್ರೇಯಸ್ಸು ಸಲ್ಲುತ್ತದೆ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆಎಚ್ ಗ್ರಾಮದ ಸಿದ್ಧೇಶ್ವರ ನಗರ ಹಾಗೂ ರಜಾಕ್ ಕಾಲೋನಿಯ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಇಂದು ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ರಸ್ತೆಗಳ ನಿರ್ಮಾಣಕ್ಕೆ ಲಕ್ಷ್ಮೀ ಹೆಬ್ಬಾಳಕರ ಅವರು ಲೋಕೋಪಯೋಗಿ ಇಲಾಖೆಯಿಂದ 46 ಲಕ್ಷ ರೂ. ಬಿಡುಗಡೆ ಮಾಡಿಸಿದ್ದಾರೆ.
“ಕ್ಷೇತ್ರದಲ್ಲಿ ಜಾತಿ, ಧರ್ಮ, ರಾಜಕೀಯ ಎಲ್ಲವನ್ನೂ ಬದಿಗಿಟ್ಟು ಕೇವಲ ಅಭಿವೃದ್ಧಿಯನ್ನೇ ಗುರಿಯಾಗಿರಿಸಿಕೊಂಡು ಕೆಲಸ ಮಾಡಿದ್ದೇನೆ. ಈ ಅಭಿವೃದ್ಧಿಯ ಅಭಿಯಾನದಲ್ಲಿ ಮಕ್ಕಳು, ಮಹಿಳೆಯರು ಎನ್ನದೆ ಎಲ್ಲರನ್ನೂ ಸಮಾನವಾಗಿ ಕಂಡು ಸ್ಪಂದಿಸಿದ್ದೇನೆ. ತಾರತಮ್ಯಕ್ಕೆ ಎಲ್ಲೂ ಅವಕಾಶ ನೀಡಿಲ್ಲ. ಜನಸಾಮಾನ್ಯರ ಮಧ್ಯೆ ಸಾಮಾನ್ಯಳಾಗಿ ಬೆರೆತು ಕ್ಷೇತ್ರದ ಬೆಳವಣಿಗೆಯಲ್ಲಿ ತೊಡಗಿದ್ದೇನೆ. ಮಂಕುಬೂದಿ ರಾಜಕೀಯ ಮಾಡುವ ಬದಲು ಮನಸ್ಸುಗಳನ್ನು ಬೆಸೆದು ಅಭಿವೃದ್ಧಿ ಮಾಡಿದ್ದೇನೆ. ಇದನ್ನು ಮನಗಂಡಿದ್ದರಿಂದಲೇ ಇಂದು ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಯೇ ಇಲ್ಲದಂತೆ ಜನತೆ ನನ್ನನ್ನು ಬೆಂಬಲಿಸುತ್ತಿರುವುದಕ್ಕೆ ಸದಾ ಋಣಿಯಾಗಿರುತ್ತೇನೆ” ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
“ಮುಂಬರುವ ಚುನಾವಣೆಯಲ್ಲಿ ಜನತೆ ಯಾವುದೇ ಭಾವನಾತ್ಮಕತೆ ಕೆದಕುವ ಮಾತುಗಳಿಗೆ ಮರುಳಾಗದೆ ನನ್ನ ಅವಧಿಯಲ್ಲಾದ ಅಭಿವೃದ್ಧಿ ನೋಡಿ ಆತ್ಮಸಾಕ್ಷಿಯಿಂದ ಬೆಂಬಲಿಸಿದರೆ ಸದೈವ ಈ ಕ್ಷೇತ್ರದ ಸೇವಕಿಯಾಗಿ ಸಮೃದ್ಧ, ಸುಸಜ್ಜಿತ ವ್ಯವಸ್ಥೆಯ ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಕಟಿಬದ್ಧಳಾಗಿರುತ್ತೇನೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಖತಾಲ್ ದಾವಣಗೇರಿ, ಅಬ್ದುಲ್ ರಜಾಕ್, ಸಲೀಂ ಪೀರಜಾದೆ, ಕಲೀಮ್ ಜಮಾದಾರ, ಯೂನುಸ್ ಕಾಕತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ