ಮತ್ತೊಬ್ಬರಿಗೆ ತೊಂದರೆ ಮಾಡು ಎಂದು ಯಾವ ಧರ್ಮವೂ ಹೇಳುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮತ್ತೊಬ್ಬರಿಗೆ ತೊಂದರೆ ಮಾಡು ಎಂದು ಯಾವ ಧರ್ಮವೂ ಹೇಳುವುದಿಲ್ಲ. ಎಲ್ಲ ಧರ್ಮದವರು ನೆಮ್ಮದಿಯಾಗಿ ಬದುಕುವಂತೆ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ನಿರ್ಮಿಸಲು ಸರ್ಕಾರ ಶ್ರಮಿಸಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಶಿವಾಜಿನಗರದ ಬಸಿಲಿಕಾ ಚರ್ಚ್‌ನಲ್ಲಿ ಇಂದು ಹಮ್ಮಿಕೊಂಡಿದ್ದ ಮಾತೆ ಮೇರಿ ಅವರ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಕುವೆಂಪು ಅವರ ಕನಸಿನಂತೆ ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ ಬದುಕಬೇಕು. ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಬಲಿಷ್ಠವಾದ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮೆಲ್ಲರ ಶ್ರಮಕ್ಕೆ ಫಲ ಸಿಕ್ಕಿದೆ. ಈ ಹಿಂದೆ ಹಿಂದುಳಿದ ವರ್ಗದ ಸಮುದಾಯಗಳು ಆತಂಕ ಮತ್ತು ಭಯದ ವಾತಾವರಣದಲ್ಲಿ ಜೀವನ ನಡೆಸುವ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಎಲ್ಲರೂ ಕೂಡ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ” ಎಂದರು.
“ಹಿಂದುಳಿದ ಸಮುದಾಯಗಳು ಈ ಹಿಂದೆ ಅನುಭವಿಸುತ್ತಿದ್ದ ಸಮಸ್ಯೆಗಳಿಗೆ ನಾವು ಮುಕ್ತಿ ನೀಡಿದ್ದೇವೆ. ಧರ್ಮ ಯಾವುದಾದರೂ ತತ್ವ ಒಂದೇ ನಾಮ ನೂರಾದರೂ ದೈವ ಒಂದೇ. ದೇವನೊಬ್ಬ ನಾಮ ಹಲವು. ಜೀವನದಲ್ಲಿ ನೆಮ್ಮದಿ ಜೊತೆಗೆ ಆರೋಗ್ಯ ಬಹಳ ಮುಖ್ಯ. ಆರೋಗ್ಯ ದೇವಿ ಎಲ್ಲರಿಗೂ ಆರೋಗ್ಯ, ಯಶಸ್ಸು ನೀಡಿ ಕಾಪಾಡಲಿ” ಎಂದು ಹರಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೊ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ