ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಟೈಮ್ ಸೆನ್ಸ್ ಬಗ್ಗೆ ಗಮನ ಕೊಡದೇ ಮಾಧ್ಯಮಗಳ ಕೆಂಗಣ್ಣಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಇಂದು ಗುರಿಯಾಗಿದ್ದಾರೆ.
ಮಹಾಮಾರಿ ಕರೋನಾ ಉಲ್ಭಣಗೊಂಡು ಬಹುದೀರ್ಘ ಸಮಯದ ನಂತರ ಬೆಳಗಾವಿಗೆ ಆಗಮಿಸಿರುವ ಶೆಟ್ಟರ್ ಅವರಿಗೆ, ಇಂದು ನಿಗದಿತ ಸಮಯಕ್ಕೆ ಅಧಿಕಾರಿಗಳ ಸಭೆ ನಡೆಸಲು ಆಗಲಿಲ್ಲ.
ಇಂದು ಮಧ್ಯಹ್ನ 1:30 ಕ್ಕೆ ಅಧಿಕಾರಿಗಳ ಸಭೆ ನಡೆಸಿ ಅದರ ಮಾಹಿತಿ ಸುದ್ದಿಗೋಷ್ಠಿ ಮೂಲಕ ತಿಳಿಸಬೇಕಿದ್ದ ಜಗದೀಶ ಶೆಟ್ಟರ್ ಬಹು ಹೊತ್ತು ಕಾಯಿಸಿ 2 ಗಂಟೆ ತಡವಾಗಿ ಬಂದರು.
ತಮ್ಮ ಸಂಬಂಧಿ ಹಾಗೂ ಕೇಂದ್ರ ರಾಜ್ಯ ರೈಲ್ವೇ ಸಚಿವ ಸುರೇಶ ಅಂಗಡಿ ಅವರ ಮನೆಗೆ ತೆರಳಿದ್ದ ಜಗದೀಶ ಶೆಟ್ಟರ್ ಅವರು ತಾವು ಊಟ ಮಾಡಿ, ಅಧಿಕಾರಿಗಳು ಹಾಗೂ ಮಾಧ್ಯಮದವರನ್ನು ಹಸಿವೆಯಿಂದ ಬಳಲುವಂತೆ ಮಾಡಿದ್ದರು.
ಹೆಸರಿಗೆ ಉಸ್ತುವಾರಿ ಹೊತ್ತು ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಹೊತ್ತಿರುವ ಜಗದೀಶ ಶೆಟ್ಟರ್ ‘ಕೊರೋನಾ’ ಮಹಾಮಾರಿಯ ಬಗ್ಗೆ ಅಗತ್ಯ ಗಂಭೀರತೆ ಹೊಂದಿಲ್ಲ ಎನ್ನುವುದು ಅವರ ಇಂದಿನ ವರ್ತನೆಯಿಂದ ಬಹಿರಂಗವಾಯಿತು.
ಸರಿಯಾದ ಸಮಯ ಪಾಲನೆ ಮಾಡದೆ ಅಧಿಕಾರಿಗಳು ಹಾಗೂ ಮಾಧ್ಯಮಗಳನ್ನು ನಿರ್ಲಕ್ಷಿಸಿದ ಸಚಿವ ಶೆಟ್ಟರ್ ವಿರುದ್ಧ ಇಂದು ಬಾಯಕಾಟ್ ಮಾಡಿ ಮಾಧ್ಯಮಗಳು ಹೊರನಡೆದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ