*ಅವಿರೋಧ ಆಯ್ಕೆ ಬೇಡ: ಕುಸ್ತಿನೇ ಬೇಕು ಎಂದ CM* *ವಿಜಯೋತ್ಸವ ಆಚರಣೆ ನೋಡುವಂತೆ ಆ ಪತ್ರಕರ್ತನಿಗೆ ಹೇಳಿದ್ದೆ*

*ಕಾಂಗ್ರೆಸ್ ನಾಯಕರಿಗೆ  ಮುಖ್ಯಮಂತ್ರಿಗಳ ಬಹಿರಂಗ ಸವಾಲು*

ಪ್ರಗತಿವಾಹಿನಿ ಸುದ್ದಿ, ಹಾವೇರಿ :  ನನಗೆ ಅವಿರೋಧ ಆಯ್ಕೆ ಬೇಡ. ನನಗೆ ಕುಸ್ತಿನೇ ಬೇಕು. ಆಗಲೇ ಯಾರ ಶಕ್ತಿ ಏನು ಎಂದು  ತಿಳಿಯುತ್ತದೆ  ಎಂದು ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಬಹಿರಂಗವಾಗಿ ಸವಾಲು ಹಾಕಿದರು. 

ಹಾವೇರಿಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಕಣಕ್ಕೆ ಯಾರು ಬೇಕಾದರೂ ಬರಬಹುದು,  ಸೆಡ್ಡು ಹೊಡೆದೇ ಬಿಡೋದು, ಬೇರೆ ಪ್ರಶ್ನೆಯೇ ಇಲ್ಲ ಎಂದು ಸವಾಲು ಹಾಕಿದರು. ಕುಸ್ತಿ ಪಟು ಅಭ್ಯಾಸ  ಮಾಡಿಕೊಂಡು ಬರಬೇಕು ಏಕೆಂದರೆ ಹೊಸ  ಕುಸ್ತಿ ಹೊಸ ಪಟ್ಟು ಇರಲಿದೆ ಎಂದು ಬಸವರಾಜ ಬೊಮ್ಮಾಯಿ ಸೆಡ್ಡು ಹೊಡೆದರು.  

*ತಲೆ ಮೇಲಿನ ಕೈ ತೆಗೆದಿಲ್ಲ*

ಮೀಸಲಾತಿ ನಿರ್ಣಯ ಮಾಡಿದಾಗ ತಲೆ ಮೇಲೆ ಕೈ ಇಟ್ಟುಕೊಂಡ ವಿರೋಧ ಪಕ್ಷಗಳು  ಇನ್ನೂ ತಲೆ ಮೇಲಿನ ಕೈ ತೆಗೆದಿಲ್ಲ. ದೇಶದಲ್ಲಿಯೇ ಯಾರೂ ಮಾಡಿರದ ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಿದ ಸಾಹಸವನ್ನು ಮಾಡಿರುವುದಾಗಿ ಹೇಳಿದರು.  

*ದ್ವಿಮುಖ ನೀತಿ*

ದೆಹಲಿಯಿಂದ ಬಂದ ವಿರೋಧ ಪಕ್ಷದ ನಾಯಕ  ಇದನ್ನು ಸಂವಿಧಾನ ವಿರೋಧಿ ಎಂದರು.  ಕಾಂಗ್ರೆಸ್ ನದ್ದು ದ್ವಿಮುಖ ನೀತಿ.  ಸದಾಶಿವ ಆಯೋಗದ ವರದಿ  ಅನುಷ್ಠಾನ ಮಾಡುವುದಾಗಿ ಒಂದೆಡೆ, ಮಾಡುವುದಿಲ್ಲ ಎಂದು ಮತ್ತೊಂದೆಡೆ ಹೇಳುತ್ತಾರೆ. ಇದು ದ್ವಿಮುಖ ನೀತಿ ಅಲ್ಲವಾ? ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿ ಆಡಳಿತ ಮಾಡಿದರು ಎಂದರು.

*ಶಿಗ್ಗಾಂವಿ ಕ್ಷೇತ್ರದಲ್ಲೇ ಸ್ಪರ್ಧೆ*

ಶಿಗ್ಗಾಂವಿ  ನನ್ನ   ಆತ್ಮವಿಶ್ವಾಸ. ಮತ್ತೊಂದು  ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಬರುವ 5 ವರ್ಷಗಳಲ್ಲಿ  15 ವರ್ಷಗಳಲ್ಲಿ ಮಾಡಿದಷ್ಟು ಕೆಲಸ ಮಾಡಿ ತೋರಿಸುವುದಾಗಿ  ಹೇಳಿದ ಮುಖ್ಯಮಂತ್ರಿಗಳು, ಬೇರೆ ಬೇರೆ ಕ್ಷೇತ್ರಗಳಲ್ಲಿ ಆಹ್ವಾನ ಇದ್ದರೂ ನನಗೆ ಪ್ರೀತಿ ವಿಶ್ವಾಸ ಇರುವ ಶಿಗ್ಗಾಂವಿಯಲ್ಲಿ ಪರೀಕ್ಷೆಗೆ ಇಳಿಯುವುದಾಗಿ ಸ್ಪಷ್ಟಪಡಿಸಿದರು.  

*ಶಕ್ತಿ ತುಂಬಿದ್ದಾರೆ*

ನಿನ್ನೆ ಬಿಜೆಪಿ ಸಂಸ್ಥಾಪಕ ದಿನಾಚರಣೆ ಆಚರಿಸಲಾಗಿದ್ದು, ಮೊದಲ ದಿನ ಶಿಗ್ಗಾವಿ ತಾಲೂಕಿನಲ್ಲಿ ಬಿಜೆಪಿ ಶಕ್ತಿ ಇಮ್ಮಡಿ ಆಗಿದೆ. ಈ ಕಾರ್ಯಕ್ರಮ ಬಿಜೆಪಿ ಮತ್ತೆ ರಾಜ್ಯದಲ್ಲಿ  ಸಂಪೂರ್ಣವಾಗಿ ಅಧಿಕಾರಕ್ಕೆ ಬರುವ ದಿಕ್ಸೂಚಿಯಾಗಿದೆ ಎಂದರು.  ಇಂದು ಪಕ್ಷ ಸೇರಿದವರು ಯಾರೂ ಹೊರಗಿನವರಲ್ಲ. ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ನನ್ನ ಜೊತೆ ಕೆಲಸ ಮಾಡಿದವರು. ಈಗ ನಾವೆಲ್ಲ ಒಂದುಗೂಡಿದ್ದೇವೆ ಎಂದರು. ನನ್ನ ಜೊತೆ ಹಲವಾರು ಜನ ಪಕ್ಷ ಕಟ್ಟೋಕೆ ಹೆಗಲು ಕೊಟ್ಟಿದ್ದರು.  2008 ರ ಚುನಾವಣೆಯ  ವಾತಾವರಣವೂ ಹೀಗೆ ಇತ್ತು ಎಂದು ಸ್ಮರಿಸಿದ ಮುಖ್ಯಮಂತ್ರಿಗಳು, ನನ್ನ ಜೊತೆ ಸೇರಿರುವ ಎಲ್ಲಾ ಹಿರಿಯರು ಹಾಗೂ  ಯುವಕರನ್ನು  ಸ್ವಾಗತಿಸುವುದಾಗಿ ತಿಳಿಸಿದರು.  ಇನ್ನು ಮುಂದೆ ಶಿಗ್ಗಾವಿ ಸವಣೂರಲ್ಲಿ ಒಂದೇ ಒಂದು ಪಕ್ಷದಿಂದ ಅಭಿವೃದ್ಧಿ , ತಾಲೂಕಿನ ಸಮಗ್ರ ಏಕತೆ, ಬರುವ ದಿನಗಳಲ್ಲಿ ಮಾದರಿ ಕ್ಷೇತ್ರವಾಗಿ ಪರಿವರ್ತನೆ ಮಾಡಲು ಎಲ್ಲರೂ ಶಕ್ತಿ ತುಂಬಿದ್ದಾರೆ ಎಂದು ಅಭಿಪ್ರಾಯಪಟ್ಟರು. 

*ಪ್ರೀತಿಯಿಂದ ಜಗತ್ತು ಗೆಲ್ಲಬಹುದು*

ಅರವತ್ತು  ತಿಂಗಳಲ್ಲಿ 59 ತಿಂಗಳು ಅಭಿವೃದ್ಧಿ ಮಾಡೋಣ. ಆದರೆ ಒಂದು ತಿಂಗಳು ಮಾತ್ರ ರಾಜಕೀಯ ಮಾಡೋಣ ಎಂದ ಅವರು ಮೈದಾನ್ ಹೈ, ಘೋಡಾ ಹೈ. ಯಾವುದೇ ರೀತಿಯ ಒತ್ತಡ, ಒತ್ತಾಯ ಇಲ್ಲ. ಇಲ್ಲಿ ಬಂದವರು ಒತ್ತಾಯಕ್ಕೆ ಮಣಿದು ಬಂದಿಲ್ಲ ಪ್ರೀತಿ ವಿಶ್ವಾಸದಿಂದ  ಬಂದಿದ್ದಾರೆ ಎಂದರು. ಪ್ರೀತಿಯಿಂದ ಜಗತ್ತು ಗೆಲ್ಲಬಹುದು ಎಂಬ  ಮಾತು ಶಿಗ್ಗಾವಿ ತಾಲೂಕಿನಲ್ಲಿ ಸತ್ಯ ಆಗಿದೆ ಎಂದರು. 

* ಜನತೆಯ ಮೇಲೆ ವಿಶ್ವಾಸ*

ಶಿಗ್ಗಾವಿ ಬಂಧುಗಳು ಒಳ್ಳೆದನ್ನು ಗುರುತಿಸಿ, ಬೆಂಬಲಿಸುತ್ತಾರೆ. ಎಂಥ ಅಪಪ್ರಚಾರ ಆದರೂ ಆತ್ಮ ಸಾಕ್ಷಿಯಿಂದ ಬೆಂಬಲಿಸುತ್ತಾರೆ. ನನ್ನ ವಿರುದ್ದ ಬಹಳ ದೊಡ್ಡ ಅಪಪ್ರಚಾರ ನಡೆದು ಅಂದು ಪ್ರಮುಖ ಪತ್ರಿಕೆಯಲ್ಲಿ  ಬೊಮ್ಮಾಯಿ ಗೆಲ್ಲೋದು ಸಾಧ್ಯವಿಲ್ಲ ಎಂದು ಬರೆದಿದ್ದರು. ಫಲಿತಾಂಶ ಬಂದ ದಿನ  ವಿಜಯೋತ್ಸವ  ಆಚರಣೆ ನೋಡುವಂತೆ ನಾನು ಆ ಪತ್ರಕರ್ತನಿಗೆ ಹೇಳಿದ್ದೆ ಎಂದು ಸ್ಮರಿಸಿದರು. ಈಗಲೂ ಅಪಪ್ರಚಾರ ಮಾಡುತ್ತಾರೆ. ಬೆಂಗಳೂರು , ದೆಹಲಿಯಲ್ಲಿ ಕುಳಿತು ಬೊಮ್ಮಾಯಿ ಹೇಗೆ ಸೋಲಿಸಬೇಕು ಎಂದು ಯೋಜನೆ ಹಾಕುತ್ತಾರೆ. ಈ  ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ ಎಂದು ಮುಖ್ಯಮಂತ್ರಿಗಳು,  ಇಲ್ಲಿನ  ತಾಯಂದಿರು,  ಜನತೆ ಹಾಗೂ  ಯುವಕ ಮಿತ್ರರ ಮೇಲೆ ವಿಶ್ವಾಸವಿರುವುದಾಗಿ  ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು. 

*ಹಳ್ಳದ ನೀರೂ ಸಮುದ್ರ ಸೇರಲೇಬೇಕು*

ಬಿಜೆಪಿ ಒಂದು  ಸಮುದ್ರ ಇದ್ದ ಹಾಗೆ, ಹಳ್ಳ ಕೊಳ್ಳ ಇವೆಯಾದರೂ   ಹಳ್ಳದ ನೀರೂ ಸಮುದ್ರ ಸೇರಲೇಬೇಕು.  ಸಮುದ್ರ ಮಂಥನ ಆಗಲಿದೆ. ಏನೇ ವಿಷ ಬಂದರೂ ಸ್ವೀಕಾರ ಮಾಡಿ ಜನರಿಗೆ ಅಮೃತ ಕೊಡುತ್ತೇವೆ.  ಏನೇ ಅಪಪ್ರಚಾರ ಮಾಡಿದರೂ  ಆತ್ಮ ಸಾಕ್ಷಿಯಿಂದ ನಿರ್ಣಯ ಮಾಡಿರುವುದಾಗಿ ತಿಳಿಸಿದರು.

https://pragati.taskdun.com/gujarathhanuman-statueamith-shah/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button