ಪ್ರಗತಿವಾಹಿನಿ ಸುದ್ದಿ, ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ರಾಜಕೀಯ ಡ್ರಾಮಾ, ಹೈಡ್ರಾಮಾಗಳ ವೇದಿಕೆ ಸೃಷ್ಟಿಸಿದೆ. ಪ್ರಮುಖ ಪಕ್ಷಗಳಲ್ಲಿ ಟಿಕೆಟ್ ಗಾಗಿ ಅತೃಪ್ತಿ, ಅಸಮಾಧಾನ, ಎದುರಾಳಿ ಪಕ್ಷಕ್ಕೆ ಜಿಗಿತ, ಹಳೆಯ ಪಕ್ಷಕ್ಕೆ ಉಗಿತ.. ಹೀಗೆ ಒಂದಲ್ಲ ಒಂದು ಸೀನ್ ರಂಜನೀಯವಾಗಿ ಮೂಡಿಬರುತ್ತಿವೆ.
ಇಂಥ ಸನ್ನಿವೇಶದಲ್ಲಿ ಒಬ್ಬರೇ ವ್ಯಕ್ತಿ ಎರಡು ಪಕ್ಷಗಳಿಂದ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ. ಅವರು ಮೈಸೂರಿನ ಅಯೂಬ್ ಖಾನ್. ಇತ್ತೀಚೆಗೆ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಮೈಸೂರಿನಿಂದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದಲೂ ಸ್ಪರ್ಧೆ ಬಯಸಿದ್ದ ಅವರು ತಮ್ಮದೇ ಆದ ‘ಇಂಡಿಯನ್ ನ್ಯಾಷನಲ್ ನ್ಯೂ ಕಾಂಗ್ರೆಸ್’ ಎಂಬ ರಾಷ್ಟ್ರೀಯ ಪಕ್ಷ ಹುಟ್ಟು ಹಾಕಿ ಅದರ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು.
ಇತ್ತೀಚೆಗೆ ತಮ್ಮ ಪಕ್ಷಕ್ಕೆ ತಾವೇ ರಾಜೀನಾಮೆ ನೀಡುವ ಮೂಲಕ ಅಚ್ಚರಿದಾಯಕ ಬೆಳವಣಿಗೆಯೊಂದಕ್ಕೂ ಕಾರಣರಾಗಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಗೆ ನರಸಿಂಹರಾಜ ಕ್ಷೇತ್ರದಿಂದ ಬಿ ಫಾರ್ಮ್ ಸಿಗುವ ಮೊದಲೇ ಜೆಡಿಎಸ್ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದರು.
ಜೆಡಿಎಸ್ ಪಕ್ಷದಿಂದ ಬಿ ಫಾರ್ಮ್ ಇನ್ನೂ ಸಿಕ್ಕಿಲ್ಲ. ಅಕಸ್ಮಾತ್ ಆ ಚಾನ್ಸ್ ತಪ್ಪಿಹೋದರೆ ಎಂಬ ಕಾರಣಕ್ಕೆ ಇದೇ ಕ್ಷೇತ್ರದಿಂದ ತಾವು ಈ ಮೊದಲು ರಾಜೀನಾಮೆ ನೀಡಿದ ತಮ್ಮದೇ ಪಕ್ಷ ಇಂಡಿಯ ನ್ ನ್ಯೂ ಕಾಂಗ್ರೆಸ್ ಹೆಸರಿನಲ್ಲಿಯೂ ಮತ್ತೊಂದು ನಾಮಪತ್ರ ಸಲ್ಲಿಸಿದ್ದಾರೆ.
ಏನಕೇನ ಪ್ರಕಾರೇಣ ಯಾವುದಾದರೊಂದು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲೇಬೇಕು ಎಂದು ಸಂಕಲ್ಪಿಸಿರುವ ಅಯೂಬ್ ಖಾನ್ ನಡೆಗೆ ಜನ “ಅಬ್ಬಬ್ಬಾ..” ಅಂತ ಹುಬ್ಬೇರಿಸಿಕೊಂಡಿರುವುದಂತೂ ನಿಜ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ