ಪ್ರಗತಿವಾಹಿನಿ ಸುದ್ದಿ; ತಿರುವನಂತಪರಂ: ಕೇರಳದ ಇಬ್ಬರು ಮಕ್ಕಳಲ್ಲಿ ಸಾಂಕ್ರಾಮಿಕ ರೋಗ ನೊರೊವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ವಿಷಾಹಾರ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೇರಳದ 8 ಮಕ್ಕಳ ಪೈಕಿ ಇದೀಗ ಇಬ್ಬರು ಮಕ್ಕಳಲ್ಲಿ ಸಾಂಕ್ರಾಮಿಕ ರೋಗ ನೊರೊವೈರಸ್ ಪತ್ತೆಯಾಗಿದ್ದು, ಹೊಸ ಆತಂಕ ಸೃಷ್ಟಿಸಿದೆ.
ಕೇರಳದ ಆಲಪ್ಪುಳ ಜಿಲ್ಲೆಯ ಕಾಯಂಕುಲಂನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8 ಮಕ್ಕಳು ವಿಷಾಹಾರ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮಕ್ಕಳು ಗುಣಮುಖರಾಗಿದ್ದಾರೆ. ಆದರೆ ಇವರಲ್ಲಿ ಇಬ್ಬರು ಮಕ್ಕಳಲ್ಲಿ ನೊರೊವೈರಸ್ ಪತ್ತೆಯಾಗಿದೆ.
ನೊರೊವೈರಸ್ ಸಾಂಕ್ರಾಮಿಕ ರೋಗವಾದ್ದರಿಂದ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದ್ದು, ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಎಲ್ಲರೂ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಿ, ಜಾಗೃತವಾಗಿರುವಂತೆ ಸಚಿವರು ತಿಳಿಸಿದ್ದಾರೆ.
ನೊರೊವೈರಸ್ ಕಲುಷಿತ ಆಹಾರ, ಕಲುಷಿತ ನೀರು, ಪಾನೀಯದ ಮೂಲಕ ಹರಡುತ್ತದೆ. ಸೋಂಕು ಕಂಡುಬಂದಲ್ಲಿ ವಾಂತಿ, ಅತಿಸಾರ, ತಲೆನೋವು, ದೇಹದಲ್ಲಿ ನೋವು ಕಂಡುಬರುತ್ತದೆ. ನಿರ್ಜಲೀಕರಣ ಸಮಸ್ಯೆ ಕೂಡ ಉಂಟಾಗುತ್ತದೆ.
ಈ ಸೋಂಕು ತಡೆಗಟ್ಟಲು ಸ್ವಚ್ಚತೆ ಕಾಪಾಡುವುದು ಮುಖ್ಯ. ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ. ಹಣ್ಣು-ತರಕಾರಿಗಳನ್ನು ತೊಳೆದು ಸೇವಿಸಿ. ಶುದ್ಧವಾದ ಆಹಾರ, ನೀರು ಸೇವನೆ ಬಗ್ಗೆ ಗಮನವಿರಲಿ.
ಕಲುಷಿತ ಕುಡಿಯುವ ನೀರು ಸೇವಿಸಿ ಮೂವರ ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ