Kannada NewsKarnataka News

ಗಮನಿಸಿ: ವಿಧಾನಪರಿಷತ್ ಚುನಾವಣೆ ಮಾರ್ಗಸೂಚಿ

ಮತದಾನ ಮಾಡುವ ವಿಧಾನ ಮತ್ತು ತಿರಸ್ಕೃತವಾಗಲು ಕಾರಣ ಇಲ್ಲಿದೆ 
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಮತಗಟ್ಟೆ ಏಜೆಂಟರುಗಳು  ಚುನಾವಣಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಗೊಂದಲವಾಗದಂತೆ ನಿಯಮಾನುಸಾರ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಆರ್. ವೆಂಕಟೇಶ್ ಕುಮಾರ್ ಅವರು ತಿಳಿಸಿದರು.
ಚುನಾವಣಾ ಮಾರ್ಗಸೂಚಿಗಳ ಕುರಿತು ನಡೆದ ಸಭೆಯಲ್ಲಿ  ಶನಿವಾರ (ಡಿ.4) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅವರು ಮಾತನಾಡಿದರು.
ಚುನಾವಣೆಯ ಸಂದರ್ಭದಲ್ಲಿ ಏಜೆಂಟ್ ಗಳು ಯಾವುದೇ ಗೊಂದಲ ಸೃಷ್ಟಿಸಿಕೊಳ್ಳಬಾರದು ಚುನಾವಣೆಯ ಮಾರ್ಗಸೂಚಿಗಳ ಮಾಹಿತಿ ಪಡೆದು ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
(Companion) ಮತದಾರರಿಗೆ ಸಹಾಯಕರ ನೇಮಿಸಿಕೊಳ್ಳಲು  ಅವಕಾಶ:
ಅಂಧರು/ದುರ್ಬಲ/ಅನಕ್ಷರಸ್ಥ ಮತದಾರರು ಮತದಾನ ಸಮಯದಲ್ಲಿ ಅವರ ಸಹಾಯಕ್ಕಾಗಿ ಯಾರಾದರೂ ಜೊತೆಗಾರ (Companion) ಅವಶ್ಯಕತೆ ಇದ್ದಲ್ಲಿ ಅಂತಹ ಮತದಾರರು, ಡಿಸೆಂಬರ್ 6 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.
ಸ್ಥಳೀಯ ಸಂಘ ಸಂಸ್ಥೆಗಳ ಮುಖ್ಯಾಧಿಕಾರಿಗಳು , ಆಯುಕ್ತರು ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಮತದಾರರು ಅಂಧರು/ ದುರ್ಬಲ / ಅನಕ್ಷರಸ್ಥ ಮತದಾರರು ಮತದಾನ ಸಮಯದಲ್ಲಿ ಅವರ ಸಹಾಯಕ್ಕಾಗಿ ಯಾರಾದರೂ ಜೊತೆಗಾರ ( Companion ) ಅವಶ್ಯಕತೆ ಇದೆ ಎಂದು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲನೆ ಮಾಡಿ ದೃಢೀಕರಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಶಂಕರಪ್ಪ ವಣಕ್ಯಾಳ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಹಾಗೂ ಅಭ್ಯರ್ಥಿಗಳ ಪರ ಏಜೆಂಟ್ ಗಳು ಉಪಸ್ಥಿತರಿದ್ದರು.

 

ಮತದಾನದ ಮಾರ್ಗಸೂಚಿಗಳು:
ಮತ ಚಲಾಯಿಸುವ ಉದ್ದೇಶಕ್ಕಾಗಿ ಚುನಾವಣಾಧಿಕಾರಿಯು ಮತಪತ್ರದೊಡನೆ ನಿಮಗೆ ನೀಡುವ ನೇರಳೆ ಬಣ್ಣದ ಸೈಜ ಪೆನ್ನನ್ನು ಮಾತ್ರ ಬಳಸಿ ಮತ ಚಲಾಯಿಸಿ, ಬೇರೆ ಯಾವುದೇ, ಪೆನ್ನು, ಬಾಲ್ ಪಾಯಿಂಟ್ ಪೆನ್ನು ಅಥವಾ ಗುರುತು ಮಾಡುವ ಯಾವುದೇ ಇತರ ಸಾಧನವನ್ನು ಬಳಸಿ ಮತ ಚಲಾಯಿಸಿದರೆ, ಮತವನ್ನು ಅಸಿಂಧು ಎಂದು ಪರಿಗಣಿಸಲಾಗುವುದು.
ಮೊದಲನೇ, ಪ್ರಾಶಸ್ತ್ಯವಾಗಿ ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರಿನ ಮುಂದೆ ಒದಗಿಸಲಾಗಿರುವ ಪ್ರಾಶಸ್ತ್ಯ ಕ್ರಮ “ಎಂದು ಗುರುತು ಮಾಡಲಾಗಿರುವ ಅಂಕಣದಲ್ಲಿ ಅಂಕಿ 1 ನ್ನು ಗುರುತು ಹಾಕುವ ಮೂಲಕ  ಮತ ನೀಡಿ. ಈ ಅಂಕಿ ” 1″ ನ್ನು ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು.
ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ಚುನಾಯಿಸಬೇಕಿದ್ದ ಪಕ್ಷದಲ್ಲಿ ಸಹ ಅಂಕಿ “1” ನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು.
ಚುನಾಯಿಸಬೇಕಾಗಿರುವ ಅಭ್ಯರ್ಥಿಗಳ ಸಂಖ್ಯೆ ಎಷ್ಟೇ ಇದ್ದರೂ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆಯಷ್ಟೇ ಪ್ರಾಶಸ್ತ್ಯಗಳನ್ನು ನೀವು ಹೊಂದಿರುತ್ತಿದ್ದು, ಉದಾಹರಣೆಗೆ ಚುನಾಯಿಸಬೇಕಾಗಿರುವ ಸ್ಥಾನ ಒಂದು ಅಥವಾ ಎರಡು ಆಗಿದ್ದು, ಐದು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಲ್ಲಿ, ನಿಮ್ಮ ಪ್ರಾಶಸ್ತ್ಯ ಕ್ರಮದಲ್ಲಿ ಇದು ಪ್ರಾಶಸ್ತ್ಯಗಳನ್ನು ಗುರುತು ಹಾಕಬಹುದು.
ಉಳಿದ ಅಭ್ಯರ್ಥಿಗಳಿಗೆ ಮುಂದಿನ ಪ್ರಾಶಸ್ತ್ರಗಳನ್ನು ಗುರುತು ಹಾಕುವುದಕ್ಕಾಗಿ ಅಂಥ ಅಭ್ಯರ್ಥಿಗಳ ಹೆಸರುಗಳ ಮುಂದೆ ಒದಗಿಸಲಾಗಿರುವ “ಪ್ರಾಶಸ್ತ್ಯ ಕ್ರಮ’ ಎಂಬ ಅಂಕಣದಲ್ಲಿ ತರುವಾಯದ ಅಂಕಿಗಳಾದ 2 , 3 , 4 ಇತ್ಯಾದಿಗಳನ್ನು ನಿಮ್ಮ ಪ್ರಾಶಸ್ತ್ಯ ಕ್ರಮದಲ್ಲಿ ಗುರುತು ಹಾಕುವ ಮೂಲಕ  ಮತ ನೀಡಬಹುದು ಎಂದು ತಿಳಿಸಿದರು.
ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಕೇವಲ ಒಂದು ಅಂಕಿಯನ್ನು ಮಾತ್ರ ನೀವು ಗುರುತು ಹಾಕಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು  ಅದೇ ಅಂಕಿಯನ್ನು ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳ ಮುಂದೆ ಗುರುತು ಹಾಕಿರುವುದಿಲ್ಲ ಎಂಬುದನ್ನು ಸಹ ವಿಚಿತಪಡಿಸಿಕೊಳ್ಳಬೇಕು.
ಪ್ರಾಶಸ್ತ್ಯವನ್ನು ಅಂಕಿಗಳ ಮೂಲಕ  1 , 2 , 3 ರೀತಿಯಲ್ಲಿ ಇತ್ಯಾದಿ ಕ್ರಮದಲ್ಲಿ ಮಾತ್ರ ಗುರತು ಹಾಕಬೇಕು. ಇದರ ಬದಲಾಗಿ ಒಂದು, ಎರಡು, ಮೂರು , ಇತ್ಯಾದಿ ಅಕ್ಷರಗಳ ರೂಪದಲ್ಲಿ ಬರೆಯಬಾರದು .
ಅಂಕಿಗಳನ್ನು ೧,೨,೩ ಅಥವಾ 1 , 2 , 3 ಇತ್ಯಾದಿ ಅಂತಾರಾಷ್ಟ್ರೀಯ ರೂಪದ ಭಾರತೀಯ ಅಂಕಿಗಳು ಅಥವಾ ಇತ್ಯಾದಿ ರೋಮನ್ ಅಂಕಿಗಳ ರೂಪದಲ್ಲಿ ಅಥವಾ ಸಂವಿಧಾನದ 8ನೇ ಅನುಸೂಚಿಯಲ್ಲಿ ಮಾನ್ಯ ಮಾಡಲಾಗಿರುವ ಭಾರತದ ಯಾವುದೇ ಭಾಷೆಯಲ್ಲಿ ಬಳಸಲಾಗವ ಅಂಕಿಗಳ ರೂಪದಲ್ಲಿ ಗುರುತು ಹಾಕಬಹುದಾಗಿದೆ.
ಮತಪತ್ರದ ಮೇಲೆ ಮತದಾರ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬಾರದು ಮತ್ತು ಸಹಿ ಅಥವಾ ಇನ್ಶಿಯಲ್, ಹೆಬ್ಬೆಟ್ಟಿನ ಗುರುತನ್ನು ಹಾಕಬಾರದು. ಒಂದುವೇಳೆ ಹಾಕಿದ್ದರೆ ಮತ  ಅಸಿಂಧು ಎಂದು ಪರಿಗಣಿಸಲಾಗುವುದು ಎಂದು ಹೇಳಿದರು.
ಮತದಾರರ ಪ್ರಾಶಸ್ತ್ಯವನ್ನು ಸೂಚಿಸುವುದಕ್ಕಾಗಿ ಅವರ ಆಯ್ಕೆಯ ಅಭ್ಯರ್ಥಿಗಳ ಹೆಸರುಗಳ ಮುಂದೆ ಅಂಕಿಯನ್ನಲ್ಲದೆ ಇನ್ನಾವುದೇ ಚಿಹ್ನೆ ಅಥವಾ ಗುರುತನ್ನು ಹಾಕಬಾರದು. ಆ ರೀತಿಯ ಮತ ಪತ್ರವನ್ನು ತಿರಸ್ಕರಿಸಲಾಗುವುದು ಆದ್ದರಿಂದ ಮತ ಪ್ರಾಶಸ್ತ್ಯಗಳನ್ನು  1 , 2 , 3 ಇತ್ಯಾದಿ ಅಂಕಿಗಳಲ್ಲಿ ಮಾತ್ರ ಸೂಚಿಸಬೇಕು.
ಮತಪತ್ರವನ್ನು ಒಂದು ಎಂದು ಪರಿಗಣಿಸುವುದಕ್ಕಾಗಿ ಅಭ್ಯರ್ಥಿಗಳ ಪೈಕಿ ಒಬ್ಬನೇ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಅಂಕಿ 1 ನ್ನು  ಗುರುತು ಹಾಕುವ ಮೂಲಕ ಮತದಾರ ಮೊದಲ ಪ್ರಾಶಸ್ತ್ಯವನ್ನು ಸೂಚಿಸುವುದು ಅವಶ್ಯಕವಾಗಿರುತ್ತದೆ. ಎರಡನೇ ಅಥವಾ  ತರುವಾಯದ ಪ್ರಾಶಸ್ತ್ಯವನ್ನು ಸೂಚಿಸಬಹುದಾಗಿದೆ ಅಥವಾ ಸೂಚಿಸದೇ ಇರಬಹುದು ಎಂದು ತಿಳಿಸಿದರು.

ಮತದಾನ ಮಾಡುವ ವಿಧಾನ ಮತ್ತು ತಿರಸ್ಕೃತವಾಗಲು ಕಾರಣ ಇಲ್ಲಿದೆ – 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button