Film & EntertainmentKannada NewsKarnataka NewsLatest

*ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇಮ್ರಾನ್ ಖಾನ್‌ಗೆ ನೋಟಿಸ್*: *ಅ.28ರೊಳಗೆ ಭಾರತ ತೊರೆಯಲು ಸೂಚನೆ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟ ಹಾಗೂ ಆಮಿರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್‌ಗೆ ಮುಂಬೈ ಪೊಲೀಸರು ಭಾರತ ತೊರೆಯುವಂತೆ ನೋಟಿಸ್ ನೀಡಿದ್ದಾರೆ. ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ಟೋಬರ್ 28ರೊಳಗೆ ದೇಶ ತೊರೆಯುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಇಮ್ರಾನ್ ಖಾನ್ ಅಮೆರಿಕದ ಪ್ರಜೆಯಾಗಿದ್ದು, ಭಾರತದಲ್ಲಿ ವಾಸಿಸಲು ಹಾಗೂ ಕೆಲಸ ಮಾಡಲು ಸಾಗರೋತ್ತರ ಭಾರತೀಯ ನಾಗರಿಕ (OCI) ಕಾರ್ಡ್ ಹೊಂದಿದ್ದಾರೆ. ಭಾರತೀಯ ನಾಗರಿಕರಲ್ಲದಿದ್ದರೂ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ವಲಸೆ ನಿಯಮಗಳ ಉಲ್ಲಂಘನೆಯಾಗಿರಬಹುದು ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಪಾಲ್ಗೊಂಡಿದ್ದರು. ಈ ವೇಳೆ ಪೊಲೀಸರು ಅವರನ್ನು ಕೆಲಕಾಲ ವಶಕ್ಕೆ ಪಡೆದಿದ್ದರು. ಬಳಿಕ ವಶದಲ್ಲಿದ್ದ ಸಂದರ್ಭದ ಫೋಟೊವೊಂದನ್ನು ನಟ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

ಈ ಪ್ರತಿಭಟನೆಯಲ್ಲಿ ವಿದೇಶಿ ನಾಗರಿಕರೊಬ್ಬರು ಪಾಲ್ಗೊಂಡಿರುವುದರ ಕುರಿತು ಬಿಜೆಪಿ ಮಾಜಿ ಸಂಸದ ಕಿರೀಟ್ ಸೋಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ಇಮ್ರಾನ್ ಖಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ನಟನಿಗೆ ನೋಟಿಸ್ ಜಾರಿಯಾಗಿದೆ.

ಸದ್ಯ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಸೂಚಿಸಿರುವ ನೋಟಿಸ್ ನಟನ ಮುಂದಿನ ನಡೆ ಕುರಿತು ಕುತೂಹಲ ಮೂಡಿಸಿದೆ. ಈ ಕ್ರಮವನ್ನು ಪ್ರಶ್ನಿಸಿ ಇಮ್ರಾನ್ ಖಾನ್ ಕಾನೂನು ಮಾರ್ಗ ಅನುಸರಿಸುತ್ತಾರೆಯೇ ಎಂಬುದು ಮುಂದಿನ ಬೆಳವಣಿಗೆಯಲ್ಲಿ ಸ್ಪಷ್ಟವಾಗಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button