ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 2006ರ ನಂತರ ನೇಮಕಗೊಂಡಿರುವ ಸರಕಾರಿ ನೌಕರರ (NPS) ಹೋರಾಟ ನಿರ್ಣಾಯಕ ತಿರುವಿನತ್ತ ಸರಿಯುತ್ತಿದೆ.
2006ರ ನಂತರ ನೇಮಕಗೊಂಡಿರುವ ನೌಕರರಿಗೆ ಪಿಂಚಣಿ ಯೋಜನೆ ರದ್ದು ಮಾಡಿ ಎನ್ ಪಿಎಸ್ (National pension scheme) ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಇದು ಮಾರುಕಟ್ಟೆ ರಿಸ್ಕ್ ಒಳಗೊಂಡಿರುವುದರಿಂದ ನಿಶ್ಚಿತ ಪಿಂಚಣಿ ಲೆಕ್ಕ ಹಾಕುವಂತಿಲ್ಲ. ಇದರಿಂದಾಗಿ ಆತಂಕಗೊಂಡಿರುವ ನೌಕರರು ಹಳೆಯ ಪೆನ್ಶನ್ ಯೋಜನೆಯನ್ನೇ ಜಾರಿಗೊಳಿಸಬೇಕೆಂದು ಹೋರಾಟ ನಡೆಸುತ್ತಿದ್ದಾರೆ.
ಹಲವಾರು ಮಾದರಿಯ ಹೋರಾಟ ನಡೆಸಿರುವ ನೌಕರರು ಇದೀಗ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ಇದು ನಿರ್ಣಾಯಕ ಹೋರಾಟದತ್ತ ಸರಿಯುತ್ತಿದೆ.
ಅಕ್ಟೋಬರ್ 2 ರಂದು ಗಾಂಧೀ ಜಯಂತಿಯಂದು ಉಪವಾಸಕ್ಕೆ ಲಕ್ಷ ಲಕ್ಷ ಕುಟುಂಬಗಳು ಕರೆ ನೀಡಿವೆ.
ಕಷ್ಟಪಟ್ಟು ಸರಕಾರಿ ನೌಕರಿ ಹಿಡಿದು ಮನೆಯ ಋಣ ತೀರಿಸುವ ಹೊತ್ತಿಗೆ ನಿವೃತ್ತಿ ಅಂಚಿಗೆ ತಲುಪುವ ಸರಕಾರಿ ನೌಕರನಿಗೆ ವೃದ್ಧಾಪ್ಯದಲ್ಲಿ, ನೆಮ್ಮದಿಯಿಂದ ಬದುಕುವ ಹಕ್ಕನ್ನು ರಾಷ್ಟ್ರೀಯ ಪಿಂಚಣಿ ಯೋಜನೆ 2006 (NPS) ಕಸಿದುಕೊಂಡಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
50 -60 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದ ನೌಕರರು ನಿವೃತ್ತಿ ನಂತರ 500-600 ರೂಪಾಯಿ ವೇತನದಲ್ಲಿ ಬದುಕುವುದು ಹೇಗೆ ಸಾಧ್ಯ? ವೇತನ ಆಯೋಗಗಳು ಸಹಿತ ಸರಕಾರಿ ನೌಕರರಿಗೆ ಗೌರವಯುತವಾಗಿ ಬದುಕಲು ಕನಿಷ್ಠ ಪಿಂಚಣಿ ನಿಗದಿ ಮಾಡಿವೆ. ಹಾಗಾಗಿ ರಾಜ್ಯದ 2 ಲಕ್ಷ 50 ಸಾವಿರಕ್ಕೂ ಹೆಚ್ಚಿನ NPS ಸರ್ಕಾರಿ ನೌಕರರು ಈಗಾಗಲೇ ಸಾಕಷ್ಟು ಮನವಿ, ಹೋರಾಟ ಮಾಡುತ್ತ ಬಂದಿದ್ದರೂ ಅವರ 16 ವರ್ಷಗಳ ಸಹನೆಗೆ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
2006 ನಂತರದ ಎಲ್ಲ MP, MLC, MLA ರಾಜಕಾರಣಿಗಳಿಗೆ ತದನಂತರ ಅವರ ಕುಟುಂಬ ವರ್ಗಕ್ಕೂ ಪಿಂಚಣಿ ಇದೆ. ನಾವು ಯಾವೊಂದು ರಾಜಕಾರಣಿಗಳನ್ನು ವಿರೋಧಿಸಿ ಪಿಂಚಣಿ ಪಡೆಯಲು ಪ್ರಯತ್ನಿಸುತ್ತಿಲ್ಲ, ಅವರಂತೆ ನಮ್ಮ ಕುಟುಂಬಗಳಿಗೆ ಪಿಂಚಣಿ ಸುರಕ್ಷತೆ ನೀಡಿ ಎಂಬ ಆಶಯ ನಮ್ಮದು. ಅವರಿಗಿಂತ ನಾವು ಕೆಲಸಗಾರರಲ್ಲವೇ? ಅವರಿಗಿಂತ ಹೆಚ್ಚಿನ ಕೆಲಸವನ್ನು ಸರ್ಕಾರಿ ಕೆಳದರ್ಜೆಯ ನೌಕರು ಮಾಡುತ್ತಾರೆ. ನಮ್ಮ ಕುಟುಂಬಗಳು ಕುಟುಂಬಗಳಲ್ಲವೇ…? ಎಂದು ಪ್ರಶ್ನಿಸಿದ್ದಾರೆ.
2006ರ ನಂತರ ಜನರಿಂದ ಆಯ್ಕೆಯಾಗುವ ಎಲ್ಲ ರಾಜಕಾರಣಿಗಳಿಗೆ ಪೆನ್ಶನ್ ಇದೆ? ಆದರೆ 30-35 ವರ್ಷದ ನಿರಂತರ ಸೇವೆಗೆ ಭಿಕ್ಷೆ ರೂಪದ ಪಿಂಚಣಿ ನೀಡುವ ಯೋಜನೆಯು ಮಹಾತ್ಮ ಗಾಂಧೀಜಿಯವರ ಕನಸಿನ ರಾಮರಾಜ್ಯದ ವಿರೋಧಿ ಎಂಬ ವಿಚಾರ ಸರ್ಕಾರಗಳಿಗೆ ತಿಳಿಯದೆ ಇರುವುದು ವಿಪರ್ಯಾಸ. ಪಿಂಚಣಿ ಎಂಬುದು ಭಿಕ್ಷೆಯಲ್ಲ, ನಮ್ಮ 30-35 ವರುಷ ದೇಶ ಕಟ್ಟಲು ಶ್ರಮಿಸಿದ ಶ್ರಮಕ್ಕೆ ಸಿಗಬೇಕಾದ ಫಲ. ಅದನ್ನು ನಮ್ಮಿಂದ ಕಿತ್ತುಕೊಂಡ ಘಳಿಗೆ ನಮಗೆ ಸಾವನ್ನು ತಂದಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮನ್ನು, ನಮ್ಮ ಕುಟುಂಬದ ಭವಿಷ್ಯವನ್ನು ರಕ್ಷಿಸಿ. ಈ ಕುರಿತಾಗಿ ಜಾಗೃತಿ ಮೂಡಿಸಲು NPS ನೌಕರರ ಕುಟುಂಬದ ಲಕ್ಷಾಂತರ ಜನ ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಉಪವಾಸ ಮಾಡಲಿದ್ದಾರೆ. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಉಪವಾಸವಾಗಲಿದ್ದು, ಸರಕಾರ ಈ ಕೂಡಲೇ ನೌಕರರ ಶಾಂತಿಯುತ ಕ್ರಾಂತಿಗೆ ಸ್ಪಂದಿಸಲಿ. ಹಳೆಯ/ನಿಶ್ಚಿತ (OPS) ಪಿಂಚಣಿಯನ್ನು ಜಾರಿ ಮಾಡಲಿ ಎಂದು ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ