*ಶುಶ್ರೂಷಕರಿಗೆ ಸಮರ್ಪಣಾ ಭಾವ ಅಗತ್ಯ: ಬಿಮ್ಸ್ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೈದ್ಯಕೀಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶುಶ್ರೂಷಕರು ರೋಗಿಗಳ ಸೇವೆಗಾಗಿ ಸಮರ್ಪಣಾ ಭಾವ ಹೊಂದಿರಬೇಕಾದ ಅಗತ್ಯವಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ಅಶೋಕ ಕುಮಾರ ಶೆಟ್ಟಿ ಹೇಳಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ್ ) ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯದಲ್ಲಿ ನಡೆದ 15 ನೇ ಬ್ಯಾಚ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ದೀಪದಾನ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಣ ನೀಡುವಲ್ಲಿ ಬಿಮ್ಸ್ ನರ್ಸಿಂಗ್ ಕಾಲೇಜು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದು, ಚಿನ್ನದ ಪದಕ ಸಹಿತ ತೇರ್ಗಡೆಯಾದ ಅನೇಕ ವಿದ್ಯಾರ್ಥಿಗಳು ಏಮ್ಸ್ ಸೇರಿದಂತೆ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ಶುಶ್ರೂಷಾ ಸೇವಾ ಕ್ಷೇತ್ರದ ಮಹಾಮಾತೆ ಫ್ಲೋರೆನ್ಸ್ ನೖಟಿಂಗೆಲ್ ಅವರ ನಿಸ್ವಾರ್ಥ ಸೇವಾ ಮನೋಭಾವದ ತ್ಯಾಗಮಯಿ ಜೀವನದ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಯಶಸ್ವಿಯಾಗಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಸಹಾಯಕ ಕುಲಸಚಿವ ಡಾ. ತನ್ವೀರ ಅಹ್ಮದ್ ನಾಯ್ಕೋಡಿ ಮಾತನಾಡಿ, ಸಮಾಜದಲ್ಲಿ ಪವಿತ್ರವಾದ ವೈದ್ಯಕೀಯ ಸೇವೆಗೆ ವಿಶೇಷ ಗೌರವವಿದೆ.
ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಎಲ್ಲರೂ ರೋಗಿಗಳಲ್ಲಿ ದೇವರನ್ನು ಕಾಣಬೇಕು. ಶುಶ್ರೂಷಕರಿಗೆ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಅವಕಾಶಗಳಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಯಶಸ್ಸು ಹೊಂದಬೇಕೆಂದು ಹೇಳಿದರು.
ಶುಶ್ರೂಷಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನಾಮದೇವ ಮಾಳಗಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು.
ಬಿಮ್ಸ ಮುಖ್ಯ ಆಡಳಿತ ಅಧಿಕಾರಿ ರೇಷ್ಮಾ ತಾಳಿಕೋಟಿ, ಮುಖ್ಯ ಹಣಕಾಸು ಅಧಿಕಾರಿ ಶಿಲ್ಪಾ ವಾಲಿ, ಬಿಮ್ಸ್ ಪ್ರಾಚಾರ್ಯ ಡಾ. ಉಮೇಶ ಕುಲಕರ್ಣಿ, ವೈದ್ಯಕೀಯ ಅಧೀಕ್ಷಕ ಡಾ.ಈರಣ್ಣ ಪಲ್ಲೇದ, ಜಿಲ್ಲಾ ಸರ್ಜನ್ ಡಾ.ಜಗದೀಶ ಗಾಣಗಿ, ಆರ್ ಎಂ ಓ ಡಾ.ಸರೋಜಾ ತಿಗಡಿ, ಶುಶ್ರೂಷಾ ಅಧೀಕ್ಷಕಿ ಕಾಂಚನ ಮಾಲಾ ಸೂರ್ಯವಂಶಿ, ಶುಶ್ರೂಷಾ ಶಾಲೆ ಪ್ರಾಚಾರ್ಯ ಡಾ. ಪ್ರಕಾಶ ಕೊಡ್ಲಿ ಅತಿಥಿಗಳಾಗಿದ್ದರು.
ವಿದ್ಯಾರ್ಥಿಗಳಿಗೆ ದೀಪದಾನ ನಂತರ ಪ್ರತಿಜ್ಞಾವಿಧಿ ಭೋಧಿಸಲಾಯಿತು. ಉಪನ್ಯಾಸಕರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

