*ನರ್ಸಿಂಗ್ ಸಿಬ್ಬಂದಿ ನಿರಂತರ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಬೇಕು: ಕರ್ನಲ್ ಎಂ ದಯಾನಂದ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನರ್ಸಿಂಗ ಸಿಬ್ಬಂದಿಗಳು ನಿರಂತರವಾಗಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ವೈದ್ಯಕೀಯ ಹೊಸ ತಂತ್ರಜ್ಞಾನ, ಸಾಧನಗಳು ವಿಧಾನಗಳನ್ನು ಕಲಿಯಬೇಕು. ಕೇವಲ ಸಾಮಾನ್ಯ ಕರ್ತವ್ಯಗಳನ್ನು ಮಾಡುವುದರಿಂದ ಸಾಕಾಗುವುದಿಲ್ಲ. ಉತ್ತಮ ಸಂವಹನ ಕೌಶಲ್ಯ, ರೋಗಿಗಳೊಂದಿಗೆ ಸಹಾನುಭೂತಿ, ಕಾರ್ಯನಿಷ್ಠೆಯಿಂದ ಸೇವೆ ಸಲ್ಲಿಸುವದೇ ಉತ್ತಮ ನರ್ಸ್‌ನ ಗುರುತು ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಹೇಳಿದರು.
ಅಂತರಾಷ್ಟ್ರೀಯ ನರ್ಸಿಂಗ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನರ್ಸಿಂಗ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇತರ ನೀತಿ ರೂಪಿಸುವ ಸಂಸ್ಥೆಗಳು ಸರ್ಕಾರಕ್ಕೆ ಉತ್ತಮ ಸಲಹೆ ನೀಡಬೇಕು. ಕಲಿಕೆಯ ಹಂತದಲ್ಲಿಯೇ ನಾಯಕತ್ವ ತರಬೇತಿ (Leadership Capsule Course) ನೀಡಬೇಕಾಗಿದೆ. ಉತ್ತಮ ನಾಯಕತ್ವ ಗುಣ ಹೊಂದಿರುವ ನರ್ಸಿಂಗ ಸಿಬ್ಬಂದಿಗಳು ಒಳ್ಳೆಯ ರೀತಿಯ ನಿರ್ವಹಕರಾಗಿರುತ್ತಾರೆ. ಅವರು ಆಸ್ಪತ್ರೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬಲ್ಲವರು ಎಂಬ ನಂಬಿಕೆ ಇದೆ. ಆದ್ದರಿಂದ ಕೌಶಲ್ಯವನ್ನು ಕಲಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ನರ್ಸಿಂಗ್ ವೃತ್ತಿಯವರು ತಮ್ಮನ್ನು ತಾವು ತ್ಯಾಗಮಾಡಿಕೊಂಡು ಆರೋಗ್ಯ ಸೇವೆಯಲ್ಲಿ ವೈದ್ಯರ ಸಮಾನ ಪಾಲುದಾರರಾಗಿದ್ದಾರೆ. ಆದರೆ ಇನ್ನೂ ದೇಶದಲ್ಲಿ ನರ್ಸಿಂಗ ಸಿಬ್ಬಂದಿಗಳ ಸ್ಥಾನಮಾನ ಮತ್ತು ಸಶಕ್ತೀಕರಣವು ಸಾಕಷ್ಟು ಬೆಳೆಯಬೇಕಿದೆ. ನರ್ಸಿಂಗ ಸಿಬ್ಬಂದಿಗಳ ಸಶಸ್ತಿಕರಣವು ಜೀವ ಉಳಿಸುವ ಮಹೋನ್ನತ ಕಾರ್ಯ ಮಾಡಬಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಶ ಪವಾರ ಅವರು ಮಾತನಾಡಿ, ಹಳೆಯ ಮಿಷನ್ ಆಸ್ಪತ್ರೆಗಳ ನರ್ಸಿಂಗ ತರಬೇತಿ ಅತ್ಯಂತ ಶ್ರೇಷ್ಠವಾಗಿತ್ತು. “ಈ ಹುಡುಗಿ ಆ ಆಸ್ಪತ್ರೆಯಿಂದ ಬಂದಿದ್ದಾಳೆ” ಎಂದು ಹೇಳಿದರೆ ಸಾಕು, ಅವರ ಕೌಶಲ್ಯದ ಮೇಲೆ ಎಲ್ಲರಿಗೂ ನಂಬಿಕೆ ಇತ್ತು. ಆದ್ದರಿಂದ ನರ್ಸಿಂಗ್ ಕಾಲೇಜುಗಳು ವಿದ್ಯಾರ್ಥಿಗಳಿಗೆ ಬಲವಾದ ಪ್ರಾಯೋಗಿಕ ತರಬೇತಿ ನೀಡಬೇಕು. ಕಟ್ಟುನಿಟ್ಟಿನ ಶಿಸ್ತು ಪಾಲಿಸಬೇಕು. ರೋಗಿಯ ಬಳಿಯಲ್ಲಿ ಸದಾ ಇರುವವರು ನರ್ಸರೇ. ವೈದ್ಯರು ಕೆಲವೇ ನಿಮಿಷಗಳ ಕಾಲ ರೋಗಿಯೊಂದಿಗೆ ಇರುತ್ತಾರೆ. ಆದರೆ ನರ್ಸರು ಪ್ರತಿಕ್ಷಣ ರೋಗಿಯ ನೋವು, ಕುಟುಂಬದ ಪರಿಸ್ಥಿತಿ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ನರ್ಸಿಂಗ್ ವೃತ್ತಿ ಸಂಪೂರ್ಣವಾಗಿ ನಿಸ್ವಾರ್ಥ ಸೇವೆಯಾಗಿದೆ. ನೀವು ನಿಮ್ಮ ಬಗ್ಗೆ ಯೋಚಿಸದೆ ರೋಗಿಗಳ ಆರೈಕೆಗೆ ತೊಡಗಿರುವುದು ಅತ್ಯಂತ ಶ್ಲಾಘನೀಯ ಎಂದರು.
ಆಸ್ಪತ್ರೆಯ ಕ್ಲಿನಿಕಲ್ ಸರ್ವಿಸ್ ಡೈರೆಕ್ಟರ ಡಾ. ಮಾಧವ ಪ್ರಭು ಅವರು ಮಾತನಾಡಿ, ನರ್ಸಗಳ ಕಾರ್ಯ ಅತ್ಯಂತ ಸಮರ್ಪಣಾ ಮನೋಭಾವ ಇರುತ್ತದೆ. ಹಿಂದೆ ನರ್ಸಿಂಗ್ ವಿದ್ಯಾರ್ಥಿಗಳು ಆಸ್ಪತ್ರೆಯ ರೋಗಿಯ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ಈಗ ಮತ್ತೆ ಆ ಪದ್ಧತಿಯನ್ನು ಬಲಪಡಿಸಬೇಕು. ವಿದ್ಯಾರ್ಥಿಗಳಲ್ಲಿ ಆರಂಭದಲ್ಲೇ ಕರುಣೆ, ಸೇವಾಭಾವ ಮತ್ತು ಹೊಣೆಗಾರಿಕೆ ಬೆಳೆಸಬೇಕು ಎಂದು ತಿಳಿಸಿದರು.
ಡಾ. ಎಂ ವಿ ಜಾಲಿ ಮಾತನಾಡಿದರು. ವೇದಿಕೆ ಮೇಲೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ನೀರಿಕ್ಷಕರಾದ ಡಾ. ಆರಿಫ್ ಮಾಲ್ದಾರ, ನರ್ಸಿಂಗ ಸೂಪರಿಟೆಂಡೆಂಟ ಶ್ರೇಯಾ ಹೆರೆಕರ, ನರ್ಸಿಂಗ ಮಹಾವಿದ್ಯಾಲಯದ ಪ್ರಾಚಾರ್ಯ ವಿರೇಶ ನಂದಗಾವಿ ಉಪಸ್ಥಿತರಿದ್ದರು. .ಸಿಲ್ವಿ ಮುಧೋಳ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ರೋಗಿಗಳ ಆರೈಕೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನರ್ಸಿಂಗ ಸಿಬ್ಬಂದಿಗಳನ್ನು ಸತ್ಕರಿಸಲಾಯಿತು. ವೀಣಾ ಅರುನಾಚಲಮಠ ಹಾಗೂ ಸುಪ್ರಿತಾ ಭಟ್ಕರ ನಿರೂಪಿಸಿದರು.



