
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಠಿಕಾಂಶ ನೀಡುವ ಚಾಕಲೆಟ್‌ಗಳನ್ನು ವಿತರಿಸಲಾಗುವುದು. ಆರಂಭದಲ್ಲಿ ಬೆಳಗಾವಿ, ಶಿವಮೊಗ್ಗ, ವಿಜಯಪುರ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿತರಿಸಲಾಗುವುದು. ನಂತರ ಉಳಿದ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಪೌಷ್ಠಿಕ ಮಕ್ಕಳಿಗೆ ಚಾಕಲೆಟ್ ವಿತರಣಾ ಕಾರ್ಯಕ್ರಮಕ್ಕೆ ಸಂಸದ ಅಣ್ಣಾಸಾಹೇಬ ಜೊಲ್ಲೆಯವರೊಂದಿಗೆ ಇಲ್ಲಿನ ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
’ಕೆಲ ದೇಶಗಳಲ್ಲಿ ಆರ್ಥಿಕತೆಯ ವಿಚಾರದಿಂದಾಗಿ ಲಾಕ್‌ಡೌನ್ ಮಾಡಿಲ್ಲ. ಅಲ್ಲಿ ಲಕ್ಷಲಕ್ಷ ಜನರು ಸಾವಿನೊಂದಿಗೆ ಸೆಣಸಾಡುತ್ತಿದ್ದಾರೆ. ಸಾವಿರಾರು ಜನರನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಲಾಕ್‌ಡೌನ್ ಇನ್ನೂವರೆಗೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರ ನಿಯೋಜನಬದ್ಧವಾದ ಲಾಕ್‌ಡೌನ್‌ದಿಂದಾಗಿ ಇಲ್ಲಿನ ಸಾವಿನ ಸಂಖ್ಯೆ ಕಡಿಮೆ ಇದೆ’ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ’ಕರೊನಾ ವಾರಿಯರ್ಸ್‌ರಾಗಿ ಅವಿರತವಾಗಿ ಶ್ರಮಿಸುತ್ತಿರುವ ಪೊಲೀಸ್, ಆರೋಗ್ಯ, ಕಂದಾಯ ಇಲಾಖೆಯ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಮೆಚ್ಚುವಂತಹದ್ದು. ಶೇ.೯೫ರಷ್ಟು ಜನರು ಲಾಕ್‌ಡೌನ್ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಆದರೆ ಶೇ.೫ರಷ್ಟು ಜನರಿಗಾಗಿ ಈ ವಾರಿಯರ್ಸ್ ಹರಸಾಹಸ ಪಡುತ್ತಿದ್ದಾರೆ. ಈ ಕಾರ್ಯವನ್ನು ದೇಶಸೇವೆ ಎಂದು ತಿಳಿದು ತಮ್ಮ ಪ್ರಾಣವನ್ನೆ ಮುಡಿಪಾಗಿಟ್ಟು ವಾರಿಯರ್ಸ್‌ರು ಜನರ ಜೀವ ಕಾಪಾಡುತ್ತಿದ್ದಾರೆ. ಇದರೊಂದಿಗೆ ಜನರ ಆರೋಗ್ಯ, ಹಸಿವು ಕುರಿತು ಹಗಲುರಾತ್ರಿ ಶ್ರಮಿಸುತ್ತಿರುವ ಮಹಾವೀರ ಆರೋಗ್ಯ ಕೇಂದ್ರದ ಕಾರ್ಯವೂ ಶ್ಲಾಘನೀಯ. ಎಲ್ಲರೂ ಬರಿಗೈಯಲ್ಲಿ ಬರುತ್ತೇವೆ ಮತ್ತು ಬರಿಗೈಯಲ್ಲಿ ಹೋಗುತ್ತೇವೆ. ಆದರೆ ಜೀವನದಲ್ಲಿ ಮಹಾವೀರ ಆರೋಗ್ಯ ಸೇವಾ ಕೇಂದ್ರವು ನಡೆಸಿದ ಕಾರ್ಯದಂತೆ ಕನಿಷ್ಠ ಒಂದು ದಿನವಾದರೂ ಸಮಾಜಕ್ಕಾಗಿ ಏನಾದರೂ ಮಾಡಬೇಕು’ ಎಂದರು.
ಸಿಪಿಐ ಸಂತೋಷ ಸತ್ಯನಾಯಿಕ್ ಮಾತನಾಡಿ ’ಜನರು ಪೊಲೀಸರ ಕುರಿತು ಧನಾತ್ಮಕ ಚಿಂತನೆ ನಡೆಸುತ್ತಿದ್ದು ಸಂತೋಷವೆನಿಸುತ್ತಿದೆ. ಕರೊನಾ ವೈರಸ್ ವಿರುದ್ಧ ಹೋರಾಡಲು ನಮಗೆ ಸ್ಫೂರ್ತಿ ತುಂಬಿದವರು ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆಯವರು. ಕೊಗನೊಳ್ಳಿ ಚೆಕ್‌ಪೋಸ್ಟ್ ಸೇರಿದಂತೆ ವಿವಿಧೆಡೆ ಕೋವಿಡ್-೧೯ ಶಂಕಿತರಿರುವ ಕಡೆ ಬರಬೇಡಿ ಎಂದರೂ ಇಬ್ಬರೂ ಬಂದು ಪರಿಶೀಲನೆ ನಡೆಸಿ ವಾರಿಯರ್ಸ್‌ರನ್ನು ಬೆನ್ನುತಟ್ಟುವ ಕಾರ್ಯ ಮಾಡುತ್ತ ಬಂದಿದ್ದಾರೆ. ನಮಗೆ ಎದುರಾಗುವ ಹಲವಾರು ಸಮಸ್ಯೆಗಳಿಗೆ ಇಬ್ಬರೂ ಸ್ಥಳದಲ್ಲೆ ಸ್ಪಂದಿಸಿದ್ದಾರೆ. ಕೆಲ ಸಮಸ್ಯೆಗಳಿಗೆ ನೇರವಾಗಿ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಸ್ಥಳದಲ್ಲೆ ಪರಿಹರಿಸಲು ಸಹಕರಿಸಿದ್ದಾರೆ’ ಎಂದರು.
ಸ್ಥಳೀಯ ನಗರಸಭೆ ಪೌರಾಯುಕ್ತ ಮಹಾವೀರ ಬೋರನ್ನವರ, ಸಾಹಿಲ್ ಶಹಾ, ಬಂಡಾ ಘೋರ್ಪಡೆ, ಮತ್ತಿತರರು ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್ ಚಂಧ್ರಕಾಂತ ಕೋಠಿವಾಲೆ, ಸಂಚಾಲಕ ಪಪ್ಪು ಪಾಟೀಲ, ರಾಂಗೊಂಡಾ ಪಾಟೀಲ, ಪ್ರಕಾಶ ಶಿಂಧೆ, ಮಹಾವೀರ ಆರೋಗ್ಯ ಕೇಂದ್ರದ ಅಧ್ಯಕ್ಷ ಪ್ರತಿಕ ಶಹಾ, ಶಾರದಾ ಜೋಶಿ, ತಹಶೀಲ್ದಾರ ಪ್ರಕಾಶ ಗಾಯಕವಾಡ, ಪ್ರವೀನ ಶಹಾ, ಜಿ.ಪಂ. ಸದಸ್ಯ ಸಿದ್ದು ನರಾಟೆ, ಡಾ. ಶ್ರೀಕಾಂತ ಶಿನ್ನೊಳ್ಳಿ, ಡಾ. ಸೀಮಾ ಗುಂಜಾಳ, ಸಿಡಿಪಿಓ ಸುಮಿತ್ರಾ, ಮೊದಲಾದವರು ಉಪಸ್ಥಿತರಿದ್ದರು.
ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹದಡಿಯಲ್ಲಿ ಸ್ಥಳೀಯ ನೋಂದಾಯಿತ ಅಸಂಘಟಿತ ೨.೫ ಸಾವಿರ ಕಾರ್ಮಿಕರಿಗೆ ಆಹಾರದ ಕಿಟ್‌ಗಳು, ತಾಲ್ಲೂಕಿನ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡೆಗಳು ಹಾಗೂ ಸ್ಥಳೀಯ ಮಹಾವೀರ ಆರೋಗ್ಯ ಕೇಂದ್ರದಿಂದ ಅರ್ಸೆನಿಕ್ ಅಲ್ಬಮ್-೩೦ ಹೋಮಿಯೋಪಥಿ ಔಷಧಿಗಳ ವಿತರಣಾ ಕಾರ್ಯಕ್ರಮಕ್ಕೂ ಸಚಿವೆ ಹಾಗೂ ಸಂಸದ ಜೊಲ್ಲೆಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಜೊಲ್ಲೆ ಕರೊನಾ ವೈರಸ್ ವಿರುದ್ಧ ಹೋರಾಡಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸ್ಥಳೀಯ ಮಹಾವೀರ ಆರೋಗ್ಯ ಕೇಂದ್ರದಿಂದ ಸುಮಾರು ಒಂದು ಲಕ್ಷ ಜನರಿಗೆ ಅರ್ಸೆನಿಕ್ ಅಲ್ಬಂ-೩೦ ಹೋಮಿಯೋಪಥಿ ಮಾತ್ರೆಗಳನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ವಿತರಿಸುವರು. ಸರಕಾರದೊಂದಿಗೆ ಸಮಾನವಾದ ರೀತಿಯಲ್ಲಿ ಮಹಾವೀರ ಆರೋಗ್ಯ ಕೇಂದ್ರವು ಇಲ್ಲಿನ ಜನರ ಆರೋಗ್ಯ ಕಾಪಾಡುತ್ತ ಬಡವರ ಹಸಿವು ನೀಗಿಸುತ್ತಿದೆ. ೫೦ ಸಾವಿರಕ್ಕೂ ಅಧಿಕ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಿದ ಅದು ನಿತ್ಯ ಸಾವಿರಾರು ಜನರಿಗೆ ಊಟ ಹಾಕುತ್ತಿದೆ ಎಂದು ಶ್ಲಾಘಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ