ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 24 ಜನರಿಗೆ ಸುಳ್ಳು ಪ್ರಮಾಣ ಪತ್ರ ನೀಡಿದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಗೋಕಾಕ ಮತ್ತು ಮೂಡಲಗಿ ತಾಲೂಕಿನ 24 ಜನರು ಪರಿಶಿಷ್ಟ ಜಾತಿಯ ಬೇಡ ಜಂಗಮ ಪ್ರಮಾಣ ಪತ್ರ ಪಡೆದುಕೊಂಡು ಪರಿಶಿಷ್ಟ ಜಾಯಿತವರಿಗೆ ಹಾಗೂ ಸರಕಾರಕ್ಕೆ ವಂಚಿಸಿದ್ದರು. ಈ ಸಂಬಂಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಿದೆ.
ಮೂಲತಃ ಹಿಂದೂ ಲಿಂಗಾಯತ ಜಂಗಮ ಜಾತಿಗೆ ಸೇರಿದ ಇವರೆಲ್ಲ ಗೋಕಾಕ ತಹಸಿಲ್ದಾರ, ಉಪತಹಸಿಲ್ದಾರ ಗೋಕಾಕ ಮತ್ತು ಮೂಡಲಗಿ, ಕಂದಾಯ ನಿರೀಕ್ಷಕ ಅರಬಾವಿ, ಗ್ರಾಮ ಲೆಕ್ಕಾಧಿಕಾರಿ ಮೂಡಲಗಿ ಇವರೊಂದಿಗೆ ಶಾಮೀಲಾಗಿ ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕಾಗಿ ಬೇಡ ಜಂಗಮ ಸುಳ್ಳು ಪ್ರಮಾಣ ಪತ್ರ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಗೋಕಾಕ ತಹಸಿಲ್ದಾರ ಗ್ರೇಡ್ 2 ಎಸ್.ಕೆ.ಕುಲಕರ್ಣಿ, ಅರಬಾವಿ ಕಂದಾಯ ನಿರೀಕ್ಷಕ ರುದ್ರಪ್ಪ ನೇಸರಗಿ, ಮೂಡಲಗಿ ಗ್ರಾಮ ಲೆಕ್ಕಾಧಿಕಾರಿ ಅಲ್ಲಪ್ಪ ಬಾಗವಾನ ಇವರು ಸ್ಥಾನಕ ಚೌಕಾಶಿ ನಡೆಸದೆ, ಸರಿಯಾಗಿ ಪರಿಶೀಲನೆ ಮಾಡದೆ ನಿಯಮಗಳನ್ನು ಪಾಲಿಸದೆ ಜಾತಿ ಪ್ರಮಾಣ ಪತ್ರ ನೀಡಿದ್ದಾರೆಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿಚಾರಣೆ ಬಾಕಿ ಇಟ್ಟು ರುದ್ರಪ್ಪ ನೇಸರಗಿ ಹಾಗೂ ಅಲ್ಲಪ್ಪ ಬಾಗವಾನ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ