ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಆತ್ಮಹತ್ಯೆಯ ಉದ್ದೇಶದಿಂದ ನದಿಗೆ ಹಾರಿದ್ದ ವೃದ್ಧೆಯೋರ್ವಳ ಪ್ರಾಣವನ್ನು ಪಾರಿಶ್ವಾಡ ಗ್ರಾಮದ ಯುವಕ ಇಜಾಜ್ ಮಾರಿಹಾಳ ಎಂಬಾತ ರಕ್ಷಿಸಿ ಮಾನವೀಯತೆ ಮೆರೆದ ಘಟನೆ ತಾಲೂಕಿನ ಪಾರಿಶ್ವಾಡ ಗ್ರಾಮದ ಹೊರವಲಯದ ಮಲಪ್ರಭಾ ನದಿತೀರದಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಬೆಳಗಾವಿ ತಾಲೂಕಿನ ಬಸಾಪುರ ಗ್ರಾಮದ ವೃದ್ಧೆ ಬಾಳವ್ವ ನಾವಲಗಿ ತಮ್ಮ ಅನಾರೋಗ್ಯ ಹಾಗೂ ಇತರೆ ಕೆಲ ಕೌಟುಂಬಕ ಕಾರಣಗಳಿಂದಾಗಿ ಮನನೊಂದು ಆತ್ಮಹತ್ಯೆಯ ನಿರ್ಧಾರ ತಳೆದಿದ್ದರು.
ಗುರುವಾರ ತಮ್ಮೂರಿನಿಂದ ಪಾರಿಶ್ವಾಡಕ್ಕೆ ಆಗಮಿಸಿದ್ದ ಅವರು ಗ್ರಾಮದ ಹೊರವಲಯದ ಮಲಪ್ರಭಾ ನದಿಗೆ ತೆರಳಿ ನದಿಯ ಸೇತುವೆ ಮೇಲಿಂದ ನದಿಗೆ ಧುಮುಕಿದ್ದರು.
ಇದೇ ಸಂದರ್ಭದಲ್ಲಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಜಾಜ್ ವೃದ್ಧೆ ನದಿಗೆ ಹಾರುತ್ತಿದ್ದುದನ್ನು ಗಮನಿಸಿದ್ದರು. ಕೂಡಲೇ ಅವರು ನದಿಗೆ ಧುಮುಕಿ ವೃದ್ಧೆಯನ್ನು ರಕ್ಷಿಸಿ ಹೊರತಂದಿದ್ದಾರೆ. ಬಳಿಕ ಸ್ಥಳೀಯರ ನೆರವು ಪಡೆದು ವೃದ್ಧೆಯನ್ನು ಪಾರಿಶ್ವಾಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದು, ಸಧ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆತ್ಮಹತ್ಯೆಯ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ವೃದ್ಧೆಯ ಪ್ರಾಣ ರಕ್ಷಣೆಗೆ ಜೀವದ ಹಂಗು ತೊರೆದು ಶ್ರಮಿಸಿದ ಇಜಾಜ್ ಅವರ ಧೈರ್ಯ ಮತ್ತು ಸಾಹಸವನ್ನು ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿ ಮುಖಂಡ ವಿಠ್ಠಲ ಹಲಗೇಕರ, ಆಮ್ ಆದ್ಮಿ ಮುಖಂಡ ದಶರಥ ಬನೋಶಿ ಸೇರಿದಂತೆ ತಾಲೂಕಿನ ನಾಗರಿಕರು ಶ್ಲಾಘಿಸಿದ್ದಾರೆ.
https://pragati.taskdun.com/belagavi-news/belagavi-police-alert-to-public-regarding-5g/
https://pragati.taskdun.com/latest/belgaum-horrible-murder-of-two-youths/
https://pragati.taskdun.com/latest/belagavimothersonjump-malaprabha-river/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ