Kannada NewsKarnataka News

ಸಂಕೇಶ್ವರ ಮಹಿಳೆ ಶೂಟ್ ಔಟ್ ಪ್ರಕರಣ , ಪುರಸಭೆ ಸದಸ್ಯನ ಬಂಧನ

ಪ್ರಗತಿ ವಾಹಿನಿ ಸುದ್ದಿ ಸಂಕೇಶ್ವರ – ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಒಂಟಿ ಮಹಿಳೆಯನ್ನು ಶೂಟ್ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂರು ದಿನಗಳ ಹಿಂದೆ ನಡೆದ ಒಂಟಿ ಮಹಿಳೆಯ ಕೊಲೆ ಪ್ರಕರಣವನ್ನು ಪೋಲಿಸರು ಬೇಧಿಸಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಸಂಕೇಶ್ವರ ಪುರಸಭೆಯ ಸದಸ್ಯ ಉಮೇಶ ಕಾಂಬ್ಳೆ ಬಂಧಿತ ಆರೋಪಿ. ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
   ಜ. 16 ರಂದು ಪಟ್ಟಣದ ಶೈಲಜಾ ಸುಬೇದಾರ್ ( 56 ) ಎಂಬ ಮಹಿಳೆಯನ್ನು ಪಿಸ್ತೂಲಿನಿಂದ ಶೂಟ್ ಮಾಡಿ ಕೊಲೆ ಮಾಡಲಾಗಿತ್ತು.
ಕೊಲೆಯಾದ ಮಹಿಳೆ ಶೈಲಜಾ ಅವರು ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಅಪಾರ ಹಣವನ್ನು ಬಡ್ಡಿಗೆ ನೀಡುತ್ತಿದ್ದು  ಆರೋಪಿ ಉಮೇಶ ಸಹ 25 ಲಕ್ಷ ರೂ. ಗೂ ಹೆಚ್ಚಿನ  ಹಣವನ್ನು ಸಾಲವಾಗಿ ಪಡೆದಿದ್ದ. ಮಹಿಳೆ ಹಣವನ್ನು ಬಡ್ಡಿಗೆ ನೀಡುತ್ತಿದ್ದ ವ್ಯವಹಾರ ಕೊಲೆಗೆ ಕಾರಣ. ಮಹಾರಾಷ್ಟ್ರದ ಪುಣಾದಿಂದ ಕಂಟ್ರಿ ಪಿಸ್ತೂಲ್ ಖರೀದಿಸಿ ತಂದು ಶೂಟ್ ಮಾಡಿ ಕೊಲೆ ಮಾಡಿದ್ದು, ಪೊಲೀಸರು ಪಿಸ್ತೂಲ್ ಹಾಗೂ ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
  ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ ಹಾಗೂ ಎಡಿಷನಲ್ ಎಸ್ ಪಿ ಮಹಾಲಿಂಗ ನಂದಗಾವಿ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ರಮೇಶ ಛಾಯಗೋಳ , ಪಿಎಸ್ ಐ ಗಣಪತಿ ಕಂಗನೋಳಿ ಅವರ ತಂಡ ಪ್ರಕರಣದ ತನಿಖೆ ನಡೆಸಿದೆ.

 

25 ಲಕ್ಷ ರೂ. ಪಡೆದುಕೊಂಡಿದ್ದ ಉಮೇಶ ಕಾಂಬ್ಳೆ ಹಣ ಹಿಂತಿರುಗಿಸದ್ದರಿಂದ ಪುರಸಭೆಗೆ ಬಂದು ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಮಹಿಳೆ ಬೆದರಿಕೆ ಹಾಕಿದ್ದಳು. ಈ ಹಿನ್ನೆಲೆಯಲ್ಲಿ ಆತ ಕೊಲೆಗೆ ಮುಂದಾದ. ಪ್ರಕರಣದಲ್ಲಿ ಇನ್ನೂ ಇಬ್ಬರನ್ನು ಬಂಧಿಸಬೇಕಿದೆ

-ಲಕ್ಷ್ಮಣ ನಿಂಬರಗಿ, ಎಸ್ಪಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button